ನಾವು ಎಷ್ಟು ದಿನ ಗೂಟ ಹೊಡೆದುಕೊಂಡು ಕೂರಲು ಸಾಧ್ಯ ಎಂದಿದ್ಯಾಕೆ ಡಿಸಿಎಂ ಡಿ.ಕೆ ಶಿವಕುಮಾರ್
ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಸಚಿವ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು. ಹೀಗಾಗಿ, ದಲಿತ ಮುಖ್ಯಮಂತ್ರಿ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ನನಗೆ ದೆಹಲಿಗೆ ಬರುವಂತೆ ಯಾವುದೇ ಕರೆ ಬಂದಿಲ್ಲ, ಇಲಾಖೆ ವಿಚಾರವಾಗಿ ಹೋಗಬೇಕಿದೆ. ಇನ್ನು ಸಚಿವರು, ಶಾಸಕರನ್ನು ನಿಯಂತ್ರಿಸಬೇಕಿರುವುದು ಮುಖ್ಯಮಂತ್ರಿ. ಸಂಪುಟಕ್ಕೆ ಹೊಸ ಪೀಳಿಗೆ, ಹೊಸ ಆಲೋಚನೆ ಬರಬೇಕು, ನಾವು ಎಷ್ಟು ದಿನ ಗೂಟ ಹೊಡೆದುಕೊಂಡಿರಲು ಸಾಧ್ಯ ಎಂದೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ನಾನು, ಸತೀಶ್ ಜಾರಕಿಹೊಳಿ ಸಮಾನ ಮನಸ್ಕರು, ಪಕ್ಷದ ವಿಚಾರ ವಾರಕ್ಕೊಮ್ಮೆ ಚರ್ಚಿಸುತ್ತೇವೆ ಎಂದಿದ್ದಾರೆ. ಮುಂದುವರಿದು ಮಹದೇವಪ್ಪ ಅವರು ಕೂಡ ನಮ್ಮ ಹೈಕಮಾಂಡ್ ಆಗಿರುವುದರಿಂದ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಾರೆ ಎಂಬ ವಿಚಾರ, ಮಾಹಿತಿ ಅವರಿಗೆ ತಿಳಿದಿರಬೇಕು. ಹೀಗಾಗಿ ಅವರು ದಲಿತ ಸಿಎಂ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಅವರು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಬದಲಾವಣೆ, ಅಧಿಕಾರ ಹಸ್ತಾಂತರ, ದಲಿತ ಸಿಎಂ ಬಗ್ಗೆ ಆಗುತ್ತಿರುವ ಚರ್ಚೆ ಕುರಿತು ಪ್ರಶ್ನೆಗೆ ಉತ್ತರಿಸಿರುವ ಅವರು, ಮಹದೇವಪ್ಪ ಅವರ ಹೇಳಿಕೆ ನೋಡಿದೆ. ಅದರ ಹೊರತಾಗಿ ಬೇರೆ ಯಾವುದೇ ಚರ್ಚೆ ಇಲ್ಲ. ಅವರಿಗೆ ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ಮಾಹಿತಿ ಇರಬಹುದು. ಆದರೆ ಆ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಲಾಖೆ ವಿಚಾರವಾಗಿ ದೆಹಲಿಗೆ ಹೋಗಬೇಕಿದೆ
ಇನ್ನು ಹೈಕಮಾಂಡ್ ನಿಮ್ಮನ್ನು ಹಾಗೂ ಸಿಎಂ ಅವರನ್ನು ದೆಹಲಿಗೆ ಬರುವಂತೆ ಆಹ್ವಾನಿಸಿದ್ದಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ನನಗೆ ಯಾವುದೇ ಕರೆ ಬಂದಿಲ್ಲ. ನಾನು ನಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸಗಳ ಮೇಲೆ ದೆಹಲಿಗೆ ಹೋಗಬೇಕಾಗಿದೆ. ನಗರಾಭಿವೃದ್ಧಿ ಇಲಾಖೆ ಯೋಜನೆಗೆ ಸಂಬಂಧಿಸಿದಂತೆ 1 ಲಕ್ಷ ಕೋಟಿ ರೂ. ನೀಡಲಾಗುತ್ತಿದ್ದು, ದೊಡ್ಡ ನಗರಗಳಿಗೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ನಮ್ಮ ನಗರಾಭಿವೃದ್ಧಿ ಸಚಿವರ ಬಳಿ ಚರ್ಚೆ ಮಾಡಿ, 2 ಹಾಗೂ 3ನೇ ಹಂತದ ನಗರಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಿದ್ಧಪಡಿಸಲು ಹೇಳುತ್ತೇನೆ ಎಂದು ಹೇಳಿದ್ದಾರೆ.
