ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕಾಗಿ ಸ್ಮಾರ್ಟ್ ಕಾರ್ಡ್ ಸದ್ಯಕ್ಕೆ ಬೇಡ
ಬೆಂಗಳೂರು, ಜೂನ್ 8: ಜೂನ್ 11 ರಿಂದ ಕರ್ನಾಟಕದಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುವ ಶಕ್ತಿ ಯೋಜನೆಗಾಗಿ ನೀಡಲಾಗುತ್ತದೆ ಎನ್ನಲಾಗಿದ್ದ ಸ್ಮಾರ್ಟ್‌ಕಾರ್ಡ್ ಅಗತ್ಯ ಸದ್ಯಕ್ಕೆ ಬೇಕಾಗದಿರಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಮಹಿಳೆಯರಿಗೆ ಮೂರು ತಿಂಗಳ ನಂತರವೇ ಶಕ್ತಿ ಸ್ಮಾರ್ಟ್‌ಕಾರ್ಡ್‌ಗಳು ಬೇಕಾಗುತ್ತವೆ. ಆದರೆ ನಾವು ಇತರ ದೀರ್ಘಾವಧಿಯ ಆಯ್ಕೆಗಳನ್ನು (ಶೂನ್ಯ ದರದ ಟಿಕೆಟ್‌ಗಳಂತಹ) ನೋಡಲು ಸಿದ್ಧರಿದ್ದೇವೆ. ಸರ್ಕಾರದ ಸೇವಾ ಸಿಂಧು ಪೋರ್ಟಲ್ ಮತ್ತು ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಮತ್ತು ಬಹುಶಃ ಬಸ್ ನಿಲ್ದಾಣಗಳಲ್ಲಿ ಸ್ಮಾರ್ಟ್ ಕಾರ್ಡ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ನೆಲೆಸಿರುವ ಮಹಿಳೆಯರು ಮಾತ್ರ ಈ ಶಕ್ತಿ ಯೋಜನೆಗೆ ಅರ್ಹರಾಗಿರುತ್ತಾರೆ. ಇದೇ ಭಾನುವಾರ ವಿಧಾನಸೌಧದಲ್ಲಿ ನಡೆಯುವ ಸಮಾರಂಭದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು. ಜೂನ್ 5 ರಂದು, ಸಾರಿಗೆ ಇಲಾಖೆಯು ಈ ಯೋಜನೆಗೆ ಮಾರ್ಗಸೂಚಿಗಳನ್ನು ನಿರ್ದಿಷ್ಟಪಡಿಸಿದ್ದು, ಅದು ಬಾಲಕಿಯರು ಮತ್ತು ಮಂಗಳಮುಖಿಯರನ್ನು ಸಹ ಒಳಗೊಂಡಿದೆ ಎಂದರು.
ಮೊದಲ ಮೂರು ತಿಂಗಳವರೆಗೆ ಫಲಾನುಭವಿಗಳು ಸರ್ಕಾರದಿಂದ ನೀಡಿದ ಫೋಟೋ ಗುರುತಿನ ಮತ್ತು ವಿಳಾಸ ಪುರಾವೆಗಳನ್ನು ತೋರಿಸಬೇಕು. ಅದರ ನಂತರ, ಅವರು ಸೇವಾ ಸಿಂಧು ಮೂಲಕ ಶಕ್ತಿ ಸ್ಮಾರ್ಟ್‌ಕಾರ್ಡ್‌ಗಳನ್ನು ಪಡೆಯಬೇಕಾಗುತ್ತದೆ. ಕರ್ನಾಟಕದ ಸರ್ಕಾರಿ ಬಸ್ಸುಗಳು ಪ್ರತಿದಿನ ಸುಮಾರು 40 ಲಕ್ಷ ಮಹಿಳೆಯರಿಗೆ ಸೇವೆ ಒದಗಿಸುತ್ತವೆ. ಉಚಿತ ಪ್ರಯಾಣ ಯೋಜನೆಯಡಿಯಲ್ಲಿ ಈ ಸಂಖ್ಯೆಯು ಶೇಕಡಾ 10 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ, ಇದು ಸರ್ಕಾರಕ್ಕೆ ವರ್ಷಕ್ಕೆ 4,000 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದರು.
