• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫಲಿತಾಂಶ ಬಂದು ತಿಂಗಳಾಯ್ತು: 30 ದಿನದಲ್ಲಿ ಎಷ್ಟೆಲ್ಲಾ ಆಯ್ತು!

|

ಬೆಂಗಳೂರು, ಜೂನ್ 15: ಸರಿಯಾಗಿ ಒಂದು ತಿಂಗಳ ಹಿಂದಿನ ಈ ದಿನ ರಾಜ್ಯದ ಜನರಲ್ಲಿ ಕಾತರ, ಚಡಪಡಿಕೆ, ಕುತೂಹಲ... ಮಾತ್ರವಲ್ಲ, ಇಡೀ ದೇಶವೇ ಕರ್ನಾಟಕದತ್ತ ಅಷ್ಟೇ ಕುತೂಹಲದಿಂದ ಕಣ್ಣಿಟ್ಟಿತ್ತು.

ಎಲ್ಲೆಲ್ಲೂ ಚುನಾವಣೆಯದೇ ಸುದ್ದಿ. ಊಟ, ಪ್ರಯಾಣ, ಕೆಲಸದ ವೇಳೆಯಲ್ಲಿಯೂ ಫಲಿತಾಂಶ ಏನಾಯ್ತು ಎಂಬ ಮಾಹಿತಿಗಾಗಿ ಯಾರಿಗಾದರೂ ಫೋನ್, ಮೆಸೇಜ್ ಕಳುಹಿಸುವುದು, ಟಿವಿ ಮುಂದೆ ಕುಳಿತು ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂಬ ಲೆಕ್ಕಾಚಾರ ಹಾಕುವುದು ನಡೆದೇ ಇತ್ತು.

ಜಿಲ್ಲಾ ಉಸ್ತುವಾರಿ ಪಟ್ಟ: ಯಾರಿಗೆ ಯಾವ ಜಿಲ್ಲೆ?

ಇನ್ನು ಪಕ್ಷಗಳ ನಡುವಣ ಪೈಪೋಟಿಯಲ್ಲಿ ಯಾರ ಕೈಗೆ ಅಧಿಕಾರದ ನೊಗ ಸಿಗುತ್ತದೆ ಎಂಬ ಭಯ ಮಿಶ್ರಿತ ತಲ್ಲಣ ರಾಜಕೀಯ ಧುರೀಣರನ್ನು ಕಾಡಿತ್ತು. ಆರಂಭದ ವೇಗ ನೋಡಿ ಇನ್ನೇನು ಬಿಜೆಪಿ ಗೆದ್ದೇ ಬಿಟ್ಟಿತು ಎಂದು ಬಿಜೆಪಿ ಬೆಂಬಲಿಗರು ಬೀಗತೊಡಗಿದ್ದರು.

ಆದರೆ, ಮಧ್ಯಾಹ್ನದ ವೇಳೆಗೆ ಪರಿಸ್ಥಿತಿ ಬದಲಾಗತೊಡಗಿತು. ಇನ್ನೇನು ಸರಳ ಬಹುಮತ ಪಡೆಯುವಷ್ಟು ಕ್ಷೇತ್ರಗಳನ್ನು ಗೆದ್ದೇಬಿಟ್ಟಿತು ಎಂಬ ಹಂತಕ್ಕೆ ತಲುಪಿದ್ದ ಬಿಜೆಪಿ, ಇದ್ದಕ್ಕಿದ್ದಂತೆ ಕುಸಿತ ಕಂಡಿತ್ತು.

