ಮತ್ತೊಮ್ಮೆ ಕನ್ನಡಿಗ ಪ್ರಧಾನಿ...! ಕುಮಾರಸ್ವಾಮಿ ಮಾತಿನ ಅರ್ಥವೇನು?
Recommended Video

ಬೆಂಗಳೂರು, ಫೆಬ್ರವರಿ 28: "ಕನ್ನಡಿಗರು ಪ್ರಯತ್ನಿಸಿದರೆ ಮತ್ತೊಮ್ಮೆ ಕನ್ನಡದ ವ್ಯಕ್ತಿಯೇ ಪ್ರಧಾನಿಯಾಗುವುದಕ್ಕೆ ಸಾಧ್ಯವಿದೆ" ಎನ್ನುವ ಮೂಲಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೊಸ ಸೂಚನೆಯೊಂದನ್ನು ನೀಡಿದಂತಿದೆ!
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಎಚ್ ಡಿ ಕುಮಾರಸ್ವಾಮಿ, "ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ತಮ್ಮ ಆಶೀರ್ವಾದ ನೀಡಿದರೆ ಕನ್ನಡಿಗರೇ ಮತ್ತೊಮ್ಮೆ ಪ್ರಧಾನಿಯಾಗುವುದಕ್ಕೆ ಸಾಧ್ಯವಿದೆ" ಎಂದರು.
"1996 ರಲ್ಲಿ ಕನ್ನಡಿಗರ ಆಶೀರ್ವಾದದಿಂದ 16 ಲೋಕಸಭಾ ಸೀಟುಗಳನ್ನು ಪಡೆದು ಕನ್ನಡಿಗರಾದ ಎಚ್ ಡಿ ದೇವೇಗೌಡರು ಪ್ರಧಾನಿಯಾಗಿದ್ದರು. ಇದೀಗ ಮತ್ತೆ 20-22 ಕ್ಷೇತ್ರಗಳನ್ನು ಗೆಲ್ಲುವಂತೆ ನಮಗೆ ಆಶೀರ್ವದಿಸಿದರೆ, ಮತ್ತೊಮ್ಮೆ ಕನ್ನಡಿಗರು ಪ್ರಧಾನಿಯಾಗುವುದಕ್ಕೆ ಸಾಧ್ಯ" ಎಂದು ಕುಮಾರಸ್ವಾಮಿ ಹೇಳಿದರು.

"ಜಾತಿ ಮತ್ತು ನಮ್ಮ ಪಕ್ಷ ಗೆದ್ದ ಕ್ಷೇತ್ರಕ್ಕೆ ಸೀಮಿತವಾಗಿ ಎಂದೂ ನಾನು ರಾಜಕೀಯ ಮಾಡಿದವನ್ನಲ್ಲ. ನನ್ನ ವಿರುದ್ದ ವ್ಯವಸ್ಥಿತ ಅಪಪ್ರಚಾರ ನಡೆಯುತ್ತಿದೆ, ಇದಕ್ಕೆಲ್ಲಾ ಈ ಜನತೆ ಉತ್ತರಿಸಲಿದ್ದಾರೆ" ಎಂದು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಹೇಳಿದ್ದಾರೆ.
ಅಂದರೆ ಮತ್ತೆ ದೇವೇಗೌಡರು ಪ್ರಧಾನಿಯಾಗುತ್ತಾರಾ? ಅವರನ್ನು ಬಿಟ್ಟರೆ ಆ ಹುದ್ದೆಗೇರುವ ಅನುಭವ, ಚಾಕಚಕ್ಯತೆ ಕನ್ನಡಿಗ ರಾಜಕಾರಣಿಗಳಲ್ಲಿ ಯಾರಿಗಿದೆ? ಒಟ್ಟಿನಲ್ಲಿ ಕುಮಾರಸ್ವಾಮಿ ಅವರ ಮಾತಿನ ಅರ್ಥವನ್ನು ಅವರೇ ಬಿಡಿಸಿಹೇಳಬೇಕಷ್ಟೆ!












Click it and Unblock the Notifications