ಸಚಿವರು, ಶಾಸಕರನ್ನು ನಿಯಂತ್ರಿಸಬೇಕಿರುವುದು ಮುಖ್ಯಮಂತ್ರಿ
ಇದೇ ಸಂದರ್ಭದಲ್ಲಿ ಶಾಸಕರು ಹಾಗೂ ಸಚಿವರನ್ನು ನಿಯಂತ್ರಿಸುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಸಚಿವರ ಹೇಳಿಕೆಗಳ ಬಗ್ಗೆ ನೀವು ಮೌನವಾಗಿದ್ದೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, ಸಚಿವರನ್ನು ನಿಯಂತ್ರಣ ಮಾಡಬೇಕಿರುವುದು ಮುಖ್ಯಮಂತ್ರಿಗಳು. ಶಾಸಕರನ್ನು ಅವರೇ ನಿಯಂತ್ರಿಸಬೇಕು. ಪಕ್ಷದ ವಿಚಾರವಾಗಿ ದೆಹಲಿಗೆ ಮಾಹಿತಿ ನೀಡುವ ವಿಚಾರ ನಾನು ಮಾಡುತ್ತಿದ್ದೇನೆ ಎಂದಿದ್ದಾರೆ.
ಕೂಲಿ ವಿಚಾರ - ಸತೀಶ್ ಜಾರಕಿಹೊಳಿ ಭೇಟಿ
ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಮೊದಲು ಕೂಲಿ ಕೊಡಲಿ ಎಂಬ ರಾಜಣ್ಣ ಅವರ ಹೇಳಿಕೆಗೆ, ಅವರು ದೊಡ್ಡವರು ಎಂದಷ್ಟೇ ಡಿಸಿಎಂ ಹೇಳಿದ್ದಾರೆ. ದೆಹಲಿಗೆ ಹೋಗುತ್ತೀರಾ, ಹೈಕಮಾಂಡ್ ನಾಯಕರು ಮೊದಲ ಬಾರಿಗೆ ನಿಮ್ಮನ್ನು ಕರೆಸಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ ಎಂಬ ಬಗ್ಗೆ ಸದ್ಯಕ್ಕೆ ನಾನು ಇಲ್ಲಿ ಕುಮಾರಕೃಪದಲ್ಲಿ ಇದ್ದೇನೆ. ನಾನು, ಸತೀಶ್ ಜಾರಕಿಹೊಳಿ ಸಮಾನ ಮನಸ್ಕರು, ಪಕ್ಷದ ವಿಚಾರವಾಗಿ ವಾರಕ್ಕೊಮ್ಮೆ ಚರ್ಚೆ ಮಾಡುತ್ತೇವೆ. ಜಾರಕಿಹೊಳಿ ಅವರು ನಮ್ಮ ಹಿರಿಯ ನಾಯಕರು, ನನ್ನ ಜತೆ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನಾವು ವಾರಕ್ಕೊಮ್ಮೆ ಮಾತನಾಡುತ್ತಿರುತ್ತೇವೆ. ನಾವು ಸಮಾನ ಮನಸ್ಕರು. ಅವರಿಗೂ ಪಕ್ಷದ ಬಗ್ಗೆ ಅಪಾರವಾದ ಚಿಂತನೆ ಇದೆ. ನಮ್ಮ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ನಾವೆಲ್ಲ ಯೋಜನೆ ತಯಾರು ಮಾಡುತ್ತಿದ್ದೇವೆ ಎಂದಿದ್ದಾರೆ.
ನಾವು ಎಷ್ಟು ದಿನ ಗೂಟ ಹೊಡೆದು ಕೊಂಡಿರಲು ಸಾಧ್ಯ ?