ಅತೃಪ್ತ ಶಾಸಕರಿಗೆ ಕೈ ಉಸ್ತುವಾರಿ ವೇಣುಗೋಪಾಲ್ ಖಡಕ್ ಎಚ್ಚರಿಕೆ

ಐದು ವರ್ಷದ ಸಂಪೂರ್ಣ ಅಧಿಕಾರ ನಡೆಸಿಯೂ ಸೋತೆವೆಂಬ ಹತಾಶೆಯಲ್ಲಿದ್ದ ಕಾಂಗ್ರೆಸ್ ಪಾಳೆಯದಲ್ಲಿ ಇದ್ದಕ್ಕಿದ್ದಂತೆ ಹುಮ್ಮಸ್ಸು ಮೂಡಿತ್ತು. ಫಲಿತಾಂಶ ಸಂಪೂರ್ಣ ಪ್ರಕಟಗೊಳ್ಳುವ ಮೊದಲೇ ಅತ್ತ ಬಿಜೆಪಿ ನಾಯಕರು ಇರುವ ಸಂಖ್ಯೆಯನ್ನೇ ಬಳಸಿಕೊಂಡು ಸರ್ಕಾರ ರಚನೆಯ ಕನಸು ಕಾಣುತ್ತಿದ್ದರೆ ಇತ್ತ ಕಾಂಗ್ರೆಸ್‌ನ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ತಂತ್ರ ರೂಪಿಸಿ ಜೆಡಿಎಸ್ ಜತೆ ಚರ್ಚೆ ನಡೆಸಿ ಸಮ್ಮಿಶ್ರ ಸರ್ಕಾರ ರಚಿಸುವ ಪ್ರಯತ್ನ ಆರಂಭಿಸಿದ್ದರು.

ಬಂಡಾಯ ಶಮನಕ್ಕಾಗಿ ಜೂನ್ 17ರಂದು ಸಚಿವ ಸಂಪುಟ ವಿಸ್ತರಣೆ

ಕೊನೆಗೆ ರಾಜ್ಯದ ಜನರು ಊಹಿಸಿದಂತೆ, ಹೆಚ್ಚಿನ ಸಮೀಕ್ಷೆಗಳು ಹೇಳಿದಂತೆ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದಿತು. ಮೇ 15ರಿಂದ ಒಂದು ತಿಂಗಳು ಕಳೆದಿದೆ. ರಾಜ್ಯ ರಾಜಕಾರಣದಲ್ಲಿ ಎಷ್ಟೆಲ್ಲ ಬದಲಾವಣೆಗಳು ಕಂಡಿವೆ. ಈ ಮೂವತ್ತು ದಿನದ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ರಾಜ್ಯ ಕಂಡಿದೆ. ಈ ಪ್ರಮುಖ ಘಟನಾವಳಿಗಳ ಮೇಲೆ ಒಂದು ಹಿನ್ನೋಟ...

ಬೆಳಿಗ್ಗೆ ಹುಮ್ಮಸ್ಸು, ಸಂಜೆಯಿಂದ ಸರ್ಕಸ್ಸು

ಬೆಳಿಗ್ಗೆ ಹುಮ್ಮಸ್ಸು, ಸಂಜೆಯಿಂದ ಸರ್ಕಸ್ಸು

ಮೇ 15ರಂದು ಫಲಿತಾಂಶ ಪ್ರಕಟವಾಗುವ ಬೆಳಗಿನ ವೇಳೆ ಬಿಜೆಪಿ ಕಾರ್ಯಕರ್ತರ ಸಂಭ್ರಮ ಹೆಚ್ಚಾಗಿತ್ತು. ಆದರೆ, ಮಧ್ಯಾಹ್ನದ ಬಳಿಕ ಚಿತ್ರಣ ಸಂಪೂರ್ಣ ಬದಲಾಯಿತು.

ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಹೀನಾಯ ಸೋಲು ಕಂಡು ಆಘಾತ ಅನುಭವಿಸಿದರು. ಬಾದಾಮಿಯಲ್ಲಿನ ಅಲ್ಪ ಅಂತರದ ಗೆಲುವು ಅವರಿಗೆ ಸಮಾಧಾನ ಮೂಡಿಸಿತು.

ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸಲು ಸಾಲುವಷ್ಟು ಸೀಟುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಅತ್ತ ಕಾಂಗ್ರೆಸ್ ಕೂಡಲೇ ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ಸಮ್ಮಿಶ್ರ ಸರ್ಕಾರ ರಚಿಸುವ ಮಾತುಕತೆ ಆರಂಭಿಸಿದರು.

ಮೈತ್ರಿ ಸರ್ಕಾರದ ಹೋರಾಟ

ಮೈತ್ರಿ ಸರ್ಕಾರದ ಹೋರಾಟ

ಚುನಾವಣೆಗೂ ಮುನ್ನ ಪರಸ್ಪರ ಕೆಸರೆರಚಾಟ ನಡೆಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅತಂತ್ರ ಫಲಿತಾಂಶ ಖಚಿತವಾಗುತ್ತಿದ್ದಂತೆಯೇ ಒಂದಾದರು. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಬೇಷರತ್ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಘೋಷಿಸಿತು. ಉಭಯ ಪಕ್ಷಗಳಿಂದ ಮ್ಯಾಜಿಕ್ ಸಂಖ್ಯೆಯನ್ನು ದಾಟುವ ಶಾಸಕರ ಬಲವಿದೆ ಎಂಬ ಪತ್ರವನ್ನು ರಾಜ್ಯಪಾಲರಿಗೆ ಒಪ್ಪಿಸಿದರು.

