Ceasefire: ಯುದ್ಧ ವಿರಾಮದ ಮಾತುಕತೆಗೆ ಇದೇ ಕಾರಣ: ಸಿದ್ದರಾಮಯ್ಯ ಹೇಳಿದ್ದೇನು?
ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಅಘೋಷಿತ ಯುದ್ಧಕ್ಕೆ ಕದನ ವಿರಾಮ ಘೋಷಿಸಲಾಗಿದೆ. ಎರಡೂ ದೇಶಗಳು ಪರಸ್ಪರ ಒಪ್ಪಿಗೆ ಮೇರೆಗೆ ಶನಿವಾರದಿಂದಲೇ ಎಲ್ಲ ರೀತಿಯ ದಾಳಿಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿವೆ. ಈ ಸಂಬಂಧ ಭಾರತ-ಪಾಕ್ ನಡುವೆ ಮೇ 12ರಂದು ಮಾತುಕತೆ ನಡೆಯಲಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಎತ್ತಿಹಿಡಿಯಲು ಜೀವನ ಹಂಗು ತೊರೆದು ಹೋರಾಡಿದ ನಮ್ಮ ದೇಶದ ಸೈನಿಕರಿಗೊಂದು ಸಲಾಂ. ಈ ಹೊತ್ತಿನಲ್ಲಿ ಇಡೀ ದೇಶ ನಮ್ಮ ಸೈನಿಕರ ಜೊತೆ ನಿಂತಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನವೇ ಖುದ್ದಾಗಿ ಭಾರತದ ಜೊತೆ ಮಾತುಕತೆ ನಡೆಸಿದ ಬಳಿಕವಷ್ಟೇ ಎರಡು ದೇಶಗಳು ಯುದ್ಧ ವಿರಾಮದ ನಿರ್ಣಯಕ್ಕೆ ಬಂದಿವೆ. ನಮ್ಮ ಹೆಮ್ಮೆಯ ಸೈನಿಕರು ಆಪರೇಷನ್ ಸಿಂಧೂರ್ ಮೂಲಕ ಭಯೋತ್ಪಾದಕರು ಮತ್ತು ಪಾಕಿಸ್ತಾನಕ್ಕೆ ನೀಡಿರುವ ಪ್ರತ್ಯುತ್ತರವೇ ಈ ಯುದ್ಧವಿರಾಮದ ಮಾತುಕತೆಗೆ ಕಾರಣ. ಪಾಕಿಸ್ತಾನಕ್ಕೆ ಇದು ಪಾಠವೂ ಹೌದು, ಎಚ್ಚರಿಕೆಯೂ ಹೌದು. ಭಾರತೀಯನಾಗಿ ನನಗಿದು ಹೆಮ್ಮೆಯ ಕ್ಷಣ ಎಂದಿದ್ದಾರೆ.

ಭಾರತ ಪಾಕಿಸ್ತಾನ ನಡುವೆ ಒಂದು ರೀತಿ ಅಘೋಷಿತ ಯುದ್ಧವೇ ನಡೆಯುತ್ತಿತ್ತು. ಬಾಲ ಬಿಚ್ಚಿದ ಪಾಕಿಸ್ತಾನಕ್ಕೆ ಭಾರತ ತಕ್ಕ ಉತ್ತರ ನೀಡುತ್ತಾ ಬಂದಿದೆ. ಬಳಿಕ ಬಾಲ ಮುದುರಿಕೊಂಡ ಪಾಕ್ ಕದನ ವಿರಾಮಕ್ಕೆ ಅಂಗಲಾಚಿದೆ. ಕದನ ವಿರಾಮದ ಬಗ್ಗೆ ಭಾರತ ಸರ್ಕಾರವು ಖಚಿತ ಪಡಿಸಿದ್ದು, ಭಾರತ ಮತ್ತು ಪಾಕಿಸ್ತಾನ ಪರಸ್ಪರ ಒಪ್ಪಿಗೆ ಮೇರೆಗೆ ಶನಿವಾರ ಮಧ್ಯಾಹ್ನ 5ರಿಂದ ಎಲ್ಲಾ ರೀತಿಯ ದಾಳಿಗಳನ್ನು ಸ್ಥಗಿತಗೊಳಿಸುತ್ತಿದ್ದೇವೆ. ಹಾಗೂ ಈ ಸಂಬಂಧ ಎರಡು ದೇಶಗಳ ನಡುವೆ ಮೇ 12ರಂದು ಸೋಮವಾರ ಮಹತ್ವದ ಮಾತುಕತೆ ಇದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.
ಶನಿವಾರ ಮಧ್ಯಾಹ್ನ ಪಾಕಿಸ್ತಾನ ಸೇನೆಯ ಮಹಾನಿರ್ದೇಶಕರು ಭಾರತ ಸೇನೆಯ ಮಹಾನಿರ್ದೇಶಕರಿಗೆ ಕರೆ ಮಾಡುವ ಮೂಲಕ ಎಲ್ಲ ರೀತಿಯ ದಾಳಿ, ಸೇನಾ ಕಾರ್ಯಾಚರಣೆಯನ್ನು ತಕ್ಷಣದಿಂದಲೇ ನಿಲ್ಲಿಸಲು ಒಪ್ಪಿಕೊಂಡಿದ್ದಾರೆ. ಹಾಗಾಗಿ ಸಂಜೆ 5 ಗಂಟೆಯಿಂದಲೇ ಭೂಮಿ, ವಾಯು ಮತ್ತು ಸಾಗರದ ಮೂಲಕ ಯಾವುದೇ ರೀತಿಯ ದಾಳಿ ನಡೆಸದಿರಲು ಎರಡು ದೇಶಗಳು ಒಪ್ಪಿಕೊಂಡಿವೆ ಎಂದು ವಿಕ್ರಮ್ ಮಿಸ್ರಿ ಮಾಹಿತಿ ಮಾಹಿತಿ ನೀಡಿದ್ದಾರೆ.

