Family Politics: ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೊಡಲ್ಲ; ಸ್ಪರ್ಧೆ ವಿಚಾರ ಅವರಿಗೆ ಬಿಟ್ಟದ್ದು: ಕುಮಾರಸ್ವಾಮಿ ಅಚ್ಚರಿ ಹೇಳಿಕೆ
ಬೆಂಗಳೂರು, ಜುಲೈ 17: ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಕಾಂಗ್ರೆಸ್, ಇದೀಗ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದ್ದು, ಕಾಂಗ್ರೆಸ್ ಗೆ ತಿರುಗೇಟು ನೀಡಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿಗೆ ಜೆಡಿಎಸ್ ಮುಂದಾಗಿದೆ. ಇತ್ತ ಹಲವು ಲೆಕ್ಕಾಚಾರಗಳ ಚರ್ಚೆ ಬಿಜೆಪಿ ಹಾಗೂ ಜೆಡಿಎಸ್ ನಲ್ಲಿ ನಡೆಯುತ್ತಿದೆ.
ಇತ್ತ ಪ್ರಾದೇಶಿಕ ಪಕ್ಷ ಜೆಡಿಎಸ್ ವಿಧಾನಸಭಾ ಚುನಾವಣೆಯಲ್ಲಿ ಕೇವಲ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಕುಟುಂಬ ರಾಜಕಾರಣದ ಕಳಂಕ ಮುಕ್ತಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ. ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮಾತನಾಡಿದ್ದಾರೆ.

ಹೌದು, 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿಯಾಗಲಿದೆ ಎಂಬ ಚರ್ಚೆಗಳು ಜೋರಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಗೆ ಗೌಡರ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ಹಲವು ವರ್ಷಗಳಿಂದ ಕುಟುಂಬ ರಾಜಕಾರಣದ ಕಳಂಕದ ಹಣೆ ಪಟ್ಟಿಯನ್ನ ಹೊತ್ತುಕೊಂಡಿರುವ ಜೆಡಿಎಸ್ ನಲ್ಲಿ 2024 ರ ಲೋಕಸಭಾ ಚುನಾವಣೆಯಲ್ಲಿ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡದೇ ಕಾರ್ಯಕರ್ತರನ್ನ ಕಣಕ್ಕಿಳಿಸುವ ಮೂಲಕ ಗೆಲ್ಲಿಸಿಕೊಂಡು ಬರಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
2024 ರ ಚುನಾವಣೆಗೆ ನಾನ್ನೊಬ್ಬ ಮಾತ್ರವಲ್ಲದೇ , ನಿಖಿಲ್ ಕುಮಾರಸ್ವಾಮಿ ಯೂ ನಿಲ್ಲಲ್ಲ ಎಂದು ಸ್ಪಷ್ಟ ಪಡಿಸಿದ ಅವರು, ಹಾಲಿ ಹಾಸನ ಕ್ಷೇತ್ರದ ಸಂಸದರಾದ ಪ್ರಜ್ವಲ್ ರೇವಣ್ಣ ಅವರು ಸಹ ನಿಲ್ಲುವುದು ಬೇಡ, ಈ ಬಾರಿಯ ಚುನಾವಣೆಯಲ್ಲಿ ದೇವೇಗೌಡ ಕುಟುಂಬದಿಂದ ಯಾರು ನಿಲ್ಲದೆ. ಕಾರ್ಯಕರ್ತರನ್ನ ಗೆಲ್ಲಿಸುವ ವಾತಾವರಣವನ್ನ ಸೃಷ್ಟಿ ಮಾಡಬೇಕು. ಪದೇ ಪದೇ ಕುಟುಂಬ ರಾಜಕಾರಣ ಎಂಬ ಮಾತನ್ನ ಸಂಪೂರ್ಣವಾಗಿ ತೆಗದು ಹಾಕಬೇಕು. ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ತರದಂತೆ ನಡೆದುಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದರು.

2024 ರ ಎಲೆಕ್ಷನ್ ಗೆ ಗೌಡರ ಕುಟುಂಬದಿಂದ ಯಾರೂ ಸ್ಪರ್ಧಿಸಲ್ಲ. ಕಠಿಣವಾದ್ರೂ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದ್ದು, ದೂರ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಬೆಂಗಳೂರು ಗ್ರಾಮಾಂತರದಿಂದ ನಾನು ಕೂಡ ಸ್ಪರ್ಧೆ ಮಾಡಲ್ಲ, ನಾನೊಬ್ಬ ಅಲ್ಲ ನಮ್ಮ ಕುಟುಂಬದಿಂದ ಯಾರು ನಿಲ್ಲಲ್ಲ. ಹಾಸನದ ಹಾಲಿ ಸಂಸದರಿದ್ದಾರೆ, ಅದು ಅವರ ತಿರ್ಮಾನಕ್ಕೆ ಬಿಟ್ಟಿದ್ದು, ನನ್ನ ಅಭಿಪ್ರಾಯ ಕುಟುಂಬದಿಂದ ಯಾರು ನಿಲ್ಲದೆ ಕಾರ್ಯಕರ್ತರನ್ನೆ ಗೆಲ್ಲಿಸಬೇಕು ಎಂದು ಕುಮಾರಸ್ವಾಮಿ ಅಚ್ಚರಿಯ ಹೇಳಿಕೆಯನ್ನ ನೀಡಿದ್ದಾರೆ.












Click it and Unblock the Notifications