Vande Metro: ಹುಬ್ಬಳ್ಳಿ-ಬೆಳಗಾವಿ-ದಾವಣಗೆರೆ ಮಾರ್ಗದಲ್ಲಿ RRTS ಕ್ಷಿಪ್ರ ರೈಲುಗಳಿಗೆ ಜೋರಾಯ್ತು ಬೇಡಿಕೆ
ಬೆಂಗಳೂರು: ಕರ್ನಾಟಕದ ಎರಡು ಭಾಗಗಳ ಪ್ರಮುಖ ಮಾರ್ಗದಲ್ಲಿ ಎರಡು ನಮೋ ಭಾರತ್ ಬರಲಿವೆ ಎಂದು ಹೇಳಿ ವರ್ಷವಾಯಿತು. ಆ ಬಗ್ಗೆ ಯಾವುದೇ ಅಪ್ಡೇಟ್ ಸರ್ಕಾರವಾಗಲಿ, ಜನಪ್ರತಿನಿಧಿಗಳಾಲಿ ನೀಡಿಲ್ಲ. ಇದೀಗ ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ವಿವಿಧ ಮಾರ್ಗಗಳಲ್ಲಿ 'ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ (RRTS) ವ್ಯವಸ್ಥೆ ಅನುಷ್ಠಾನ ಜಾರಿಗೊಳಿಸುವಂತೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಒಕ್ಕೋರಲಿನಿಂದ ಆಗ್ರಹಿಸುತ್ತಿದ್ದಾರೆ.
ಉತ್ತರ ಕರ್ನಾಟಕ ಭಾಗದ ವಿವಿಧ ಪ್ರದೇಶಗಳ ಆರ್ಥಿಕತೆಯನ್ನು ಹೆಚ್ಚಿಸಲು ಮತ್ತು ದಕ್ಷ ಸಾರಿಗೆಯನ್ನು ಒದಗಿಸಲು ಬೆಳಗಾವಿ-ಧಾರವಾಡ-ಹುಬ್ಬಳ್ಳಿ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಕಾರಿಡಾರ್ ಅಗತ್ಯವಿದೆ. ಈ ಮಾರ್ಗಕ್ಕೆ ಸಂಭಾವ್ಯ ವಿಸ್ತರಣೆಗಳು ಬೇಕಾಗಿವೆ. ಹುಬ್ಬಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು 'ಹುಬ್ಬಳ್ಳಿ-ಹಾವೇರಿ, ಹುಬ್ಬಳ್ಳಿ-ಗದಗ ಮತ್ತು ಹಾವೇರಿ-ದಾವಣಗೆರೆಗೆ ವಿಸ್ತೃತ ಸಾರ್ವಜನಿಕ ಬಸ್ ಜಾಲವು ನಗರಗಳಲ್ಲಿ ಉತ್ತಮ ಫೀಡರ್ ಜಾಲವಾಗಿ ಕಾರ್ಯ ನಿರ್ವಹಿಸಲು ಅವಕಾಶ ಇದೆ ಎಂದು ಆನ್ಲೈನ್ನಲ್ಲಿ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಮಂಜೂರಾದ 2 ರೈಲು ಪೈಕಿ ಒಂದೂ ಬಂದಿಲ್ಲ..!
ಈ ಸಂಬಂಧ ಎಕ್ಸ್ ಖಾತೆಯಲ್ಲಿ ರೈತ, ರಾಜಕಾರಣಿ ಸಂತೋಷ್ ನರಗುಂದ (@nargundsantosh1) ಅವರು ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಸಾಕಷ್ಟು ಕಾಮೆಂಟುಗಳು ಬಂದಿದ್ದು, ಅನೇಕರು ನಮೋ ಭಾರತ್ ರೈಲಿನ ಕುರಿತು ಆಗ್ರಹಿಸಿದ್ದಾರೆ. ಕರ್ನಾಟಕ ಸರ್ಕಾರವು ಪ್ರಸ್ತಾಪಿಸಿರುವ ಎಲ್ಲಾ ಐದು RRTS ಕಾರಿಡಾರ್ಗಳು ಬೆಂಗಳೂರಿನ ಸುತ್ತಲೂ ಸುಸ್ಥಿರವಾಗಿಲ್ಲ. ಬೆಂಗಳೂರು-ಮೈಸೂರು ಮತ್ತು ಹುಬ್ಬಳ್ಳಿ-ದಾವಣಗೆರೆ ಮಧ್ಯೆ ಎರಡು ನಮೋ ಭಾರತ್ (ವಂದೇ ಮೆಟ್ರೋ) ಮಂಜೂರಾಗಿವೆ. ಆದರೆ ಒಂದೂ ಬಂದಿಲ್ಲ ಎಂದು ಎಕ್ಸ್ ಬಳಕೆದಾರರು ಪ್ರಸ್ತಾಪಿಸಿದ್ದಾರೆ.
