‘ಸುಮ್ಮನಿದ್ದುಬಿಡಿ, ನಿಮಗೆ ಬೇಕಾದ್ದು ತೆಗೆದುಕೊಳ್ಳಿ’… ನೈಸ್‌ ವಿಚಾರದಲ್ಲಿ ಆಮಿಷದ ಬಾಂಬ್ ಸಿಡಿಸಿದ ಕುಮಾರಸ್ವಾಮಿ!

ಬೆಂಗಳೂರು: ನೈಸ್ ಯೋಜನೆ ಉಸಾಬರಿ ನಿಮಗೇಕೆ ಬೇಕು? ಈ ವಿಷಯದಲ್ಲಿ ನೀವು ಸುಮ್ಮನೆ ಇದ್ದುಬಿಡಿ. ನಿಮಗೆ ಏನು ಬೇಕೋ ಅದನ್ನು ತೆಗೆದುಕೊಳ್ಳಿ ಎಂದು ನನಗೆ ಯಾರನ್ನೂ ಕಳಿಸಿ ಇವರೆಲ್ಲರೂ ಆಮಿಷ ಒಡ್ಡಲು ಪ್ರಯತ್ನ ಮಾಡಿದರು ಎಂದು ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಬಾಂಬ್‌ ಸಿಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಹೆಚ್‌ ಡಿ ಕುಮಾರಸ್ವಾಮಿ ಮಾತನಾಡಿ, ನನ್ನ ಬಳಿ ಬಂದವರನ್ನು ಮುಗಿದು ಹೊರಗೆ ಅಟ್ಟಿದ್ದೇನೆ. ಯಾರಿಂದಲೂ ನನ್ನನ್ನು ಖರೀದಿ ಮಾಡುವುದು ಸಾಧ್ಯವಿಲ್ಲ. ನಾನು ಜನರ ಮನುಷ್ಯ. ಜನರಿಗಾಗಿ ಬದುಕುತ್ತೇನೆ ಮತ್ತು ಅವರಿಗಾಗಿಯೇ ಪ್ರಾಣ ಬಿಡಲು ಸಿದ್ಧನಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

NICE Project HD Kumaraswamy Alleges Bribe Offer Over NICE Project Stay Silent Take Whatever You Want

ಮನೆ ಬಾಗಿಲಲ್ಲಿಯೇ ಬೈದು ಕಳಿಸಿದ್ದೇನೆ.

ನನ್ನ ಮೇಲೆ ಬಹಳ ಒತ್ತಡ ಇದೆ. ಒಂದುವರೆ ವರ್ಷದಲ್ಲಿ ಚುನಾವಣೆ ಇದೆ, ದಯವಿಟ್ಟು ಈ ಹೋರಾಟವನ್ನು ಇಲ್ಲಿಗೆ ಬಿಟ್ಟುಬಿಡಿ. ಚುನಾವಣೆ ಖರ್ಚು ಸೇರಿದಂತೆ ನಿಮಗೆ ಅಗತ್ಯ ಇರುವುದನ್ನು ತಂದು ಒಪ್ಪಿಸುತ್ತೇವೆ ಎಂದು ಹೇಳಿದವರನ್ನು ಮನೆ ಬಾಗಿಲಲ್ಲಿಯೇ ಬೈದು ಕಳಿಸಿದ್ದೇನೆ. ನಾನು ಒಬ್ಬ ಸುಮ್ಮನೆ ಇದ್ದರೆ ಇವರ ಲೂಟಿ ಸುಲಭವಾಗಿ ಆಗುತ್ತದೆ. ಅದಕ್ಕಾಗಿ ನಾನು ಕೇಳುವ ಪ್ರಶ್ನೆಗಳಿಗೆ ಹಾಗೂ ನನ್ನ ದಾಖಲೆಗಳಿಗೆ ಉತ್ತರ ಕೊಡುವುದನ್ನು ಬಿಟ್ಟು ಬೇರೆ ವಿಷಯಗಳನ್ನು ಚರ್ಚೆ ಮಾಡುತ್ತಾ ವಿಷಯಾಂತರ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಇವತ್ತು ಮಾದಾವರದಿಂದ ಎಲೆಕ್ಟ್ರಾನಿಕ್ ಸಿಟಿ ಅವರಿಗೆ ಅನೇಕ ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ನಾಲ್ಕಾರು ಕಡೆ ಸಭೆಗಳನ್ನು ಮಾಡಿ ನೊಂದ ಜನರ ದುಃಖ ದುಮ್ಮಾನಗಳನ್ನು ಆಲಿಸಿದ್ದೇನೆ. ಸೋಂಪುರದಲ್ಲಿ ಕೊನೆಯದಾಗಿ ಬೃಹತ್ ಸಭೆಯನ್ನು ನಡೆಸಿ ಅಹವಾಲು ಆಲಿಸಿದ್ದೇನೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಜನರೊಂದಿಗೆ ಬೃಹತ್ ಆಂದೋಲನವನ್ನು ರೂಪಿಸಲಾಗುವುದು.

