Karnataka Election: ಆಪರೇಷನ್ ಕಮಲ ಭೀತಿ: ಕಾಂಗ್ರೆಸ್ ನಾಯಕರು ಅಲರ್ಟ್; ಸಿದ್ದು-ಸುರ್ಜೆವಾಲಾ ಭೇಟಿ
ಕರ್ನಾಟಕ ವಿಧಾನಸಭಾ ಫಲಿತಾಂಶಕ್ಕೆ ಇನ್ನೂ ಎರಡು ದಿನ ಇರುವ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಚುನಾವಣೆ ಮುಗಿದ ಬಳಿಕ ಯಾವ ಪಕ್ಷದ ನಾಯಕರಿಗೂ ರಿಲ್ಯಾಕ್ಸ್ ಮಾಡಲು ಕೂಡ ಸಮಯ ಸಿಕ್ಕಿಲ್ಲ, ಹಲವು ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ಫಲಿತಾಂಶ ಎಂದಿದ್ದು, ಕಾಂಗ್ರೆಸ್ ಪಾಳಯದಲ್ಲಿ ಆತಂಕ ಶುರುವಾಗಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದರೂ, ಒಳಗೊಳಗೆ ಆತಂಕವಂತೂ ಇದ್ದೇ ಇರುತ್ತದೆ. ಕಾಂಗ್ರೆಸ್ ಬಿಜೆಪಿ ನಡುವೆ ಸಮಬಲದ ಹೋರಾಟ ನಡೆದರೆ ಬಿಜೆಪಿ 'ಆಪರೇಷನ್ ಕಮಲ'ದ ಮೊರೆ ಹೋಗುತ್ತಾ ಎನ್ನುವ ಆತಂಕ ಈಗ ಕಾಂಗ್ರೆಸ್ ಪಾಳಯದ ತಲೆನೋವಿಗೆ ಕಾರಣವಾಗಿದೆ.

ಈಗಾಗಲೇ ಆಪರೇಷನ್ ಕಮಲದ ಪರಿಣಾಮವನ್ನು ಎದುರಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಬಾರಿ ಶಾಸಕರನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎನ್ನುವ ಪ್ಲ್ಯಾನ್ ಮಾಡಿಕೊಳ್ಳುತ್ತಿವೆ. ರಾಹುಲ್ ಗಾಂಧಿ ಸೂಚನೆ ಮೇರೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಬೆಂಗಳೂರಿಗೆ ಆಗಮಿಸಿದ್ದು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆಗೂ ಸುರ್ಜೆವಾಲಾ ಮಾತನಾಡಲಿದ್ದಾರೆ.
ಒಂದು ವೇಳೆ ಸ್ಪಷ್ಟ ಬಹುಮತ ಬರದೇ ಇದ್ದರೆ ಮುಂದಿನ ನಡೆ ಏನು ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಯಲಿದೆ. ಸರಳ ಬಹುಮತ ಬಂದರು ಕೂಡ ಆಪರೇಷನ್ ಕಮಲದ ಭೀತಿ ಇದ್ದೇ ಇರುವುದರಿಂದ ಎಲ್ಲಾ ಶಾಸಕರನ್ನು ರಕ್ಷಿಸಿಕೊಳ್ಳುವ ಬಗ್ಗೆ ಕೂಡ ಡಿಕೆಶಿ, ಸಿದ್ದರಾಮಯ್ಯ ಮತ್ತು ಸುರ್ಜೇವಾಲ ಚರ್ಚೆ ಮಾಡಲಿದ್ದಾರೆ.
ಕೃಷ್ಣ ಭೈರೇಗೌಡ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಜನ ಈಗಾಗಲೇ ಸಮ್ಮಿಶ್ರ ಸರ್ಕಾರದ ಆಡಳಿತವನ್ನು ನೋಡಿ ಬೇಸತ್ತಿದ್ದಾರೆ. ಕಾಂಗ್ರೆಸ್‌ಗೆ ಜನಾಶೀರ್ವಾದ ಮಾಡಿದ್ದು ಸ್ಪಷ್ಟ ಬಹುಮತ ಪಡೆಯುತ್ತೇವೆ, ಯಾವ ಪಕ್ಷದವರ ಜೊತೆ ಕೂಡ ಚರ್ಚೆ ಮಾಡುವ ಅಗತ್ಯವಿಲ್ಲ ಎನಿಸುತ್ತದೆ ಎಂದು ಹೇಳಿದ್ದಾರೆ.
ಈಗಾಗಲೇ ಆಪರೇಷನ್ ಕಮಲದಿಂದ ಅಧಿಕಾರವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಈ ಬಾರಿ ಶತಾಯ ಗತಾಯ ಅದಕ್ಕೆ ಅವಕಾಶ ನೀಡದಂತೆ ರಣತಂತ್ರ ರೂಪಿಸುತ್ತಿದೆ. ಫಲಿತಾಂಶಕ್ಕೂ ಮುನ್ನವೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಏನಾದರೂ ಆಗಲಿ ಒಂದು ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದ್ರೆ ಸಾಕು ಈ ರಾಜಕೀಯ ದೊಂಬರಾಟ ನೋಡಕ್ಕಾಗಲ್ಲ ಅಂತ ಬಹುತೇಕ ಮತದಾರರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications