ಕಲಬುರ್ಗಿ ಹತ್ಯೆ ತನಿಖೆ ಮಾಡುವುದಿಲ್ಲ ಎಂದ ಎನ್‌ಐಎ, ಕಾರಣ ಏನು?
ಬೆಂಗಳೂರು, ಮಾರ್ಚ್ 24: ವಿಚಾರವಾದಿ, ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆ ತನಿಖೆ ಆಮೆ ಗತಿಯಲ್ಲಿ ಸಾಗುತ್ತಿದ್ದ ಕಾರಣ ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರು ತನಿಖೆಯನ್ನು ಸಿಬಿಐ ಅಥವಾ ಎನ್‌ಐಎ ಗೆ ವಹಿಸಬೇಕು ಎಂದು ಸುಪ್ರಿಂ ಕೋರ್ಟ್‌ಗೆ ಮನವಿ ಮಾಡಿದ್ದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ವಿಚಾರವಾಗಿ ಸ್ಪಷ್ಟಣೆ ನೀಡಿರುವ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ), 'ಎನ್‌ಐಎಯು ರಾಜ್ಯ ಮತ್ತು ಅಂತರರಾಜ್ಯದ ಭಯೋತ್ಪಾಧನಾ ಚಟುವಟಿಕೆಗಳನ್ನು ಮಾತ್ರವೇ ತನಿಖೆ ನಡೆಸುತ್ತದೆ, ಕೊಲೆಯಂತಹಾ ಘಟನೆಗಳ ತನಿಖೆ ನಡೆಸುವುದು ಎನ್‌ಐಎ ನಿಯಮಗಳಿಗೆ ಬಾಹಿರ' ಎಂದು ಹೇಳಿದೆ.
ನಿನ್ನೆ (ಮಾರ್ಚ್ 24) ಸುಪ್ರಿಂ ಕೋರ್ಟ್‌ಗೆ ಮಾಹಿತಿ ನೀಡಿದ ಕೇಂದ್ರ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಅವರು ಸಂಶೋಧಕ ಕಲುಬುರ್ಗಿ ಅವರ ಹತ್ಯೆಯನ್ನು ಭಯೋತ್ಪಾದನಾ ಕೃತ್ಯ ಎಂದು ಪರಿಗಣಸಲಾಗದು, ಹಾಗಾಗಿ ಎಐಎ ಕಾಯ್ದೆ ಅನ್ವಯ ಎನ್‌ಐಎ ಸಂಸ್ಥೆಯು ತನಿಖೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಎನ್‌ಐಎ ವಾದವನ್ನು ಪರಿಗಣಿಸಿರುವ ಸುಪ್ರಿಂಕೋರ್ಟ್ ಸಿಬಿಐ ಮತ್ತು ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಜುಲೈ ಮೊದಲ ವಾರದೊಳಗೆ ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಅದೇಶಿಸಿದೆ.
ಸಂಶೋಧಕ ಎಂಎಂ ಕಲಬುರ್ಗಿ ಅವರು ಆಗಸ್ಟ್ 30, 2015 ರಂದು ತಮ್ಮ ನಿವಾಸದ ಬಳಿಯೇ ಗುಂಡೇಟಿಗೆ ಬಲಿಯಾದರು. ಅಂದಿನಿಂದಲೂ ತನಿಖೆ ನಡೆಯುತ್ತಿದೆಯಾದರೂ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಮಹಾರಾಷ್ಟ್ರದ ವಿಚಾರವಾದಿ ದಾಬೋಲ್ಕರ್ ಅವರ ಹತ್ಯೆಗೂ ಕಲಬುರ್ಗಿ ಅವರ ಹತ್ಯೆಗೂ ಸಾಮ್ಯತೆ ಇದೆ ಎನ್ನಲಾಗಿದೆ ಆದರೂ ತನಿಖೆ ಕುಂಟಿತವಾಗಿಯೇ ನಡೆಯುತ್ತಿದೆ.
ಕಲಬುರ್ಗಿ ಹತ್ಯೆ ತನಿಖೆ ಆಮೆ ಗಾತಿಯಲ್ಲಿ ಸಾಗುತ್ತಿರುವ ಕಾರಣ ತನಿಖೆ ಜವಾಬ್ದಾರಿಯನ್ನು ಸಿಬಿಐ ಅಥವಾ ಎನ್‌ಐಎಗೆ ವಹಿಸಬೇಕೆಂದು ಉಮಾದೇವಿ ಅವರು ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಸಿಬಿಐ ಹಾಗೂ ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಕ್ಕೆ ನೊಟೀಸ್ ನೀಡಿದ್ದು ಸಿಬಿಐ ಮತ್ತು ಎರಡೂ ಸರ್ಕಾರಗಳು ಒಪ್ಪಿಕೊಂಡರೆ ಪ್ರಕರಣವನ್ನು ಸಿಬಿಐ ವಹಿಸಿಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications