ಬಿಜೆಪಿ ಆಪರೇಷನ್ ಕಮಲದ ಕೆಸರಲ್ಲಿ ಉರುಳಾಡುತ್ತಿದೆ : ಸಿದ್ದರಾಮಯ್ಯ
ಬೆಂಗಳೂರು, ಫೆಬ್ರವರಿ 07 : 'ಬಿಜೆಪಿ ಈಗಲೂ ಆಪರೇಷನ್ ಕಮಲದ ಕೆಸರಲ್ಲಿ ಉರುಳಾಡುತ್ತಿದೆ. ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೇಲೆ ಅವರಿಗೆ ನಂಬಿಕೆ ಇಲ್ಲ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಗುರುವಾರ @siddaramaiah ಟ್ವಿಟರ್ ಖಾತೆ ಮೂಲಕ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಹೇಳಿರುವ ಅವರು, ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಭಾಷಣ ಮಾಡುವಾಗ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿ, ಗದ್ದಲ ಉಂಟು ಮಾಡಿದ್ದರು. ಗುರುವಾರವೂ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಅಡ್ಡಿ ಪಡಿಸಿದ್ದರು.
ಬಿಜೆಪಿ ಗದ್ದಲದ ಕಾರಣದಿಂದಾಗಿ ಎರಡು ದಿನದ ಕಾಲ ಕಲಾಪಕ್ಕೆ ಅಡ್ಡಿಯಾಗಿದೆ. ಶುಕ್ರವಾರ ಹಣಕಾಸು ಸಚಿವರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ 2019-20ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಬಿಜೆಪಿ ಗದ್ದಲ ಮುಂದುವರೆಸಲಿದೆಯೇ? ಎಂದು ಕಾದು ನೋಡಬೇಕು...
|
ಆಪರೇಷನ್ ಕಮಲ
2008ರಲ್ಲಿ ಬಳ್ಳಾರಿಯ ಗಣಿಲೂಟಿಕೋರರಾದ ರೆಡ್ಡಿಗಳ ಅಕ್ರಮ ಹಣದ ಕೆಸರಲ್ಲಿ ಹುಟ್ಟಿಕೊಂಡದ್ದೇ ಆಪರೇಷನ್ ಕಮಲ. ಬಿಜೆಪಿ ಈಗಲೂ ಅದೇ ಕೆಸರಲ್ಲಿ ಉರುಳಾಡುತ್ತಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ಸಂವಿಧಾನವನ್ನು ಒಪ್ಪಿಲ್ಲ
ಭಾರತದ ಸಂವಿಧಾನವನ್ನು ಎಂದೂ ಒಪ್ಪದ ಆರ್ ಎಸ್ ಎಸ್‌ನ ಕೈಗೂಸಾಗಿರುವ ಬಿಜೆಪಿಗೆ ಕೂಡಾ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ.
|
ಅವಿಶ್ವಾಸ ನಿರ್ಣಯ ಮಂಡಿಸಿ
ಬಿಜೆಪಿ ನಾಯಕರು ಮೈತ್ರಿ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ನಂಬಿದ್ದರೆ ಅವಿಶ್ವಾಸ ನಿರ್ಣಯವನ್ನು ಮಂಡನೆ ಮಾಡಲಿ.
|
ಶುಕ್ರವಾರ ಸಿಎಲ್‌ಪಿ ಸಭೆ
ನಾಳೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ. ಪಕ್ಷದ ಎಲ್ಲ ಶಾಸಕರು ಹಾಜರಾಗುತ್ತಾರೆ ಎಂಬ ಆತ್ಮ ವಿಶ್ವಾಸ ನನಗಿದೆ.












Click it and Unblock the Notifications