ಮುಖ್ಯಮಂತ್ರಿಯಾದ ಯಡಿಯೂರಪ್ಪ

ಮುಖ್ಯಮಂತ್ರಿಯಾದ ಯಡಿಯೂರಪ್ಪ

ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೆ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದ್ದರು. ತಾವು ಚುನಾವಣೆ ಪ್ರಚಾರದ ವೇಳೆ ಹೇಳಿದ್ದಂತೆಯೇ ಮೇ 18ರಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಬಿಜೆಪಿಗೆ ಎಂಟು ಶಾಸಕರ ಕೊರತೆ ಇದ್ದಿದ್ದರಿಂದ ಆಪರೇಷನ್ ಕಮಲ ನಡೆಸಲಿದೆ ಎಂಬ ಭೀತಿಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಶಾಸಕರನ್ನು ರೆಸಾರ್ಟ್‌ಗೆ ಕಳುಹಿಸಿ ರಕ್ಷಿಸುವ ಪ್ರಯತ್ನ ನಡೆಸಿದವು. ಮೂರು ದಿನ ಈ ನಾಟಕವೇ ಹೆಚ್ಚಾಗಿತ್ತು.

ಕಾಣೆಯಾದ ಶಾಸಕರು

ಕಾಣೆಯಾದ ಶಾಸಕರು

ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಶಾಸಕರನ್ನು ರೆಸಾರ್ಟ್‌ನಲ್ಲಿ ಇರಿಸಿದ್ದರೂ, ಶಾಸಕರನ್ನು ಕಳೆದುಕೊಳ್ಳುವ ಭಯ ಕಡಿಮೆಯಾಗಿರಲಿಲ್ಲ. ಬಿಜೆಪಿ ನಾಯಕರು ತಮಗೆ ಕೋಟ್ಯಂತರ ರೂಪಾಯಿ ಹಣ ಮತ್ತು ಸಚಿವ ಸ್ಥಾನ ನೀಡುವುದಾಗಿ ಆಮಿಷ ಒಡ್ಡುತ್ತಿದ್ದಾರೆ ಎಂದು ಅನೇಕ ಶಾಸಕರು ಆರೋಪಿಸಿದ್ದರು.

ಈ ಮಧ್ಯೆ ಕಾಂಗ್ರೆಸ್‌ನ ಶಾಸಕರಾದ ಆನಂದ್ ಸಿಂಗ್, ಪ್ರತಾಪ್‌ಗೌಡ ಪಾಟೀಲ್ ಅವರು ನಾಪತ್ತೆಯಾಗಿದ್ದು ಕಾಂಗ್ರೆಸ್‌ನಲ್ಲಿ ತಳಮಳ ಮೂಡಿಸಿತ್ತು.

ಬಹುಮತ ಸಾಬೀತಿನ ಗೊಂದಲ

ಬಹುಮತ ಸಾಬೀತಿನ ಗೊಂದಲ

ಬಹುಮತ ಸಾಬೀತುಪಡಿಸಲು ಯಡಿಯೂರಪ್ಪ ಅವರಿಗೆ 15 ದಿನಗಳ ಸಮಯ ನೀಡಿದ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಅರ್ಜಿಯನ್ನು ಮಾನ್ಯಮಾಡಿದ ಸುಪ್ರೀಂಕೋರ್ಟ್, ಎರಡು ದಿನದಲ್ಲಿಯೇ ಸಂಜೆ ನಾಲ್ಕು ಗಂಟೆಯ ಒಳಗೆ ಬಹುಮತ ಸಾಬೀತು ಮಾಡಬೇಕು ಎಂಬ ಅಂಶ ಸೇರಿದಂತೆ ಹಲವು ಷರತ್ತುಗಳನ್ನು ಬಿಜೆಪಿ ಸರ್ಕಾರಕ್ಕೆ ನೀಡಿತು.

ಈ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಧ್ಯರಾತ್ರಿ ನಡೆಸಿದ್ದು ವಿಶೇಷವಾಗಿತ್ತು.

