ಆಪರೇಷನ್ ಹಸ್ತದ ವದಂತಿ ಬೆನ್ನಲ್ಲೇ ಸಚಿವ ಎಸ್‌ಎಸ್ ಮಲ್ಲಿಕಾರ್ಜುನರನ್ನು ಭೇಟಿ ಮಾಡಿದ ರೇಣುಕಾಚಾರ್ಯ
ದಾವಣಗೆರೆ, ಆಗಸ್ಟ್ 26: ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತದ ವದಂತಿಗಳು ಹರಿದಾಡುತ್ತಿವೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಶಾಸಕರು ಹಾಗೂ ಮಾಜಿ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಯತ್ನಿಸುತ್ತಿದೆ.
2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಕೆಲ ಶಾಸಕರು ಮತ್ತೆ ಪಕ್ಷಕ್ಕೆ ಮರಳಲಿದ್ದಾರೆ ಎಂದು ಕೈ ಪಾಳಯದ ನಾಯಕರು ಹೇಳುತ್ತಿದ್ದಾರೆ. ಇದೇ ವೇಳೆ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ಯಶವಂತಪುರ ಶಾಸಕ ಎಸ್‌ಟಿ ಸೋಮಶೇಖರ ಹಾಗೂ ಕೆಆರ್ ಪುರಂ ಶಾಸಕ ಬೈರತಿ ಬಸವರಾಜ ಅವರು ಕಾಂಗ್ರೆಸ್ ಸೇರುವ ಬಗ್ಗೆ ವರದಿಗಳಾಗಿವೆ.

ಶಿವರಾಮ ಹೆಬ್ಬಾರ ಹಾಗೂ ಎಸ್‌ಟಿ ಸೋಮಶೇಖರ ಅವರು ತಮ್ಮದೇ ಪಕ್ಷದ ಸ್ಥಳೀಯ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಸ್ಥಳೀಯ ಮುಖಂಡರು ತಮ್ಮ ವಿರುದ್ದ ಕೆಲಸ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಈ ಶಾಸಕರು ಹೇಳಿದ್ದಾರೆ.
ಬಿಎಸ್‌ವೈ ಆಪ್ತ ಆಯನೂರು ಮಂಜುನಾಥ ಕಾಂಗ್ರೆಸ್ ಸೇರ್ಪಡೆ
ಮಾಜಿ ಬಿಜೆಪಿ ಎಂಎಲ್‌ಸಿ ಹಾಗೂ ಜೆಡಿಎಸ್ ಮುಖಂಡ ಆಯನೂರು ಮಂಜುನಾಥ ಅವರು ಕಾಂಗ್ರೆಸ್ ಸೇರ್ಪಡೆಗೊಂಡರು. ಶಿವಮೊಗ್ಗ ಭಾಗದಲ್ಲಿ ಪ್ರಾಬಲ್ಯ ಹೊಂದಿರುವ ಅವರು ಪ್ರಮುಖ ಲಿಂಗಾಯತ ನಾಯಕರಲ್ಲಿ ಒಬ್ಬರು. ಮಾಜಿ ಸಿಎಂ ಯಡಿಯೂರಪ್ಪನವರ ಆಪ್ತರೆಂದೇ ಗುರುತಿಸಿಕೊಂಡವರು. ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದರು. ಜೆಡಿಎಸ್ ಟಿಕೆಟ್ ಅಡಿಯಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದಾರೆ. ಈಗ ಅವರ ಕಾಂಗ್ರೆಸ್ ಸೇರ್ಪಡೆಯಿಂದ ಆಪರೇಷನ್ ಹಸ್ತದ ವದಂತಿಗೆ ರೆಕ್ಕೆಪುಕ್ಕ ಬಂದಂತಾಗಿದೆ.