ಕದನ ವಿರಾಮದ ಬಳಿಕವೂ ಪಾಕಿಸ್ತಾನ ಮತ್ತೆ ನರಿಬುದ್ಧಿ ತೋರಿದೆ ಎಂಬ ಆರೋಪ ಕೇಳಿಬಂದಿದೆ. ತಾನೇ ಬೇಡಿಕೊಂಡು ಮತ್ತೆ ತಾನೇ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ ಎಂದು ವರದಿಯಾಗಿದೆ. ಈ ಉಲ್ಲಂಘನೆಗಳನ್ನು ಪರಿಹರಿಸಲು ಮತ್ತು ಪರಿಸ್ಥಿತಿಯನ್ನು ಗಂಭೀರತೆ ಮತ್ತು ಜವಾಬ್ದಾರಿಯಿಂದ ನಿಭಾಯಿಸಲು ಭಾರತ ಪಾಕಿಸ್ತಾನಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಿದೆ.
ಅಂತರರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿ ಗಡಿ ಉಲ್ಲಂಘನೆಯ ಪುನರಾವರ್ತನೆಯ ಯಾವುದೇ ನಿದರ್ಶನಗಳನ್ನು ಬಲವಾಗಿ ಎದುರಿಸಲು ಭಾರತದ ಸಶಸ್ತ್ರ ಪಡೆಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಕಳೆದ ಕೆಲವು ಗಂಟೆಗಳಿಂದ, ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವೆ ಆರಂಭದಲ್ಲಿ ಮಾಡಿಕೊಂಡ ತಿಳುವಳಿಕೆಯ ಉಲ್ಲಂಘನೆಗಳು ಪದೇ ಪದೇ ನಡೆಯುತ್ತಿವೆ. ಇದು ಇಂದು ಮುಂಜಾನೆ ಮಾಡಿಕೊಂಡ ತಿಳುವಳಿಕೆಯ ಉಲ್ಲಂಘನೆಯಾಗಿದೆ. ಈ ಉಲ್ಲಂಘನೆಗಳಿಗೆ ಸಶಸ್ತ್ರ ಪಡೆಗಳು ಸಮರ್ಪಕ ಮತ್ತು ಸೂಕ್ತ ಪ್ರತಿಕ್ರಿಯೆಯನ್ನು ನೀಡುತ್ತಿವೆ ಮತ್ತು ನಾವು ಈ ಉಲ್ಲಂಘನೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ ಎಂದೂ ವಿಕ್ರಮ್ ಮಿಸ್ರಿ ಹೇಳಿದರು.
ಕದನ ವಿರಾಮದ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಜೈ ಶಂಕರ್, ಭಾರತ ಮತ್ತು ಪಾಕಿಸ್ತಾನ ಶನಿವಾರದಿಂದ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆ ನಿಲ್ಲಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದು, ಭಾರತವು ಭಯೋತ್ಪಾದನೆಯ ವಿರುದ್ಧ ರಾಜಿಯಾಗುವ ಮಾತೇ ಇಲ್ಲ. ಈ ವಿಚಾರದಲ್ಲಿ ತನ್ನ ದೃಢ ನಿಲುವನ್ನು ನಿರಂತರವಾಗಿ ಕಾಯ್ದುಕೊಂಡಿದೆ ಎಂದಿದ್ದಾರೆ.












Click it and Unblock the Notifications