ಹಂಗಾಮಿ ಸ್ಪೀಕರ್ ಗಲಾಟೆ

ಹಂಗಾಮಿ ಸ್ಪೀಕರ್ ಗಲಾಟೆ

ವಿಶ್ವಾಸಮತ ಸಾಬೀತುಪಡಿಸುವ ವೇಳೆಗೆ ಹಂಗಾಮಿ ಸ್ಪೀಕರ್ ನೇಮಕದ ವಿಚಾರವೂ ತೀವ್ರ ಗದ್ದಲ ಸೃಷ್ಟಿಸಿತು. ಬಿಜೆಪಿಯ ಅರ್ಜಿಯನ್ನು ಸ್ವೀಕರಿಸಿದ ರಾಜ್ಯಪಾಲರು, ಬಿಜೆಪಿಯ ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಹಿರಿಯರನ್ನು ಸ್ಪೀಕರ್‌ ಆಗಿ ನೇಮಿಸಬೇಕು ಎಂದು ಕಾಂಗ್ರೆಸ್ ವಾದಿಸಿತ್ತು. ಆದರೆ, ಈ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತು. ಬಹುಮತ ಸಾಬೀತುಪಡಿಸುವ ಪ್ರಕ್ರಿಯೆಯನ್ನು ನೇರಪ್ರಸಾರ ಮಾಡುವಂತೆ ಸೂಚಿಸಿತು.

ಮೂರು ದಿನಗಳ ಮುಖ್ಯಮಂತ್ರಿ

ಮೂರು ದಿನಗಳ ಮುಖ್ಯಮಂತ್ರಿ

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೂರು ದಿನಗಳಿಗೂ ಮೊದಲೇ ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರ ಅಂತ್ಯಗೊಂಡಿತು.

ಮೇ 21ರಂದು ಅವರು ವಿಶ್ವಾಸಮತ ಸಾಬೀತುಪಡಿಸಬೇಕಿತ್ತು. ಆದರೆ, ಅಗತ್ಯ ಶಾಸಕರ ಸಂಖ್ಯಾಬಲದ ಕೊರತೆಯಿಂದಾಗಿ ಅವರು ವಿಶ್ವಾಸಮತ ಯಾಚಿಸುವ ಗೋಜಿಗೇ ಹೋಗಲಿಲ್ಲ. ಅದಕ್ಕೂ ಮೊದಲೇ ಸುದೀರ್ಘ ಭಾಷಣ ಮಾಡಿ ರಾಜೀನಾಮೆ ನೀಡುವುದಾಗಿ ಹೇಳಿ ಹೊರನಡೆದರು.

ಮಹಾಮೈತ್ರಿಯ ಸಮ್ಮುಖದಲ್ಲಿ ಪ್ರಮಾಣವಚನ

ಮಹಾಮೈತ್ರಿಯ ಸಮ್ಮುಖದಲ್ಲಿ ಪ್ರಮಾಣವಚನ

ಸರ್ಕಾರ ರಚನೆಯ ಆಹ್ವಾನ ಪಡೆದ ಬಳಿಕ ಮೇ 23ರಂದು ವಿಧಾನಸೌಧದ ಆವರಣದಲ್ಲಿ ಬೃಹತ್ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕಾರ ನಡೆಯಿತು.

ಮುಖ್ಯಮಂತ್ರಿಯಾಗಿ ಎಚ್‌ಡಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದರೆ, ಉಪಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನ ಜಿ. ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಿದರು.

ಅಂದಿನ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಮಾಯಾವತಿ, ಅಖಿಲೇಶ್ ಯಾದವ್, ಶರದ್ ಪವಾರ್, ಅರವಿಂದ ಕೇಜ್ರಿವಾಲ್ ಮುಂತಾದ ನಾಯಕರು ಜತೆಗೂಡಿ ಮಹಾಮೈತ್ರಿಕೂಟ ರಚನೆಯ ಸುಳಿವು ನೀಡಿದರು.

ಸಾಲಮನ್ನಾದ ಸಂಕಟ

ಸಾಲಮನ್ನಾದ ಸಂಕಟ

ಮುಖ್ಯಮಂತ್ರಿಯಾದ ಮೊದಲ ದಿನವೇ ರೈತರ ಸಾಲ ಮನ್ನಾ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದ ಕುಮಾರಸ್ವಾಮಿ ಅವರು ಮೊದಲು ಸಾಲ ಮನ್ನಾ ಘೋಷಣೆ ಮಾಡಲಿ ಎಂದು ಬಿಜೆಪಿ ಪಟ್ಟು ಹಿಡಿಯಿತು.