ನಮ್ಮ ಹೋರಾಟ ಶಾಂತಿಯುತವಾಗಿರುತ್ತದೆ. ಆದಷ್ಟು ಬೇಗ ಎಲ್ಲಾ ಪ್ರಮುಖರ ಮತ್ತೊಂದು ಸಭೆ ಕರೆಯುತ್ತೇನೆ. 5ನೇ ತಾರೀಕು ಸುಪ್ರೀಂ ಕೋರ್ಟ್ ನಲ್ಲಿ ಹೈಕೋರ್ಟ್ ಅಭಿಪ್ರಾಯಗಳ ಮೇಲೆ ವಿಚಾರಣೆ ನಡೆಯುತ್ತದೆ. ಅದನ್ನು ನೋಡಿಕೊಂಡು ಮುಂದಿನ ಹೋರಾಟ ರೂಪಿಸೋಣ. ಭೂಮಿ ಕಳೆದುಕೊಂಡವರು ಯಾವುದೇ ಕಾರಣಕ್ಕೂ ಅಧೈರ್ಯ ಪಡುವುದು ಬೇಡ. ನಿಮ್ಮ ಜೊತೆ ನಾನಿದ್ದೇನೆ ಎಂದು ಅಭಯ ನೀಡಿದರು.

ನೈಸ್ ಗುತ್ತಿಗೆದಾರನ ಬಂಧನ ಆಗಬೇಕು

ಪರಮಪೂಜ್ಯ ಶಿವಕುಮಾರ ಮಹಾಸ್ವಾಮೀಜಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ನೈಸ್ ಗುತ್ತಿಗೆದಾರ ಅಶೋಕ್ ಖೇಣಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯ ಮಾಡಿದ ಸಚಿವ ಕುಮಾರಸ್ವಾಮಿ ಅವರು, ಇಂತಹ ಫ್ರಾಡ್ ವ್ಯಕ್ತಿಗೆ ಈ ರಾಜ್ಯದ ಮುಖ್ಯಮಂತ್ರಿ ರಕ್ಷಣೆ ಕೊಡುತ್ತ ಬಂದಿದ್ದಾರೆ. ಅಲ್ಲದೆ ಆತನ ಜೊತೆ ಶಾಮೀಲಾಗಿ ಮಾಡಬಾರದ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.‌

ಈ ಅಶೋಕ್ ಖೇಣಿ ಸಿದ್ದಗಂಗಾ ಮಠದ ಆಸ್ತಿಯನ್ನು ಕೂಡ ಲೂಟಿ ಮಾಡಿದ್ದಾನೆ. ಇಂತಹ ಧರ್ಮ ದ್ರೋಹಿಗೆ ಡಿಕೆಶಿ ಸಹಕಾರ ಕೊಡುತ್ತಾ ಬಂದಿದ್ದಾರೆ. ಇಲ್ಲಿ ನನಗೆ ರಾಜಕೀಯ ಬೇಕಿಲ್ಲ. ರೈತರ ಭೂಮಿ ವಾಪಸ್ ಕೊಡಿಸುವ ಉದ್ಧೇಶದಿಂದ ಹೋರಾಟ ಮಾಡುತ್ತಿದ್ದೇನೆ. ಭೂಮಿ ಕಳೆದುಕೊಂಡ ಜನರು ಕೂಡ ಒಟ್ಟಾಗಿ ಹೋರಾಟಕ್ಕೆ ಧುಮುಕಬೇಕು.
ನಾನು ಯಾರ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಪೈಕಿ ಅಲ್ಲ. ತೆಲಂಗಾಣದ ಮಹೇಶ್ ರೆಡ್ಡಿ ಎಂಬಾತನ ಜತೆ ಸೇರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಟ್ಟಾಗಿ ಭೂಮಿ ಲೂಟಿ ಹೊಡೆಯಲು ಸಂಚು ಮಾಡಿದ್ದಾರೆ. ಆದರೆ ಈ ಲೂಟಿಗೆ ನಾನು ಅವಕಾಶ ಕೊಡುವುದಿಲ್ಲ. ಹೇಗಾದರೂ ಮಾಡಿ ರೈತರ ಭೂಮಿಯನ್ನು ಉಳಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಸಚಿವರ ಸಂಚಾರ ಎಲ್ಲೆಲ್ಲಿ?

