ರಂಗೇರಿದ ಚುನಾವಣಾ ಕಣ; ಕಾಂಗ್ರೆಸ್ ಪಕ್ಷಕ್ಕೆ 60 ಕ್ಷೇತ್ರಗಳಲ್ಲಿ ಸರಿಯಾದ ಅಭ್ಯರ್ಥಿಗಳೇ ಇಲ್ಲ: ಬಸವರಾಜ ಬೊಮ್ಮಾಯಿ
ಶಿವಮೊಗ್ಗ, ಏಪ್ರಿಲ್ 7: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ 60 ಕ್ಷೇತ್ರಗಳಲ್ಲಿ ಸರಿಯಾದ ಅಭ್ಯರ್ಥಿಗಳೇ ಇಲ್ಲ. ಅಲ್ಲಿಂದ, ಇಲ್ಲಿಂದ ಅಭ್ಯರ್ಥಿಗಳ ಕರೆತಂದು ಟಿಕೆಟ್ ಕೊಡುವ ಪ್ರಯತ್ನ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಕುರಿತು ಶುಕ್ರವಾರ ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕುರಿತು ಯಾವುದೇ ಆತಂಕ ಇಲ್ಲ, ನಿರೀಕ್ಷೆ ಇದೆ. ಹೆಚ್ಚಿನ ಆಕಾಂಕ್ಷಿಗಳಿದ್ದಾಗ ಪೈಪೋಟಿ ಸಹಜವಾಗಿ ಇರಲಿದೆ. 8 ಮತ್ತು 9 ರಂದು ಚುನಾವಣಾ ಆಯ್ಕೆ ಸಮಿತಿ ಸಭೆ ಸೇರಿ, ನಂತರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಿಜೆಪಿ ಪಟ್ಟಿಯು ವ್ಯವಸ್ಥಿತವಾಗಿ ಪ್ರಜಾಪ್ರಭುತ್ವದ ರೀತಿಯಲ್ಲಿ ಸಿದ್ಧವಾಗುತ್ತಿದೆ. ಬಿಜೆಪಿಯ ಎಲ್ಲಾ ಹಂತದ ಕಾರ್ಯಕರ್ತರ ಭಾವನೆ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಮಿತಿಗಳು ಚರ್ಚಿಸಿ ಜೊತೆ ಜನರ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಪಟ್ಟಿ ತಯಾರಿಸಲಾಗಿದೆ. ಕ್ಷೇತ್ರಗಳಿಗೂ ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಕಳಿಸಲಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎರಡನೇ ಪಟ್ಟಿ ಬಿಡುಗಡೆಗೂ ಮುನ್ನ ಬಿಜೆಪಿಯ ಬಹುತೇಕ ಶಾಸಕರುಗಳಿಗೆ ನಿಮಗಾಗಿ ಟಿಕೆಟ್ ಕಾದಿರಿಸಿದ್ದೇವೆ ಬರುತ್ತೀರಾ ಎಂದು ಕೇಳಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಇಲ್ಲ, ಹೀಗಾಗಿ ಬೇರೆ ಬೇರೆ ಪಕ್ಷದ ನಾಯಕರನ್ನ ಕಾಂಗ್ರೆಸ್ ಪಕ್ಷಕ್ಕೆ ಕರೆಯುತ್ತಿದ್ದಾರೆ. ಕಾಂಗ್ರೆಸ್ಸಿಗರು ಹೊರಗಡೆ ಶೂರತದ ಮಾತನಾಡುತ್ತಾರೆ ಒಳಗಡೆ ಹಕೀಕತ್ ಬೇರೆಯೇ ಇದೆ ಎಂದರು.