ಸಾಲಮನ್ನಾ ಮಾಡದೆ ಇದ್ದರೆ ಕರ್ನಾಟಕ ಬಂದ್ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿತು. ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ನಾನು ಸಾಂದರ್ಭಿಕ ಶಿಶು ಎಂದು ಹೇಳಿಕೆ ನೀಡಿದ್ದ ಕುಮಾರಸ್ವಾಮಿ, ತಾವು ಜನರ ಮುಲಾಜಿನಲ್ಲಿ ಇಲ್ಲ ಆದರೆ, ಕಾಂಗ್ರೆಸ್ ಮುಲಾಜಿನಲ್ಲಿ ಇದ್ದೇನೆ ಎಂಬ ಮಾರ್ಮಿಕ ಹೇಳಿಕೆ ನೀಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.

ಖಾತೆ ಹಂಚಿಕೆಯ ಕಸರತ್ತು

ಖಾತೆ ಹಂಚಿಕೆಯ ಕಸರತ್ತು

ಸರ್ಕಾರ ರಚನೆಯಾದರೂ ಸಂಪುಟ ವಿಸ್ತರಣೆ ಉಭಯ ಪಕ್ಷಗಳಿಗೆ ದೊಡ್ಡ ತಲೆನೋವಾಯಿತು. ಸಚಿವ ಸ್ಥಾನಕ್ಕಾಗಿ ದೊಡ್ಡ ಪ್ರಮಾಣದ ಲಾಬಿ, ಬೇಡಿಕೆ, ಒತ್ತಡಗಳು ಆರಂಭವಾದವು. ನಿರಂತರ ಸಭೆಗಳ ಬಳಿಕ ಯಾವ ಪಕ್ಷಕ್ಕೆ ಎಷ್ಟು ಮತ್ತು ಯಾವ ಖಾತೆ ಎಂಬುದನ್ನು ನಿರ್ಧರಿಸಲು ಸುಮಾರು ಹತ್ತು ದಿನ ಬೇಕಾಯಿತು.

ಮೊದಲು ಜೆಡಿಎಸ್‌ಗೆ ಬೇಷರತ್ ಬೆಂಬಲ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್, ಒಂದೊಂದೇ ಷರತ್ತುಗಳನ್ನು ಮುಂದಿಡತೊಡಗಿತು. ಕೊನೆಗೆ ಕಾಂಗ್ರೆಸ್‌ 22 ಮತ್ತು ಜೆಡಿಎಸ್ 12 ಖಾತೆಗಳನ್ನು ಹಂಚಿಕೊಳ್ಳುವುದಾಗಿ ಒಪ್ಪಂದ ಮಾಡಿಕೊಳ್ಳಲಾಯಿತು. ಇಲ್ಲಿ ಪ್ರಮುಖ ಖಾತೆಗಳು ಜೆಡಿಎಸ್ ಪಾಲಾಗಿವೆ ಎಂಬ ಅಸಮಾಧಾನವೂ ವ್ಯಕ್ತವಾಯಿತು.

ಸಮ್ಮಿಶ್ರ ಸರ್ಕಾರದ ಸಚಿವರ ಪ್ರಮಾಣವಚನ

ಸಮ್ಮಿಶ್ರ ಸರ್ಕಾರದ ಸಚಿವರ ಪ್ರಮಾಣವಚನ

ತೀವ್ರ ಕಸರತ್ತಿನ ಬಳಿಕ ಕೊನೆಗೂ ಸಂಪುಟ ವಿಸ್ತರಣೆಯ ಗಳಿಗೆ ಕೂಡಿಬಂತು. ಮೊದಲ ಹಂತದಲ್ಲಿ ಒಟ್ಟು 25 ಶಾಸಕರು ಸಚಿವರಾಗಿ ಜೂನ್ 6ರಂದು ಪ್ರಮಾಣವಚನ ಸ್ವೀಕರಿಸಿದರು.

ಕಾಂಗ್ರೆಸ್‌ನ 15 ಮತ್ತು ಜೆಡಿಎಸ್‌ನ 10 ಸಚಿವರಿಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಿದರು.