ಬಿಎಸ್‌ವೈ ಭೇಟಿ ಮಾಡಿದ ರೇಣುಕಾಚಾರ್ಯ
ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆ ವಿಚಾರವಾಗಿ ಬಿಜೆಪಿ ಮಾಜಿ ಶಾಸಕ ರೇಣುಕಾಚಾರ್ಯ ಅವರು ಪಕ್ಷದ ಮುಖಂಡರ ವಿರುದ್ಧ ಹರಿಹಾಯ್ದಿದ್ದರು. ಯಡಿಯೂರಪ್ಪನವರನ್ನು ಕಡೆಗಣಿಸಿದ್ದೇ ಬಿಜೆಪಿ ಸೋಲಿಗೆ ಕಾರಣವೆಂದು ಹೇಳಿದ್ದರು. ಇದು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಆ ವೇಳೆ, ರೇಣುಕಾಚಾರ್ಯ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೋಗಳು ದಟ್ಟವಾಗಿದ್ದವು.
ರೇಣುಕಾಚಾರ್ಯ ಅವರು ಬಿಎಸ್ ಯಡಿಯೂರಪ್ಪ ಅವರನ್ನು ಶುಕ್ರವಾರ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರು ಹಾಗೂ ಕರ್ನಾಟಕದ ನಿಕಟಪೂರ್ವ ಮುಖ್ಯಮಂತ್ರಿಗಳು, ಮಾರ್ಗದರ್ಶಕರಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರನ್ನು ದವಳಗಿರಿ ನಿವಾಸದಲ್ಲಿ ಭೇಟಿಯಾಗಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಮಿತ್ರರಾದ ಸುರೇಶ್ ಗೌಡ ಅವರು ಉಪಸ್ಥಿತರಿದ್ದರು' ಎಂದು ತಿಳಿಸಿದ್ದಾರೆ.

ಬಿಎಸ್‌ವೈ ಭೇಟಿ ಬಳಿಕ ಮಲ್ಲಿಕಾರ್ಜುನ ಜೊತೆ ಮಾತುಕತೆ
ಬಿಎಸ್‌ವೈ ಭೇಟಿ ಬಳಿಕ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ ಅವರನ್ನು ರೇಣುಕಾಚಾರ್ಯ ಭೇಟಿ ಮಾಡಿದ್ದಾರೆ. ಅವರಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ಕೋರಿದ್ದಾರೆ. ಈ ಕುರಿತು ಫೋಟೊಗಳನ್ನು ಟ್ವೀಟ್ ಮಾಡಿರುವ ರೇಣುಕಾಚಾರ್ಯ, 'ಗಣಿ ಮತ್ತು ಭೂ ವಿಜ್ಞಾನ & ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್ ಅವರನ್ನ ಭೇಟಿಯಾಗಿ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳನ್ನ ಬರ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಶಿಫಾರಸ್ಸು ಮಾಡಲು ಮನವಿ ನೀಡಿ, ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ಕೋರಲಾಯಿತು' ಎಂದು ಹೇಳಿದ್ದಾರೆ.
ರೇಣುಕಾಚಾರ್ಯ ಅವರು ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡಿರುವ ವಿಚಾರ ರಾಜಕೀಯದಲ್ಲಿ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಹೊನ್ನಾಳಿ ಭಾಗದಲ್ಲಿ ಜನಪ್ರಿಯತೆ ಹೊಂದಿರುವ ಲಿಂಗಾಯತ ಮುಖಂಡ ರೇಣುಕಾಚಾರ್ಯ ಅವರಿಗೆ ಕಾಂಗ್ರೆಸ್ ನಾಯಕರು ಗಾಳ ಹಾಕಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಒಂದು ವೇಳೆ, ರೇಣುಕಾಚಾರ್ಯ ಅವರು ಕಾಂಗ್ರೆಸ್ ಸೇರ್ಪಡೆಗೊಂಡರೆ, ದಾವಣಗೆರೆ ಭಾಗದಲ್ಲಿ ಕಾಂಗ್ರೆಸ್ ಲಾಭವಾಗಲಿದೆ ಎಂಬುದು ನಾಯಕರ ಆಶಯವಾಗಿದೆ. ಮುಂದಿನ ದಿನಗಳಲ್ಲಿ ಏನು ಸಂಭವಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications