Nikhil Kumaraswamy: ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್‌ನಲ್ಲಿ ದೊಡ್ಡ ಜವಾಬ್ದಾರಿ: ಸುಳಿವು ಕೊಟ್ಟ ದೇವೇಗೌಡ
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾಗಿದ್ದಾರೆ. ಮಂಡ್ಯ ಲೋಕಸಭೆ ಚುನಾವಣೆ ಹಾಗೂ ಚನ್ನಪಟ್ಟಣ ಬೈಎಲೆಕ್ಷನ್‌ನಲ್ಲಿ ಸೋಲು ಕಂಡ ಬಳಿಕ ಜೆಡಿಎಸ್ ಪಕ್ಷದ ಸಂಘಟನೆಯಲ್ಲಿ ನಿಖಿಲ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ನಿಖಿಲ್ ಅವರಿಗೆ ಇನ್ನೂ ದೊಡ್ಡ ಜವಾಬ್ದಾರಿಯೊಂದನ್ನು ನೀಡಲು ತಯಾರಿ ನಡೆದಿದೆ. ಈ ಬಗ್ಗೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೇ ಮಾಹಿತಿ ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಜಕೀಯದಲ್ಲಿ ಭದ್ರ ಬುನಾದಿ ಹಾಕಿಕೊಡಬೇಕು ಎಂದು ಅವರ ತಾತ ದೇವೇಗೌಡರು ಹಾಗೂ ತಂದೆ ಕುಮಾರಸ್ವಾಮಿ ಅವರು ನಿರಂತರವಾಗಿ ಶ್ರಮಪಡುತ್ತಲೇ ಇದ್ದಾರೆ. ಮೊದಲಿಗೆ ಸ್ಯಾಂಡಲ್‌ವುಡ್‌ನಲ್ಲಿ ನಟನಾಗಿ ಗುರುತಿಸಿಕೊಂಡಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು ದಿಢೀರನೆ ರಾಜಕೀಯಕ್ಕೆ ಕರೆತಂದರೂ, ಸ್ಪರ್ಧಿಸಿದ ಚುನಾವಣೆಗಳಲ್ಲಿ ನಿರೀಕ್ಷಿತ ಗೆಲುವು ಸಿಗಲೇ ಇಲ್ಲ. ನಿಖಿಲ್ ಅವರನ್ನು ಶಾಸಕ ಅಥವಾ ಸಂಸದರನ್ನಾಗಿ ಮಾಡಬೇಕು ಎನ್ನುವ ಅವರ ಆಸೆಯೂ ಈಡೇರಿಲ್ಲ. ಹೀಗಾಗಿ ಈ ಪ್ರಯತ್ನ ಮುಂದುವರಿದಿದ್ದು, ನಿಖಿಲ್ ಅವರಿಗೆ ದೊಡ್ಡ ಜವಾಬ್ದಾರಿ ನೀಡುವ ಬಗ್ಗೆ ದೇವೇಗೌಡರು ಮಹತ್ವ ನಿರ್ಧಾರ ತೆಗೆದುಕೊಂಡಿದ್ದಾರೆ.

ಪಕ್ಷದ ಕಚೇರಿಯಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರಿಗೆ ಹೊಸ ಜವಾಬ್ದಾರಿ ನೀಡುತ್ತಿದ್ದೇವೆ. ಅವರು ರಾಜ್ಯದಾದ್ಯಂತ ಸುತ್ತಾಡಿ ಜೆಡಿಎಸ್ ಪಕ್ಷವನ್ನು ಕಟ್ಟಬೇಕು. ಮಹಿಳಾ ಸಮಾವೇಶಗಳನ್ನು ನಡೆಸಬೇಕು. ಜೆಡಿಎಸ್ ಪಕ್ಷದ ವತಿಯಿಂದ ಕನಿಷ್ಠ 50 ಮಹಿಳಾ ಸಮಾವೇಶಗಳನ್ನಾದರೂ ನಡೆಸಬೇಕು. ಅದಕ್ಕೆ ಭಿಕ್ಷೆ ಬೇಡಿಯಾದರೂ ಹಣ ತರುತ್ತೇವೆ. ಸಮಾವೇಶ ನಡೆಸಲೇಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಮಹಿಳಾ ಸಬಲೀಕರಣಕ್ಕೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ನಾವು ಕೂಡ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ 80 ಮಹಿಳೆಯರು ಎಲೆಕ್ಷನ್‌ಗೆ ನಿಲ್ಲಬೇಕು. ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಮರುಜೀವ ಕೊಡುವವರೆಗೂ ನಾನು ವಿಶ್ರಾಂತಿ ಪಡೆಯಲ್ಲ ಎಂದೂ ಹೇಳಿದ್ದಾರೆ.