ಸಾರ್ವಜನಿಕ ಸಾರಿಗೆ ಕಾರ್ಯಕರ್ತರು ಸ್ಮಾರ್ಟ್‌ಕಾರ್ಡ್‌ನ ಅವಶ್ಯಕತೆಯು ಬಡವರನ್ನು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದವರಿಗೆ ಅನಾನೂಕೂಲವಾಗಬಹುದು. ಈ ಬಗ್ಗೆ ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆ (ಬಿಬಿಪಿವಿ) ನಿಯೋಗ ಸಾರಿಗೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಸ್ಮಾರ್ಟ್‌ಕಾರ್ಡ್ ಅವಶ್ಯಕತೆಯು ಯೋಜನೆಯ ಸಂಭಾವ್ಯ ಪ್ರಯೋಜನಗಳಿಗೆ ತಡೆಯಾಗುತ್ತದೆ ಎಂದು ಗುಂಪು ಸೂಚಿಸಿತು. ಇದು ಮಹಿಳೆಯರಿಗೆ ಮತ್ತು ಸಾರಿಗೆ ಸಂಸ್ಥೆಗಳಿಗೆ ಮಾತ್ರವಲ್ಲದೆ ಅನೇಕ ಫಲಾನುಭವಿಗಳಿಗೂ ಸಮಸ್ಯೆ ಎಂದು ಪತ್ರದಲ್ಲಿ ಹೇಳಲಾಗಿದೆ.

ನಿರ್ದಿಷ್ಟವಾಗಿ ಹೇಳುವುದಾದರೆ ದೂರದ ಹಳ್ಳಿಗಳ ಬಡ ಮಹಿಳೆಯರು ಆನ್‌ಲೈನ್‌ನಲ್ಲಿ ಅಥವಾ ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಸ್ಮಾರ್ಟ್‌ಕಾರ್ಡ್‌ಗಳನ್ನು ಪಡೆಯಲು ಕಷ್ಟವಾಗುತ್ತದೆ. ಇದು ಭ್ರಷ್ಟಾಚಾರಕ್ಕೆ ಕಾರಣವಾಗಬಹುದು ಎಂದು ಗುಂಪು ವಾದಿಸಿದೆ. ಸ್ಮಾರ್ಟ್‌ಕಾರ್ಡ್‌ಗಳಿಗೆ ಅಗತ್ಯವಿರುವ ದಾಖಲೆಗಳ ಬಗ್ಗೆ ಸೇವಾ ಸಿಂಧುವಿನಲ್ಲಿ ಸಂಭಾವ್ಯ ದೋಷಗಳಿದೆ ಎಂದು ಹೇಳಿತು. ಇಲ್ಲಿ ಮಹಿಳೆಯರ ಖಾಸಗಿತನದ ಮೇಲೆ ಪರಿಣಾಮ ಬೀರಲಿದ್ದು, ಅಂಕಿಅಂಶಗಳು ದುರುಪಯೋಗಪಡಿಸಿಕೊಳ್ಳಬಹುದು ಎಂದು ಹೇಳಿದೆ.
ಬಿಬಿವಿಪಿ ಸದಸ್ಯ ವಿನಯ್ ಕೆ ಎಸ್, ಸ್ಮಾರ್ಟ್‌ಕಾರ್ಡ್ ಅವಶ್ಯಕತೆ ಸಂಪೂರ್ಣವಾಗಿ ಅನಗತ್ಯ. ತಮಿಳುನಾಡು, ದೆಹಲಿ ಮತ್ತು ಪಂಜಾಬ್‌ನಂತೆ ಕರ್ನಾಟಕವು ಮಹಿಳಾ ಪ್ರಯಾಣಿಕರಿಗೆ ಗುಲಾಬಿ ಅಥವಾ ಶೂನ್ಯ ದರದ ಟಿಕೆಟ್‌ಗಳನ್ನು ಏಕೆ ನೀಡಲು ಸಾಧ್ಯವಿಲ್ಲ. ಕರ್ನಾಟಕಕ್ಕೆ ಓದಲು, ಕೆಲಸ ಮಾಡಲು ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯಲು ಬರುವ ಇತರ ರಾಜ್ಯಗಳ ಮಹಿಳೆಯರಿಗೆ ಈ ಯೋಜನೆಯನ್ನು ವಿಸ್ತರಿಸಬೇಕು ಎಂದು ಹೇಳಿದರು.












Click it and Unblock the Notifications