ಕಾವೇರಿಗಾಗಿ ಉತ್ತರ ಕರ್ನಾಟಕವೂ ನಿಮ್ಮ ಜೊತೆ ನಿಲ್ಲಲಿದೆ; ಯತ್ನಾಳ್
ಬೆಂಗಳೂರು, ಸೆಪ್ಟೆಂಬರ್ 25; ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವುದು ಕರ್ನಾಟಕದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ನೀರು ಹರಿಸದಂತೆ ಸರ್ಕಾರವನ್ನು ಒತ್ತಾಯಿಸಲು ಸೆಪ್ಟೆಂಬರ್ 26ರ ಮಂಗಳವಾರ ಬೆಂಗಳೂರು ಬಂದ್, ಸೆಪ್ಟೆಂಬರ್ 29ರ ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ಕಾವೇರಿ ವಿಚಾರದಲ್ಲಿ ಹೋರಾಟ ಮಾಡುವಲ್ಲಿ ಕನ್ನಡ ಒಕ್ಕೂಟ, ರೈತ ಸಂಘಟನೆಗಳ ನಡುವೆ ಒಮ್ಮತ ಮೂಡಿಲ್ಲ. ಇದರಿಂದಾಗಿ ಒಂದೇ ವಾರದಲ್ಲಿ ಬೆಂಗಳೂರು ನಗರ ಎರಡು ಬಂದ್‌ಗೆ ಸಾಕ್ಷಿಯಾಗಲಿದೆ. ಮಂಗಳವಾರದ ಬಂದ್‌ಗೆ ಹಲವಾರು ಸಂಘಟನೆಗಳು ಬೆಂಬಲ ಘೋಷಣೆ ಮಾಡಿವೆ.

ಕಾವೇರಿ ಹೋರಾಟ ನಡೆದಾಗ ಉತ್ತರ ಕರ್ನಾಟಕ, ಕರಾವಳಿ ಭಾಗದ ಜನರು ಸ್ಪಂದಿಸುವುದಿಲ್ಲ ಎಂಬ ಆರೋಪವಿದೆ. ಆದರೆ ಈ ಬಾರಿ ಅಖಂಡ ಕರ್ನಾಟಕವೇ ಕಾವೇರಿಗಾಗಿ ಶುಕ್ರವಾರ ಬಂದ್‌ಗೆ ಕೈ ಜೋಡಿಸುವ ಭರವಸೆ ಇದೆ.
ಯತ್ನಾಳ್ ಟ್ವೀಟ್; ವಿಜಯಪುರ ನಗರ ಕ್ಷೇತ್ರದ ಶಾಸಕ, ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಕಾವೇರಿ ಹೋರಾಟದ ಕುರಿತು ಸೋಮವಾರ ಟ್ವೀಟ್ ಮಾಡಿದ್ದಾರೆ. 'ಎರಡೆರಡು ಸಂಘಟನೆಗಳು ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ವೀಕರಿಸಬೇಡಿ' ಎಂದು ಸಲಹೆ ನೀಡಿದ್ದಾರೆ.
'ನಾನು ಕನ್ನಡ ಪರ ಸಂಘಟನೆಗಳು ಹಾಗು ರೈತ ಸಂಘಟನೆಗಳಲ್ಲಿ ಮನವಿ ಮಾಡುತ್ತೇನೆ, ನಾಡು ನುಡಿಗಾಗಿ ಎಲ್ಲರೂ ಒಟ್ಟಾಗಿ ಒಂದೇ ದಿನ ಹೋರಾಟ ಮಾಡಿ. ನಿಮ್ಮ ಜೊತೆ ನಾವಿದ್ದೇವೆ' ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
'ಕಾವೇರಿಗಾಗಿ ಉತ್ತರ ಕರ್ನಾಟಕವೂ ನಿಮ್ಮ ಜೊತೆ ನಿಲ್ಲಲಿದೆ, ನಮ್ಮ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ನೀವು ನಮ್ಮೊಂದಿಗೆ ನಿಲ್ಲಿ. ಸಂಪೂರ್ಣ ಕರ್ನಾಟಕದ ನಾಡು ನುಡಿಗಾಗಿ ನಾವೆಲ್ಲರೂ ಒಟ್ಟಿಗೆ ನಿಲ್ಲೋಣ' ಎಂದು ಯತ್ನಾಳ್ ಕರೆ ನೀಡಿದ್ದಾರೆ.