ಕಳೆದ ಬಾರಿಗಿಂತ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತದೆ. ಕಾಂಗ್ರೆಸ್ಸಿಗೆ ಸರಿಯಾದ ಅಭ್ಯರ್ಥಿಗಳೇ ಇಲ್ಲ, ತಳಮಟ್ಟದಲ್ಲಿ ಸಂಘಟನೆಯೂ ಇಲ್ಲ, ಸರಿಯಾದ ನೀತಿ ಸಿದ್ಧಾಂತಗಳಿಲ್ಲ ಅಭಿವೃದ್ಧಿ ರಾಜಕಾರಣ ಕೂಡ ಇಲ್ಲ. ಕೇವಲ ಸುಳ್ಳು ಆರೋಪಗಳನ್ನ ಮಾಡುತ್ತಾ ಕಾಂಗ್ರೆಸ್ ನಾಯಕರು ಕಾಲ ಕಳೆಯುತ್ತಿದ್ದಾರೆ ಎಂದರು.

ಒಳಮಿಸಲಾತಿ ಸೇರಿದಂತೆ ಎಲ್ಲವನ್ನು ರದ್ದು ಮಾಡುವುಡಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅದನ್ನು ಮುಟ್ಟಲು ಸಾಧ್ಯವಿಲ್ಲ. ಒಳ ಮೀಸಲಾತಿ ರದ್ದು ಮಾಡಲಿ ನೋಡೋಣ ಎಂದು ಸವಾಲು ಹಾಕಿದರು. ಕಾಂಗ್ರೆಸ್ಸಿನ ಬಣರಾಜಕೀಯಕ್ಕೆ ಮಹತ್ವವಿಲ್ಲ. ಅವರು ದಿನವೂ ಜಗಳ ಮಾಡುತ್ತಾರೆ ಎಂದರು.
ಮಹೇಶ್ ಕುಮಟಳ್ಳಿ ಸೋಲನ್ನು ನನ್ನ ತಲೆಗೆ ಕಟ್ಟಲು ನೋಡುತ್ತಿದ್ದಾರೆ ಎಂಬ ಲಕ್ಷ್ಮಣ ಸವದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಲಕ್ಷ್ಮಣ್ ಸವದಿ ಅವರ ಬಳಿ ಮಾತನಾಡಿದ್ದು ಆ ರೀತಿ ಏನೂ ಇಲ್ಲ. ಸವದಿ ಅವರು ಬಿಜೆಪಿ ಪಕ್ಷದ ಹಿರಿಯ ನಾಯಕರು, ಡಿಸಿಎಂ ಆಗಿದ್ದವರು. ಅವರ ಜವಾಬ್ದಾರಿಯ ಬಗ್ಗೆ ಅವರಿಗೆ ಅರಿವಿದೆ ಎಂದು ತಿಳಿದಿದ್ದೇನೆ. ಅವರ ಬಳಿ ಮಾತನಾಡಿದ್ದು ಎಲ್ಲವೂ ಸರಿ ಹೋಗುತ್ತದೆ ಎಂದರು.
ಮುಖ್ಯಮಂತ್ರಿಗಳಿಗೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ನಟ ಸುದೀಪ್ ಅವರನ್ನು ಟೀಕೆ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬೇರೆ ಪಕ್ಷದವರು ಪ್ರಚಾರಕ್ಕೆ ಕರೆದರೆ ಹೋಗುವುದು ಅವರಿಗೆ ಬಿಟ್ಟ ವಿಚಾರ. ಕಷ್ಟಕಾಲದಲ್ಲಿ ನೆರವಾಗಿದ್ದ ಕಾರಣ ಬಂದಿದ್ದೇನೆ, ಉಳಿದವರು ಯಾರು ಬಂದಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಸುದೀಪ್ ಅವರಿಗೆ ಬೆದರಿಕೆ ಪತ್ರ ಬಂದಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಅದೆಲ್ಲ ಆದ ನಂತರವೇ ಅವರು ಪತ್ರಿಕಾಗೋಷ್ಠಿ ನಡೆಸಿದರು ಎಂದು ತಿಳಿಸಿದರು.












Click it and Unblock the Notifications