ಬೆಂಗಳೂರಿಗೂ ಓಮಿಕ್ರಾನ್ BF.7 ಭೀತಿ: ವಿದೇಶದಿಂದ ಬಂದ 7ಮಂದಿಗೆ ಸೋಂಕು, ಲ್ಯಾಬ್‌ಗೆ ಮಾದರಿ ರವಾನೆ
ಬೆಂಗಳೂರು, ಡಿಸೆಂಬರ್ 26: ಚೀನಾದಲ್ಲಿ ತಲ್ಲಣ ಸೃಷ್ಟಿಸಿರುವ ಕೊರೊನಾ ಉಪತಳಿ ಬಿಎಫ್ 7 ಭಾರತಕ್ಕೆ ಕಾಲಿಟ್ಟಿದ್ದು, ಇದೀಗ ಬೆಂಗಳೂರಿಗೆ ವಕ್ಕರಿಸಿತಾ? ಎಂಬ ಆತಂಕ ಮನೆ ಮಾಡಿದೆ. ಕಾರಣ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಏಳು ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿದೆ.
ಚೀನಾದಲ್ಲಿ ಕೋವಿಡ್ ವ್ಯಾಪಿಸಿದ ಬೆನ್ನಲ್ಲೆ ಭಾರತದಲ್ಲೂ ಹಲವು ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಭಾರತದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಅಗತ್ಯ ಮಾರ್ಗಸೂಚಿ ಸಹ ಜಾರಿ ಮಾಡಲಾಗಿದೆ. ಅಷ್ಟರಲ್ಲಾಗಲೇ ಬೆಂಗಳೂರಿಗೆ ಕೊರೊನಾ ಓಮಿಕ್ರಾನ್ ಉಪತಳಿ ಪತ್ತೆ ಆಗಿದೆಯೇ? ಎಂಬ ಆತಂಕ ಮನೆ ಮಾಡಿದ್ದು, ಇದಕ್ಕೆ ಜಿನೋಮ್ ಸಿಕ್ವೆನ್ಸಿಂಗ್ ಲ್ಯಾಬ್ ನೀಡುವ ಕೊರೊನಾ ಮಾದರಿ ತಪಾಸಣೆಯೆ ವರದಿ ಉತ್ತರ ನೀಡಲಿದೆ.
ಹೌದು, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಮಾಡಿದ ಪರೀಕ್ಷೆಗಳಲ್ಲಿ ಒಟ್ಟು 7 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಯಾಣಿಕರಿಗೆ ಮಾಡಿದ್ದ ಆರ್ಟಿಪಿಸಿಆರ್ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಸದ್ಯ ಸೊಂಕಿತರ ಮಾದರಿಗಳನ್ನು ವೈರಸ್ ತಳಿ ಪತ್ತೆ ಮಾಡುವ ಜಿನೋಮ್ ಸೀಕ್ವಿನ್ಸಿಂಗ್ ಪರೀಕ್ಷೆಗೆ ರವಾನಿಸಲಾಗಿದೆ. ಅಧಿಕಾರಿಗಳು ಲ್ಯಾಬ್ ವರದಿಗೆ ಕಾಯುತ್ತಿದ್ದಾರೆ.

ಓಮಿಕ್ರಾನ್ ಬಿಎಫ್ 7 ಹೊಸ ತಳಿಯ ಚೀನಾ, ಜಪಾನ್ ಸೇರಿದಂತೆ ಹತ್ತಕ್ಕೂ ಹೆಚ್ಚು ದೇಶಗಳ ಭಾಧಿಸುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದರು.ಮುಂದಿನ 2-3ತಿಂಗಳಿನಲ್ಲಿ ರಾಜ್ಯಕ್ಕೂ ಹೊಸ ರೂಪಾಂತರಿ ಕಾಲಿಡುವ ಸಾಧ್ಯತೆ ಇದೆ. ಆದ್ದರಿಂದ ಮಾರ್ಗಸೂಚಿ ಹೊರಡಿಸಿದ್ದು, ಎಲ್ಲರು ಪಾಲಿಸಬೇಕು. ಅಗತ್ಯ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದ್ದು, ಅರ್ಹರು ಮುನ್ನೆಚ್ಚರಿಕೆ ಕೊರೊನಾ ಡೋಸ್ ಪಡೆಯುವಂತೆ ಸೂಚಿಸಿದ್ದರು.