ಸಚಿವ ಕುಮಾರಸ್ವಾಮಿ ಅವರು ಬೆಳಗ್ಗೆ 10 ಗಂಟೆಯಿಂದ ನೈಸ್ ರಸ್ತೆಯಲ್ಲಿ ತಮ್ಮ ಪ್ರಯಾಣವನ್ನು ಆರಂಭಿಸಿದರು. ಬೆಳಗ್ಗೆ 10 ಗಂಟೆ ಸುಮಾರಿಗೆ ಮಾದಾವರ ಸಮೀಪ ಇರುವ ನೈಸ್ ಟೋಲ್ ಪ್ಲಾಜಾ ಸಮೀಪದ ರೈತರು ಕಳೆದುಕೊಂಡ ಜಾಗವನ್ನು ಪರಿಶೀಲನೆ ನಡೆಸಿದರು. ಆ ಭೂಮಿಯ ಪ್ರತಿ ಭಾಗಕ್ಕೂ ತೆರಳಿದ ಸಚಿವರು ಅದರ ಮೂಲ ಮಾಲೀಕರ ಜೊತೆ ಸಭೆ ನಡೆಸಿದರು. ಅಲ್ಲದೆ ಈ ಭೂಮಿಯನ್ನು ಮೂಲ ಮಾಲೀಕರಿಗೆ ವಾಪಸ್ ನೀಡಬೇಕು ಎಂದು ಒತ್ತಾಯ ಮಾಡಿದರು.

ತದನಂತರ ತೋಟದ ಗುಡ್ಡದಹಳ್ಳಿ, ಅಂಚೆಪಾಳ್ಯ, ತಿರುಮಲಪುರ, ಕೆ.ಜಿ ಶ್ರೀಕಂಠಪುರಂ, ಗಂಗೊಂಡನಹಳ್ಳಿ, ಕಾಚೋಹಳ್ಳಿ, ಹೊಸಹಳ್ಳಿ, ಗೊಲ್ಲರಹಟ್ಟಿ, ಕೊಡಿಗೆಹಳ್ಳಿ, ರಾಮಸಂದ್ರ, ಕೊಮ್ಮಘಟ್ಟ, ದೊಡ್ಡ ಬಸ್ತಿ, ಚಿಕ್ಕಬಸ್ತಿ, ಚಿಕ್ಕನಹಳ್ಳಿ, ಕೆಂಗೇರಿ, ದೊಡ್ಡ ತೂಗೂರು, ಚಿಕ್ಕ ತೂಗೂರು, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ಬೇಗೂರು, ಸೋಂಪುರ, ನೈಸ್ ವೃತ್ತ, ವರಾಹಸಂದ್ರ, ಬಿ.ಎಂ. ಕಾವಲ್, ಎಚ್ ಗೊಲ್ಲಹಳ್ಳಿ, ತಲಘಟ್ಟಪುರ, ಕೆಮ್ಮಿಗೆಪುರ, ಗಾಣಸಂದ್ರ ಸೇರಿದಂತೆ ಅನೇಕ ಗ್ರಾಮಗಳ ನೊಂದ ಸಾರ್ವಜನಿಕರ ಜತೆಯಲ್ಲಿ ಸಚಿವರು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅವರ ಮನವಿಗಳನ್ನು ಸ್ವೀಕರಿಸಿ ಅದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+