ಹುದ್ದೆ ಖಾಲಿ ಇಲ್ಲ, ದಲಿತ ಸಿಎಂ ಆಗುವ ಪ್ರಶ್ನೆಯೇ ಇಲ್ಲ: ಜಿ ಪರಮೇಶ್ವರ್
ಬೆಂಗಳೂರು, ಅಕ್ಟೋಬರ್ 31: ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಹೀಗಾಗಿ ರಾಜ್ಯದಲ್ಲಿ ದಲಿತ ಸಿಎಂ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಅವರ ನಿವಾಸದಲ್ಲಿ ಔತಣಕೂಟ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ಮಂದಿ ಇಲ್ಲಿ ಸೇರಿದ್ದರು. ಸಿಎಂ ಬದಲಾವಣೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ ಅವರು, ಸಿಎಂ ಸ್ಥಾನಕ್ಕೆ ಅಧಿಕಾರ ಹಂಚಿಕೆ ಒಪ್ಪಂದದ ವದಂತಿಯನ್ನು ತಿರಸ್ಕರಿಸಿದರು. ಈಗ ಮುಖ್ಯಮಂತ್ರಿ ಇದ್ದಾರೆ. ಮತ್ತೆ ಮುಖ್ಯಮಂತ್ರಿ ಬದಲಾವಣೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಬಿಜೆಪಿಯವರು ಮಾತ್ರ ಈ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ತಿಳಿಸಿದರು.

ಕೆಲವು ಆಯ್ದ ಕಾಂಗ್ರೆಸ್ ನಾಯಕರು ಮಾತ್ರ ಅಧಿಕಾರ ಅನುಭವಿಸುತ್ತಿದ್ದಾರೆ ಎಂಬ ಟೀಕೆಗೆ ಸಂಬಂಧಿಸಿದಂತೆ, ಪರಮೇಶ್ವರ ಅವರು ಸಂಪುಟದಲ್ಲಿ ಪ್ರಾದೇಶಿಕವಾಗಿ ಸಾಕಷ್ಟು ಪ್ರಾತಿನಿಧ್ಯವಿದೆ. ಮಂಡಳಿ ಮತ್ತು ನಿಗಮಗಳಿಗೆ ಸದಸ್ಯರನ್ನು ಶೀಘ್ರದಲ್ಲೇ ನೇಮಕ ಮಾಡಲಾಗುವುದು ಎಂದರು.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಗೈರುಹಾಜರಿಯೊಂದಿಗೆ ಗೃಹ ಸಚಿವರ ನಿವಾಸದಲ್ಲಿ ನಡೆದ ಔತಣಕೂಟದ ಕುರಿತು ಪ್ರಶ್ನೆಗಳು ಎದ್ದಿದ್ದು, ಸಿದ್ದರಾಮಯ್ಯ ಸೇರಿದಂತೆ ನಾಲ್ವರು ಸಚಿವರು ಮಾತ್ರ ಹಾಜರಿದ್ದರು ಎನ್ನಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥವಾಗಿ ಸರ್ಕಾರವನ್ನು ಮುನ್ನಡೆಸುತ್ತಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಕೆಲಸಕ್ಕೆ ಬಾರದವರ ಹೇಳಿಕೆಗೆ ಆದ್ಯತೆ ನೀಡಬೇಕಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಬಣ ಇಲ್ಲ. ಇರುವುದೊಂದೆ ಕಾಂಗ್ರೆಸ್ ಬಣ. ಮುಖ್ಯಮಂತ್ರಿ ಬದಲಾವಣೆ ಎಂದೆಲ್ಲ ಕೆಲಸಕ್ಕೆ ಬಾರದವರು ಚರ್ಚೆ ಮಾಡುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ ಮಹದೇವಪ್ಪ ಹೇಳಿದ್ದಾರೆ.
ಇತ್ತೀಚೆಗೆ ಸಿದ್ದರಾಮಯ್ಯ ನಾಯಕತ್ವದಲ್ಲಿ ಸರ್ಕಾರ ಬಹಳ ಸ್ಥಿರವಾಗಿದೆ. ರಾಜಕೀಯ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರುತ್ತದೆ. ಅದರರ್ಥ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಾರೆ ಎಂದಲ್ಲ ಎಂದು ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಹೇಳಿದ್ದರು.
ಒಂದು ದೃಷ್ಟಿಯಲ್ಲಿ ಈ ರೀತಿಯ ಅಂಶಗಳು ಒಳ್ಳೆಯದೇ ಚರ್ಚೆಯಾದಾಗ ಹೊಸ ಅಂಶಗಳು ಹೊರ ಬರಬಹುದು. ಸಿದ್ದರಾಮಯ್ಯ ನೇತ್ರತ್ವದ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಯಾವುದೇ ಶಾಸಕರು ಆಪರೇಶನ್ ಕಮಲಕ್ಕೆ ಒಳಗಾಗುತ್ತಿರುವ ಮಾಹಿತಿ ನನಗಿಲ್ಲ. ಸರ್ಕಾರಕ್ಕೆ ಸಂಪೂರ್ಣ ಬಹುಮತವಿದೆ, ಅಸ್ಥಿರವಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.












Click it and Unblock the Notifications