ದಳಪತಿಗಳಿಗೆ ಪತ್ರಿಷ್ಠೆಯಾದ ಬೈ ಎಲೆಕ್ಷನ್: ಚನ್ನಪಟ್ಟಣ ಕ್ಷೇತ್ರದಲ್ಲಿ ಉಚಿತ ಗಣೇಶ ಮೂರ್ತಿ ವಿತರಿಸಿದ ನಿಖಿಲ್ ಕುಮಾರಸ್ವಾಮಿ
ರಾಮನಗರ, ಸೆಪ್ಟೆಂಬರ್ 06: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಸ್ಪರ್ಧೆ ನಡೆಸಿ, ಗೆಲುವು ಸಾಧಿಸಿದ್ದಾರೆ. ಇದೀಗ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಶಾಸಕರಾಗಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ತೆರವಾಗಿದ್ದು, ಚನ್ನಪಟ್ಟಣ ಕ್ಷೇತ್ರದ ಚುನಾವಣೆ ದಳಪತಿಗಳಿಗೆ ಪ್ರತಿಷ್ಠೆಯಾಗಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಆಡಳಿತರೂಢ ಕಾಂಗ್ರೆಸ್ ಗೆ ಅಸ್ತಿತ್ವದ ಪ್ರಶ್ನೆಯಾಗಿದೆ. ಹೀಗಾಗಿ ಚನ್ನಪಟ್ಟಣ ಕ್ಷೇತ್ರದಿಂದ ಡಿ ಕೆ ಶಿವಕುಮಾರ್ ಅವರು ಸ್ಪರ್ಧೆ ನಡೆಸಲಿದ್ದಾರೆ ಎನ್ನುವ ಮಾತುಗಳು ಕಾಂಗ್ರೆಸ್ ಪಾಳಯದಲ್ಲಿ ಕೇಳಿ ಬರುತ್ತಿದ್ದು, ಮತ್ತೊಮ್ಮೆ ಚನ್ನಪಟ್ಟಣವನ್ನ ವಶಪಡಿಸಿಕೊಳ್ಳಲು ದಳಪತಿಗಳು ಮಾಸ್ಟರ್ ಪ್ಲಾನ್ ನಡೆಸಿದ್ದಾರೆ.

ಚನ್ನಪಟ್ಟಣದ ದೊಡ್ಡಮಳೂರು ಸಾಯಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಉಚಿತ ಗಣೇಶ ಮೂರ್ತಿ ವಿತರಣಾ ಸಮಾರಂಭದಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಭಾಗಿಯಾಗಿ ಯುವಕರಿಗೆ ಗೌರಿ ಗಣೇಶ ಮೂರ್ತಿಯನ್ನು ವಿತರಣೆ ಮಾಡಿದರು. ಗಣೇಶ ಹಬ್ಬದಂದು ಯುವಕರಿಗೆ ಉಚಿತವಾಗಿ ಗಣೇಶ ಮೂರ್ತಿಯನ್ನ ವಿತರಿಸುವ ಮೂಲಕ ಯುವಕರನ್ನ ಜೆಡಿಎಸ್ ನಾಯಕರು ಸೆಳೆಯುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜತೆ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ತಿಳಿಸಿದರು.ನಮ್ಮ ರಾಜ್ಯದ ರೈತಾಪಿ ವರ್ಗಕ್ಕೆ ಮಳೆ ಬೆಳೆ ಆಗಲಿ, ಬೆಳೆದಿರುವ ಎಲ್ಲಾ ಬೆಳೆಗಳಿಗೆ ನಿಗದಿತ ಬೆಲೆ ಸಿಗಲಿ ಜೊತೆಗೆ ಇಡೀ ರಾಜ್ಯದ ಜನತೆಗೆ ಅರೋಗ್ಯ, ಆಯಸ್ಸು, ನೆಮ್ಮದಿ ಕಲ್ಪಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಜೆಡಿಎಸ್ ತಾಲ್ಲೂಕು ಅಧ್ಯಕ್ಷರು ಜಯಮುತ್ತು ಅವರು ಉಚಿತ ಗಣೇಶ ಮೂರ್ತಿಗಳನ್ನು ವಿತರಣೆ ಮಾಡಿಕೊಂಡು ಬಂದಿದ್ದಾರೆ.ಈ ಬಾರಿ ನಾನೂ ಭಾಗವಹಿಸಿ ಯುವಕರಿಗೆ ಗಣೇಶ ವಿತರಿಸುತ್ತಿದ್ದೇನೆ ಎಂದು ತಿಳಿಸಿದರು.
ಗೆಲುವುದಕ್ಕೆ ಕಾರ್ಯಕರ್ತರು ಸಜ್ಜಾಗಬೇಕು
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮುಖಂಡರು, ಕಾರ್ಯಕರ್ತರು ಸಜ್ಜಾಗಬೇಕು. ಈಗಾಗಲೇ ಕ್ಷೇತ್ರದ ಹಲವೆಡೆ ಸಭೆಗಳನ್ನ ಮಾಡಿ ಅಭಿಪ್ರಾಯ ಸಂಗ್ರಹ ಮಾಡಿದ್ದೇನೆ.ಎಲ್ಲರ ಅಭಿಪ್ರಾಯಗಳನ್ನ ವರಿಷ್ಠರಿಗೆ ತಲುಪಿಸುವ ಕೆಲಸ ಆಗ್ತಿದೆ. ಅಂತಿಮವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು.ಆ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಆರೋಗ್ಯಕರ ಚುನಾವಣೆ ನಡೆಯಬೇಕು
ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಮಾತನಾಡಿದ ಅವರು, ಈಗಾಗಲೇ ದೆಹಲಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ಮಾಡಲಾಗಿದೆ.ಬಿಜೆಪಿಯ ಹಿರಿಯ ವರಿಷ್ಠರ ಜೊತೆಗೂ ಕೂಡ ಚರ್ಚೆ ಮಾಡಲಾಗಿದೆ. ಕ್ಷೇತ್ರದಲ್ಲಿ ಆರೋಗ್ಯಕರ ಚುನಾವಣೆ ನಡೆಯಬೇಕು.ಅಭ್ಯರ್ಥಿ ಆಯ್ಕೆ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡ್ತಾರೆ. ಅಂತಿಮವಾಗಿ NDA ಅಭ್ಯರ್ಥಿ ಪರವಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತೇವೆ ಎಂದರು. ಒಟ್ನಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಸೂಕ್ತ ಅಭ್ಯರ್ಥಿ ಹಾಕುವ ಕೆಲಸವನ್ನ ಹೈಕಮಾಂಡ್ ಮಾಡುತ್ತೆ ಎಂದು ನಿಖಿಲ್ ಕುಮಾರಸ್ವಾಮಿಯವರು ತಿಳಿಸಿದರು..












Click it and Unblock the Notifications