ಜೆಡಿಎಸ್ ಪಕ್ಷದ ಸಂಘಟನೆಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಿಖಿಲ್ ನೇತೃತ್ವದಲ್ಲಿ ಯುವಕರು ಪಕ್ಷ ಬಲಪಡಿಸಬೇಕು. ನಾನೂ ಕೂಡ ಎಲ್ಲ ಜಿಲ್ಲೆಗೆ ಭೇಟಿ ಕೊಡುತ್ತೇನೆ. ನಮ್ಮ ಸಮಾವೇಶಗಳಲ್ಲಿ ನಾವು ಏನೆಲ್ಲ ಕೆಲಸ ಮಾಡಿದ್ದೇವೆ ಎಂಬುದನ್ನು ಜನರಿಗೆ ತಿಳಿಸಬೇಕು. ಇದರ ಜೊತೆಗೆ ಏನೂ ಕೆಲಸ ಮಾಡದೆ ಅಧಿಕಾರ ಅನುಭವಿಸುತ್ತಿರುವವರ ಬಗ್ಗೆ ಕೂಡ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದೆ. ಅದರಂತೆ ಮುಂದಿನ ಎಲೆಕ್ಷನ್‌ನಲ್ಲಿ ನಮ್ಮ ಪಕ್ಷದಿಂದ ಕನಿಷ್ಠ 80 ಮಹಿಳೆಯರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕು. ಇದನ್ನೆಲ್ಲ ನಾನು ನನ್ನ ಕಣ್ಣಿನಿಂದ ನೋಡಬೇಕು. ಈ ನಿಟ್ಟಿನಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಪ್ರಧಾನಿ ಮೋದಿ ಹಲವು ಕಾರ್ಯಕ್ರಮಗಳನ್ನು ಪರಿಚಯಿಸಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್ ನಾಯಕರು ಮಂಡಿಸಿರುವ ಬಜೆಟ್ ಬಗ್ಗೆ ನಾನು ಒಂದು ಮಾತನ್ನೂ ಆಡುವುದಿಲ್ಲ. ಸಮಯ ಬಂದಾಗ ಅದರ ಬಗ್ಗೆ ಮಾತನಾಡುತ್ತೇನೆ. ಆದರೆ, ಅವರು ಸಾಮಾಜಿಕ ನ್ಯಾಯ ಎಂದೆಲ್ಲ ಮಾತನಾಡುತ್ತಿದ್ದಾರೆ. ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿ ಸೌಲಭ್ಯ ಕೊಟ್ಟಿದ್ದೇ ನಾವು. ಆದರೆ ಅದು ಇಂದು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿರಿಯಾನಿ ಬಜೆಟ್!
ಕಾರ್ಯಕ್ರಮದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅಲ್ಪಸಂಖ್ಯಾತ ಸಮುದಾಯಕ್ಕೆ ಬಿರಿಯಾನಿ ಕೊಟ್ಟರೆ, ಉಳಿದ ಅಲ್ಪಸಂಖ್ಯಾತ ಸಮುದಾಯಗಳಿಗೆ ಉಪ್ಪಿನಕಾಯಿ ಕೊಟ್ಟು ಚಪ್ಪರಿಸಿಕೊಳ್ಳಿ ಎನ್ನುವಂತಿದೆ. ಇಂತಹ ತಾರತಮ್ಯದ ಬಜೆಟ್ ನೀಡಿದವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು. ರಾಜಕೀಯದಲ್ಲಿ ಅವರ ಬೇಳೆ ಬೇಯಿಸಿಕೊಳ್ಳಲು ಇದನ್ನೆಲ್ಲ ಮಾಡಿದ್ದಾರೆ. ಆದರೆ ಇದು ಸರಿಯಲ್ಲ. ಯಾವ ಸಮುದಾಯ ನಿಜವಾಗಿ ಹಿಂದುಳಿದಿದೆಯೋ ಅವರಿಗೆ ಸಮಾನವಾಗಿ ನ್ಯಾಯ ಸಿಗಬೇಕು. ಆದರೆ ಆ ಕೆಲಸವನ್ನು ಈ ಬಜೆಟ್‌ನಲ್ಲಿ ಮಾಡಿಲ್ಲ ಎಂದೂ ದೂರಿದ್ದಾರೆ.

