Rain Alert: ರಾಜ್ಯದ ಈ ಜಿಲ್ಲೆಗಳಲ್ಲಿ ಮಾತ್ರ ಮಳೆ ನಿರೀಕ್ಷೆ
ಕಳೆದ ಹತ್ತು ದಿನಗಳಿಂದ ಅಬ್ಬರಿಸಿದ್ದ ಮಳೆ ಈಗ ಶಾಂತವಾಗಿದೆ. ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಮಳೆ ತೀವ್ರತೆ ಕಡಿಮೆಯಾಗಿದ್ದು, ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ ಸಾಧಾರಣದಿಂದ, ಲಘು ಮಳೆಯಾಗುವ ಸಾಧ್ಯತೆ ಇದ್ದು, ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಹೇಳಿದೆ.
ಮುಂದಿನ ಐದು ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತಿರುವ ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ. ಉತ್ತರ ಒಳನಾಡು ಜಿಲ್ಲೆಗಳಿಗೆ ಅಲ್ಲಲ್ಲಿ ತುಂತುರು ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.

ಭಾನುವಾರ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಒಳನಾಡು ಭಾಗದಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಿಟ್ಟುಸಿರು ಬಿಟ್ಟ ರೈತರು
ಹಿಂಗಾರು ಮಳೆ ಅಬ್ಬರಕ್ಕೆ ಹಲವು ಜಿಲ್ಲೆಗಳಲ್ಲಿ ರೈತರು ಕಂಗಾಲಾಗಿದ್ದರು. ಮಳೆ ಬರದಿದ್ದರೂ ಕಷ್ಟ, ಹೆಚ್ಚಿಗೆ ಮಳೆ ಬಂದರೂ ಕಷ್ಟ ಎನ್ನುವ ಸ್ಥಿತಿ ರೈತರದ್ದು. ಹಲವು ಕಡೆ ಮುಂಗಾರು ಹಂಗಾಮಿನ ಬೆಳೆಗಳು ಕಟಾವಿಗೆ ಬಂದಿದ್ದು ಈ ಸಂದರ್ಭದಲ್ಲೇ ಮಳೆ ಬಿಡುವು ಕೊಡದೆ ಅಬ್ಬರಿಸಿದ ಕಾರಣ, ರಾಜ್ಯದ ಹಲವು ಜಿಲ್ಲೆಗಳ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭತ್ತದ ಗದ್ದೆಗಳೇ ಮುಳುಗಿದ್ದು ರೈತರು ನಷ್ಟದ ಭೀತಿಯಲ್ಲಿದ್ದಾರೆ. ಇನ್ನು ಶೇಂಗಾ ಕೂಡ ಭಾರಿ ಮಳೆಗೆ ಹಾಳಾಗಿದೆ. ಜೋಳ, ತೊಗರಿ ಸೇರಿದಂತೆ ಹಲವು ಬೆಳೆಗಳಿಗೆ ಭಾರಿ ಮಳೆಯಿಂದ ಹಾನಿಯಾಗಿದ್ದು ರೈತರಲ್ಲಿ ಆತಂಕ ಮೂಡಿಸಿದೆ.
ಎಡಬಿಡದೆ ಸುರಿದ ಮಳೆ ಸದ್ಯ ಬಿಡುವು ಕೊಟ್ಟಿದ್ದು ರೈತರು ಸ್ವಲ್ಪ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ. ಕೈಗೆ ಬಂದಿರುವ ಬೆಳೆಯನ್ನು ಕಟಾವು ಮಾಡಿಕೊಳ್ಳುತ್ತಿದ್ದರು, ಹಲವು ಕಡೆಗಳಲ್ಲಿ ಬೆಳೆ ಹಾನಿಯಾಗಿದೆ.
ಭಾರಿ ಮಳೆಯಿಂದಾಗಿ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ಎರಡನೇ ಬೆಳೆಗೆ ನೀರು ಸಿಗುವ ನಿರೀಕ್ಷೆಯಲ್ಲಿದ್ದಾರೆ ರಾಜ್ಯದ ರೈತರು. ಮುಂಗಾರು ಹಂಗಾಮಿನ ಬೆಳೆ ನಷ್ಟ ಉಂಟು ಮಾಡಿದರೂ, ಎರಡನೇ ಬೆಳೆಯಲ್ಲಾದರೂ ಲಾಭ ಪಡೆಯುವ ನಿರೀಕ್ಷೆ ರೈತರದ್ದಾಗಿದೆ.












Click it and Unblock the Notifications