ಅಗತ್ಯ ಬೆಡ್‌ಗಳ ವ್ಯವಸ್ಥೆ ಸಿದ್ಧ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನ ಮೇರೆಗೆ ಸರ್ಕಾರಿ ಆಸ್ಪತ್ರೆಗಳು ಬೆಡ್‌ಗಳನ್ನು ಕೊರೊನಾ ಚಿಕಿತ್ಸೆಗೆ ಮೀಸಲಿರಿಸಿವೆ. ಕೊರೊನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ಚಿಕಿತ್ಸೆ ನೀಡಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಸಿದ್ಧಗೊಳ್ಳುತ್ತಿವೆ. ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ ಈ ನಿಟ್ಟಿನಲ್ಲಿ ಕಾಯೋನ್ಮುಖವಾಗಿದ್ದು, ಆಸ್ಪತ್ರೆಯ ಅರ್ಧದಷ್ಟು ಮೀಸಲಿರಿಸಿದೆ.
ಸದ್ಯ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗಳಲ್ಲಿ, ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ಧಾರಣೆ ಕಡ್ಡಾಯ ಗೊಳಿಸಲಾಗಿದೆ. ಇದಕ್ಕೆ ಜನರಿಂದ ಸೂಕ್ತ ಸ್ಪಂದನೆ ವ್ಯಕ್ತವಾಗುತ್ತಿಲ್ಲ. ಮಾರುಕಟ್ಟೆ ಸೇರಿದಂತೆ ಅಗತ್ಯ ಸ್ಥಳಗಳಲ್ಲಿ ಮಾರ್ಗಸೂಚಿ ಪಾಲನೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಸೋಮವಾರ ಸಭೆ: ಕಠಿಣ ನಿಯಮ ಜಾರಿ?
ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ತಜ್ಞರು, ಆರೋಗ್ಯ ಅಧಿಕಾರಿಗಳ ಜೊತೆಗೆ ಸಭೆ ನಡೆಯಲಿದೆ. ಈ ವೇಳೆ ಹೊಸ ವರ್ಷಾಚರಣೆಗೆ ಟಫ್ ರೂಲ್ಸ್ ಜಾರಿಯಾಗುವ ಸಾಧ್ಯತೆ ಇದೆ. ಮಾಸ್ಕ್, ಸ್ಯಾನಿಟೈಸರ್ ಬಳಕೆ, ಪಾರ್ಟಿ ಹಾಲ್‌ಗಳಲ್ಲಿ ಜನರ ಮೀರಿ ಹೇರಿಕೆ, ಬಾರ್ ಪಬ್ ರೆಸ್ಟೋರೆಂಟ್ ಪ್ರತ್ಯೇಕ ನಿಯಮ, ವರ್ಕ್ ಫ್ರಂ ಹೋಂ, ಕಚೇರಿ, ಕಂಪನಿಗಳಲ್ಲಿ 50:50 ಸೂತ್ರ, ಬಸ್ಸು, ಆಟೋ, ಟ್ಯಾಕ್ಸಿ ಪ್ರಯಾಣಿಕರಿಗೆ ಮಿತಿ, ಮದುವೆ, ಜಾತ್ರೆ, ಹಬ್ಬಗಳಿಗೆ ಷರತ್ತು ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಸಭೆ ಬಳಿಕ ಉತ್ತರ ಸಿಗಲಿದೆ.












Click it and Unblock the Notifications