ಅತೃಪ್ತ ಶಾಸಕರ ಕೋಪ

ಅತೃಪ್ತ ಶಾಸಕರ ಕೋಪ

ಮಾಜಿ ಸಚಿವರಾದ ಎಂಬಿ ಪಾಟೀಲ್, ಎಚ್‌ಕೆ. ಪಾಟೀಲ್, ಸತೀಶ್ ಜಾರಕಿಹೊಳಿ, ಬಿ.ಸಿ. ಪಾಟೀಲ್, ಬಸವರಾಜ ಹೊರಟ್ಟಿ ಸೇರಿದಂತೆ ಸಚಿವ ಸ್ಥಾನದ ಸಿಗದ ಶಾಸಕರಲ್ಲಿ ತೀವ್ರ ಅಸಮಾಧಾನ ಮೂಡಿಸಿತು.

ಕಾಂಗ್ರೆಸ್ ನಾಯಕರು ಶತಪ್ರಯತ್ನ ನಡೆಸಿದರೂ ಅತೃಪ್ತರು ತಮ್ಮ ಪಟ್ಟು ಸಡಿಲಿಸಲಿಲ್ಲ. ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಎಂಬಿ ಪಾಟೀಲ್ ಅವರಿಗೆ ಸಚಿವ ಸ್ಥಾನವೂ ಸಿಗದೆ ಹೋದದ್ದು ಆಕ್ರೋಶ ಉಂಟುಮಾಡಿತ್ತು. ಆದರೆ, ಅವರ ಪ್ರಯತ್ನ ಯಾವುದೇ ಪರಿಣಾಮ ಬೀರಲಿಲ್ಲ. ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರೂ ಬರಿಗೈಲಿ ಮರಳುವಂತಾಯಿತು.

ಕೊನೆಗೂ ಖಾತೆ ಅಂತಿಮ

ಕೊನೆಗೂ ಖಾತೆ ಅಂತಿಮ

ಸಚಿವರು ಪ್ರಮಾಣವಚನ ಸ್ವೀಕರಿಸಿದರೂ ಯಾರಿಗೆ ಯಾವ ಖಾತೆ ಎಂಬ ಗೊಂದಲ ಇನ್ನೂ ಬಗೆಹರಿದಿರಲಿಲ್ಲ. ಜೂನ್ 10ರಂದು ಕೊನೆಗೂ ಖಾತೆಯ ಹಂಚಿಕೆಯ ಕುತೂಹಲಕ್ಕೆ ತೆರೆ ಬಿದ್ದಿತು. ಆದರೆ, ಎಂಟನೆಯ ತರಗತಿ ಓದಿದ ಜಿ.ಟಿ. ದೇವೇಗೌಡ ಅವರಿಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದು ಸೇರಿದಂತೆ ಅನೇಕ ಗೊಂದಲಗಳು ಮುಂದುವರಿದಿವೆ.

ಅಧಿಕಾರಗಳ ವರ್ಗಾವಣೆಗೆ ಸಂಬಂಧಿಸಿದಂತೆ ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕಾಗಿ ಕಾಂಗ್ರೆಸ್‌ನ ಡಿಕೆ ಶಿವಕುಮಾರ್ ಅವರು ಜೆಡಿಎಸ್‌ನ ಎಚ್‌ಡಿ ರೇವಣ್ಣ ವಿರುದ್ಧ ಗರಂ ಆಗಿದ್ದರು.

'ಕೈ' ಹಿಡಿದ ಚುನಾವಣೆ

'ಕೈ' ಹಿಡಿದ ಚುನಾವಣೆ

ರಾಜರಾಜೇಶ್ವರಿ ನಗರದ ಮನೆಯೊಂದರಲ್ಲಿ ಮತದಾರರ ಗುರುತಿನ ಚೀಟಿ ದೊರೆತ ಕಾರಣ ಹಾಗೂ ಜಯನಗರದ ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ಅವರ ನಿಧನ ಕಾರಣ ಈ ಎರಡೂ ಕ್ಷೇತ್ರಗಳ ಚುನಾವಣೆಯನ್ನು ಮುಂದೂಡಲಾಗಿತ್ತು.

ಈ ಎರಡೂನ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಮೂಲಕ ಸರ್ಕಾರದಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿತು. ರಾಜರಾಜೇಶ್ವರಿ ನಗರದಲ್ಲಿ ಮೂರು ಪಕ್ಷಗಳ ನಡುವೆ ಪೈಪೋಟಿ ನಡೆದಿದ್ದರೆ, ಜಯನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡಿತ್ತು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
One month completed after the Karnataka assembly elections 2018. Here is the some developments happened in 30 days in the state politics.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more