Nitin Gadkari: ಕರ್ನಾಟಕದ ಈ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ₹1,385 ಕೋಟಿ ಮಂಜೂರು, ಎಲ್ಲೆಲ್ಲಿ? ಮಾಹಿತಿ, ವಿವರ
ಕರ್ನಾಟಕ, ಮಾರ್ಚ್, 15: ರಾಜ್ಯದಲ್ಲಿ ಸಾರಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿದೆ. ರೈಲು, ಮೆಟ್ರೋ, ರಸ್ತೆ ಸೇರಿದಂತೆ ಇನ್ನಿತರ ವಿಭಾಗಗಳಲ್ಲಿ ಅಭಿವೃದ್ಧಿ ಆಗುತ್ತಿದೆ. ಇದೀಗ ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿಯಡಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಸ್ತೆಗಳ ಅಭಿವೃದ್ಧಿ ಯೋಜನೆಗಳಿಗೆ 1,385.50 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ. ಹಾಗಾದರೆ ಯಾವ್ಯಾವ ಭಾಗಗಳಿಗೆ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಟ್ವೀಟ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, 2,055.62 ಕಿ.ಮೀ. ಉದ್ದದ 295 ರಸ್ತೆಗಳ ಅಭಿವೃದ್ಧಿಗೆ ಹಾಗೂ ಬಲವರ್ಧನೆಗೆ ಈ ಹಣ ಬಳಸಲಾಗುತ್ತದೆ ಎಂದಿದ್ದಾರೆ.

ಈ ಯೋಜನೆಯು ರಾಜ್ಯದಲ್ಲಿ ಮೂಲಸೌಲಭ್ಯವನ್ನು ನವೀಕರಿಸುತ್ತದೆ. ಅಲ್ಲದೆ, ಸಂಪರ್ಕವನ್ನು ಹೆಚ್ಚಿಸುವ ಮೂಲಕ ಆರ್ಥಿಕ ಅಭಿವೃದ್ಧಿ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಹೇಳಿದರು. ಹಾಸನ ಜಿಲ್ಲೆಯ 22.3 ಕಿಲೋಮೀಟರ್ ವ್ಯಾಪಿಸಿರುವ NH-373 ರ ಯಡೇಗೌಡನಹಳ್ಳಿಯಿಂದ ಅರ್ಜುನಹಳ್ಳಿ ಭಾಗದ 4-ಲೇನಿಂಗ್‌ಗೆ ₹576.22 ಕೋಟಿ ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಕಾರಿಡಾರ್ ಚಿಕ್ಕಮಗಳೂರು, ಬೇಲೂರು, ಹಳೇಬೀಡು ಮತ್ತು ಶ್ರವಣಬೆಳಗೊಳದಂತಹ ಹೆಸರಾಂತ ಪ್ರವಾಸಿ ತಾಣಗಳಿಗೆ ಪ್ರಮುಖ ಸಂಪರ್ಕವಾಗಿ ಕಾರ್ಯನಿರ್ವಹಿಸುತ್ತದೆ. ಯೋಜನೆಯ ಅನುಷ್ಠಾನವು ಸಂಪರ್ಕವನ್ನು ಹೆಚ್ಚಸುತ್ತದೆ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದಿದ್ದ 22 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ರಾಜ್ಯದ ರಸ್ತೆಗಳ ಚಿತ್ರಣ 2024ರ ಮುಕ್ತಾಯದ ವೇಳೆಗೆ ಬದಲಾಗಲಿದ್ದು, ಅಮೆರಿಕಾದ ರಸ್ತೆಗಳಂತೆ ಆಗಲಿದೆ ಎಂದು ಹೇಳಿದ್ದರು.
ಮೈಸೂರು, ಹಾಸನಕ್ಕೆ ರಿಂಗ್ ರಸ್ತೆ ಮಾಡಿಸುತ್ತೇನೆ. ಕುಶಾಲನಗರ-ಮಾಣಿ ರಸ್ತೆಗೆ ಡಿಪಿಆರ್ ಮಾಡಿಸುತ್ತೇವೆ ಎಂದು ಹೇಳಿದ್ದ ನಿತಿನ್ ಗಡ್ಕರಿ, ಮೈಸೂರು-ನಂಜನಗೂಡು 6 ಲೇನ್ ರಸ್ತೆ ಕಾಮಗಾರಿ ಶೀರ್ಘದಲ್ಲೇ ಪ್ರಾರಂಭ ಆಗಲಿದೆ. ಬೆಂಗಳೂರು-ಚೆನ್ನೈ ನಡುವೆ 20,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಲಿದ್ದು, ಇದರಿಂದ ಕೇವಲ 2 ಗಂಟೆಯಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪಬಹುದು ಅಂತಾ ಹೇಳಿದ್ದರು.











Click it and Unblock the Notifications