ಕಾವೇರಿ ವಿಚಾರದಲ್ಲಿ ಈಗಾಗಲೇ ಮಂಡ್ಯ, ಮದ್ದೂರು ಬಂದ್ ನಡೆಸಲಾಗಿದೆ. ರಾಮನಗರ ಬಂದ್‌ಗೆ ಸಹ ಕರೆ ನೀಡಲಾಗಿದೆ. ಸೆಪ್ಟೆಂಬರ್ 26ರ ಮಂಗಳವಾರ ಬೆಂಗಳೂರು ಬಂದ್ ಮತ್ತು ಕನ್ನಡ ಒಕ್ಕೂಟ ಸೆಪ್ಟೆಂಬರ್ 29ರ ಶುಕ್ರವಾರ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದೆ.
ಮತ್ತೊಂದು ಕಡೆ ಭದ್ರಾ ಬಲದಂಡೆ ನಾಲೆಗಳಿಗೆ 100 ದಿನ ನಿರಂತರವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿ ಭಾರತೀಯ ರೈತ ಒಕ್ಕೂಟ ಸೋಮವಾರ ದಾವಣಗೆರೆ ಬಂದ್‌ಗೆ ಕರೆ ನೀಡಿತ್ತು. ಈ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರು ಬಂದ್ ಮತ್ತು ಕರ್ನಾಟಕ ಬಂದ್‌ಗೆ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಬೆಂಬಲ ನೀಡಲಿದೆಯೇ? ಎಂದು ಕಾದು ನೋಡಬೇಕಿದೆ. ಮಂಡ್ಯದಲ್ಲಿ ಶನಿವಾರ ಬಿಜೆಪಿ ನಾಯಕರು ತಮಿಳುನಾಡಿಗೆ ಕಾವೇರಿ ನೀರು ಹರಿಸುವುದು ನಿಲ್ಲಿಸಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಿದೆ. 90ಕ್ಕೂ ಅಧಿಕ ಸಂಘಟನೆಗಳು ಈ ಬಂದ್‌ಗೆ ಬೆಂಬಲ ನೀಡಿವೆ. ರಾಮನಗರ, ಮದ್ದೂರು, ಮಳವಳ್ಳಿ ತಾಲೂಕಿನಲ್ಲಿಯೂ ಮಂಗಳವಾರ ಬಂದ್ ನಡೆಸಲು ತೀರ್ಮಾನಿಸಲಾಗಿದೆ.
ಬೆಂಗಳೂರು ಬಂದ್ ವೇಳೆ ಬಿಎಂಟಿಸಿ ಬಸ್‌ಗಳನ್ನು ರಸ್ತೆಗೆ ಇಳಿಸಬೇಡಿ ಎಂದು ಕೆಎಸ್ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಕರೆ ನೀಡಿದೆ. ಆದ್ದರಿಂದ ಬೆಂಗಳೂರಿನಲ್ಲಿ ಮಂಗಳವಾರ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಆಟೋ ಮತ್ತು ಕ್ಯಾಬ್‌ಗಳ ಸಂಚಾರದಲ್ಲಿಯೂ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ.
ಸೆಪ್ಟೆಂಬರ್ 26ರ ಮಂಗಳವಾರದ ಬೆಂಗಳೂರು ಬಂದ್ ಕರೆ ವಾಪಸ್ ಪಡೆಯಿರಿ. ಶುಕ್ರವಾರ ಅಖಂಡ ಕರ್ನಾಟಕ ಬಂದ್ ಮಾಡೋಣ ಎಂಬ ಕೆಲವು ಸಂಘಟನೆಗಳ ಬೇಡಿಕೆಗೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಒಪ್ಪಿಗೆ ನೀಡಿಲ್ಲ. ಆದ್ದರಿಂದ ಮಂಗಳವಾರ ಬೆಂಗಳೂರು ಬಂದ್ ನಡೆಯುವುದು ಖಚಿತವಾಗಿದೆ.












Click it and Unblock the Notifications