ಈ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕೇಂದ್ರದಿಂದ ರಾಜ್ಯಕ್ಕೆ ಎರಡು ನಮೋ ಭಾರತ್ ರೈಲುಗಳು ಘೋಷಣೆ ಆಗಿವೆ ಎಂದು ಹರ್ಷ ವ್ಯಕ್ತಪಡಿಸಿದ್ದರು. ಆದರೆ ಅದರ ನಂತರ ಯಾವುದೇ ಅಪ್ಡೇಟ್ ಕೊಟ್ಟಿಲ್ಲ. ಹಾಗಾದರೆ ಈ ಯೋಜನೆ ಏನಾಯಿತು ಎಂಬ ಪ್ರಶ್ನೆ ಉದ್ಭವವಾಗಿದೆ.
ಬೆಂಗಳೂರು-ಮುಂಬೈ ರೈಲು ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಮಾರ್ಗವಾಗಿ ಸಾಗಿದರೆ ಅನೇಕ ಪ್ರಯೋಜನಗಳು ದೊರೆಯುತ್ತವೆ . ಅದೇ ರೀತಿ ಸ್ಥಳೀಯವಾಗಿ ಸಾರಿಗೆ ಸುಧಾರಣೆಗೆ, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶವನ್ನು ಕ್ಷಿಪ್ರವಾಗಿ ತಲುಪಲು ಸಹಾಯ ಮಾಡುವ ನಮೋ ಭಾರತ್ ರೈಲು ಕಾರ್ಯಾಚರಣೆಯಿಂದ ಸಾಕಷ್ಟು ಅನುಕೂಲವಾಗಲಿದೆ. ಈ ಸಂಬಂಧ ರೈಲ್ವೆ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಈ ಭಾಗದ ಜನರು ಒತ್ತಾಯಿಸಿದ್ದಾರೆ.
ದಾವಣಗೆರೆ-ಸೊಲ್ಲಾಪುರವರೆಗೆ ಈ ರೈಲು ಬೇಕು
'ನಮೋ ಭಾರತ್ ರೈಲುಗಳು ಕೇವಲ ಹುಬ್ಬಳ್ಳಿ, ಧಾರವಾಡ, ಹಾವೇರಿಗೆ ಮಾತ್ರವಲ್ಲದೇ ಕೊಲ್ಲಾಪುರವರೆಗೆ ಬೇಕಿದೆ. ಭವಿಷ್ಯದ ದೃಷ್ಟಿಯಿಂದ ಐಟಿ ಕಂಪನಿಗಳು, ಕಚ್ಚಾ ವಸ್ತುಗಳ ಸಾಗಣೆ, ಸಾರಿಗೆ ಪ್ರಯೋಜನಕ್ಕಾಗಿ ರೈಲಿನ ಅಗತ್ಯತೆ ಇದೆ' ಎಂದು ಪೋಸ್ಟ್ಗೆ ಒಬ್ಬರು ಕಾಮೆಂಟ್ ಮಾಡಿದ್ದಾರೆ.
'ಹುಬ್ಬಳ್ಳಿ- ದಾವಣಗೆರೆ ಮಧ್ಯ ವಂದೇ ಮೆಟ್ರೋ/ಭಾರತ ರೈಲು ಬರುತ್ತದೆ ಎಂದು ಹೇಳಿ ಒಂದು ವರ್ಷ ಮೇಲಾಯಿತು. ಅಂದು ಪ್ರಹ್ಲಾದ್ ಜೋಶಿಯವರು ಅವರು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದರು. ಆದರೆ ಯೋಜನೆ ಸಾಕಾರ ಕುರಿತು ಅವರು ಕೇಂದ್ರ ರೈಲ್ವೆ ಸಚಿವರ ಬಳಿ ಕೇಳಿಲ್ಲ, ಈವರೆಗೆ ಒಂದೇ ಒಂದು ಅಪ್ಡೇಟ್ ಸಹ ಕೊಟ್ಟಿಲ್ಲ' ಎಂದು ಇನ್ನೊಬ್ಬರು ದೂರಿದರು.
ಪ್ರಾದೇಶಿಕ ಅಸಮಾನತೆಗೆ ಅಸಮಾಧಾನ
'ಹುಬ್ಬಳ್ಳಿ, ಧಾರವಾಡ, ಬೆಳಗಾವಿ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಆದರೆ ರಾಜ್ಯ ಸರ್ಕಾರ ಮಾತ್ರ ಬೆಂಗಳೂರಿನ ಅಭಿವೃದ್ಧಿ ವಿಸ್ತರಣೆಗೆ ಮಾತ್ರವೇ ಮುಂದಾಗುತ್ತಿದೆ' ಎಂದು ಮೂರನೇಯವರು ಪ್ರಾದೇಶಿಕ ಅಸಮಾನತೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ಜೊತೆಗೆ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಬಿಡುಗಡೆ ಒಲವು ತೋರಿದ ರೈಲ್ವೆ ಇಲಾಖೆಯು ಈಗಾಗಲೇ ಘೋಷಿಸಿದ ನಮೋ ಭಾರತ್ ಮತ್ತು ಜನರ ಆಗ್ರಹಿಸುತ್ತಿರುವ ಮಾರ್ಗದಲ್ಲಿ ರೈಲುಗಳ ಕಾರ್ಯಾಚರಣೆ ಕುರಿತು ಗಂಭೀರವಾಗಿ ಪರಿಗಣಿಸಿಬೇಕಿದೆ.













Click it and Unblock the Notifications