ಉರ್ದು ಶಾಲೆಗಳ ಉದ್ಧಾರಕ್ಕೆ ರಾಜ್ಯ ಸರ್ಕಾರದ ಬಳಿ ಹಣ ಇದೆ. ಆದರೆ ವಿಶ್ವವಿದ್ಯಾಲಯಗಳಿಗೆ ಕೊಡಲು ಹಣವಿಲ್ಲ. ವಕ್ಫ್ ಕಟ್ಟಡಗಳಿಗೆ ಭರಪೂರ ಅನುದಾನ ಕೊಟ್ಟಿದ್ದಾರೆ. ಆದರೆ ಎಲ್ಲ ವರ್ಗದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳಿಗೆ ಇವರ ಬಳಿ ಹಣವಿಲ್ಲ. ಈ ಬಜೆಟ್ ಬಗ್ಗೆ ಕಾಂಗ್ರೆಸ್ ಹೇಳುತ್ತಿರುವುದೆಲ್ಲ ಸುಳ್ಳು. ಜನರಿಗೆ ಶೀಘ್ರದಲ್ಲೇ ಸತ್ಯ ಏನೆಂದು ಗೊತ್ತಾಗುತ್ತೆ. ಬೆಂಗಳೂರು ನಗರದ ಟನಲ್ ರಸ್ತೆ ಯೋಜನೆಗೆ 40,000 ಕೋಟಿ ಕೊಡುವುದಾಗಿ ಹೇಳಿದ್ದಾರೆ. ಅದನ್ನ ಎಲ್ಲಿಂದ ಕೊಡ್ತಾರೋ ಗೊತ್ತಿಲ್ಲ. ಅಷ್ಟು ಹಣ ಎಲ್ಲಿಂದ ತರುತ್ತಾರೆ? ನಿಜಕ್ಕೂ ಇದೆಲ್ಲ ಸಾಧ್ಯನಾ? ಇದೆಲ್ಲ ಕನಸಾಗಿಯೇ ಉಳಿಯುತ್ತಾ ಎಂದು ವ್ಯಂಗ್ಯವಾಡಿದ್ದಾರೆ.

ವರ್ಷವಿಡೀ ಮಹಿಳಾ ದಿನ ಆಚರಿಸಿ:
ಮಹಿಳಾ ದಿನಾಚರಣೆಯನ್ನು ವರ್ಷದ 365 ದಿನವೂ ಹೃದಯದಲ್ಲಿ ಆಚರಿಸಬೇಕು. ಕೇವಲ ಒಂದು ದಿನಕ್ಕೆ ಮಹಿಳಾ ದಿನ ಸೀಮಿತವಾಗಬಾರದು. ಇಂದು ಈ ರಾಷ್ಟ್ರವನ್ನಾಗಲಿ, ರಾಜ್ಯವನ್ನಾಗಲಿ ಅಭಿವೃದ್ಧಿ ದಿಕ್ಕಿಗೆ ತೆಗೆದುಕೊಂಡು ಹೋಗುವ ಶಕ್ತಿ ಇರುವುದೇ ನಾಡಿನ ಹೆಣ್ಣುಮಕ್ಕಳಿಗೆ ಎಂದು ನಿಖಿಲ್ ಕುಮಾರಸ್ವಾಮಿ ಶ್ಲಾಘಿಸಿದರು. ಹೆಣ್ಣು ಜಗವ ಬೆಳಗುವ ಶಕ್ತಿ. ಎಲ್ಲ ಕ್ಷೇತ್ರಗಳಲ್ಲೂ ಸ್ತ್ರೀಶಕ್ತಿ ಪ್ರಜ್ವಲಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ವೆಂಕಟರಾವ್ ನಾಡಗೌಡರು, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ, ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ರಾಜ್ಯ ಮಹಿಳಾ ವಿಭಾಗದ ಗೌರವ ಅಧ್ಯಕ್ಷೆ ಲೀಲಾದೇವಿ, ಬೆಂಗಳೂರು ನಗರ ಘಟಕದ ರಮೇಶ್ ಗೌಡ , ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷರಾದ ದೇವರಾಜಮ್ಮ, ಮಹಿಳಾ ಜನತಾದಳ ಮುಖಂಡರು ಸೇರಿ ನೂರರು ಸಂಖ್ಯೆಯಷ್ಟು ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.












Click it and Unblock the Notifications