ನೂತನ ಶಾಸಕರು ಕನಿಷ್ಠ 5 ಮಂತ್ರಿ ಸ್ಥಾನವನ್ನು ಹೊಸಬರಿಗೆ ನೀಡಬೇಕು ಎಂದು ಹೈಕಮಾಂಡ್‌ಗೆ ಬರೆದಿರುವ ಪತ್ರದ ಬಗ್ಗೆ ಕೇಳಿದಾಗ, ಈ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೇನೆ. ನನಗೆ ಅವರ ಪತ್ರ ತಲುಪಿಲ್ಲ. ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುತ್ತದೆ. ಮೋದಿ ಅವರು ಶಾಸಕರಾಗದೇ ಸಿಎಂ ಆಗಲಿಲ್ಲವೇ. ಅವರು ಕೇಳುವುದರಲ್ಲಿ ತಪ್ಪೇನಿಲ್ಲ. ಮೊದಲ ಬಾರಿಗೆ ಶಾಸಕರಾದಾಗ ಮಂತ್ರಿಯಾದವರಲ್ಲಿ ನಾನೂ ಒಬ್ಬ. ಹೊಸ ಪೀಳಿಗೆ ಬೆಳೆಯಬೇಕು. ನಾವು ಎಷ್ಟು ದಿನ ಗೂಟ ಹೊಡೆದುಕೊಂಡು ಕೂರಲು ಸಾಧ್ಯ ? ನಾನು ಸಚಿವನಾಗಿ 36 ವರ್ಷವಾಗಿದೆ. ಹೊಸ ಪೀಳಿಗೆ, ಹೊಸ ಆಲೋಚನೆಗಳು ಬರಬೇಕು. ಹೊಸಬರು ಸಂಪುಟಕ್ಕೆ ಬರಬೇಕು ಎಂದು ಬೆಂಬಲಿಸುವವರಲ್ಲಿ ನಾನೂ ಇದ್ದೇನೆ. ಹೊಸಬರನ್ನು ನಾವು ತಯಾರು ಮಾಡಬೇಕಲ್ಲ. ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ನಿಮ್ಮ ಮಂತ್ರಿಮಂಡಲದಲ್ಲಿ ಹೊಸ ಶಾಸಕರು ಸೇರ್ಪಡೆಯಾಗಲಿದ್ದಾರಾ ಎಂದು ಕೇಳಿದಾಗ, ನಾನು ಮಂತ್ರಿಮಂಡಲ ಮಾಡುತ್ತೇನೆ ಎಂದು ಹೇಳಿಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅವರು ಸಂಚಿವ ಸಂಪುಟ ವಿಸ್ತರಣೆ ಮಾಡುವ ಕಾರಣಕ್ಕೆ ಕೆಲವರು ಪತ್ರ ಬರೆಯುತ್ತಾರೆ, ದೆಹಲಿಗೆ ಹೋಗುತ್ತಾರೆ, ಹೊರಗಡೆ ಹೋಗುತ್ತಾರೆ. ಅವರಿಗೂ ಆಸೆ ಇರುತ್ತದೆ ಎಂದಿದ್ದಾರೆ.
ಬಜೆಟ್ ಗೌಪ್ಯವಾಗಿರಬೇಕು
ಕರ್ನಾಟಕದ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಸಿಎಂ ಆಗಲಿ, ಮಂತ್ರಿಗಳಾಗಲಿ ಬಜೆಟ್ ಯಾವ ರೀತಿ ಇರುತ್ತದೆ ಎಂದು ಮುಂಚಿತವಾಗಿ ಮುನ್ಸೂಚನೆ ನೀಡಲು ಆಗುವುದಿಲ್ಲ. ಅದೇ ಬಜೆಟ್‌ನ ಮಹತ್ವ. ಇಲ್ಲಿ ಗೌಪ್ಯತೆ ಇರಬೇಕು. ಇದೇ ಕಾರಣಕ್ಕೆ ಸಿಎಂ ಬಜೆಟ್ ಮಂಡನೆಗೂ ಮುನ್ನ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಗುವುದು. ರಾಜ್ಯದ ಹಿತದ ವಿಚಾರದಲ್ಲಿ ಸಾಕಷ್ಟು ಸವಾಲುಗಳಿವೆ. ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡಿಲ್ಲ. ಈ ಮಧ್ಯೆ ಮುಖ್ಯಮಂತ್ರಿಗಳೇ ಹಣಕಾಸು ಸಚಿವರಾಗಿರುವುದರಿಂದ ಅವರು ಯಾವ ರೀತಿ ಬಜೆಟ್ ಮಂಡಿಸುತ್ತಾರೆ ನೋಡೋಣ ಎಂದಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ













Click it and Unblock the Notifications