2028 ರ ವಿಧಾನಸಭಾ ಚುನಾವಣೆ: ಬಿಜೆಪಿ-ಜೆಡಿಎಸ್ ಗೆಲ್ಲುವ ಸ್ಥಾನಗಳ ಬಗ್ಗೆ ಭವಿಷ್ಯ ನುಡಿದ ನಿಖಿಲ್ ಕುಮಾರಸ್ವಾಮಿ
ಬೆಂಗಳೂರು: ಮುಂದಿನ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಎನ್ಡಿಎ ಮೈತ್ರಿಕೂಟವು 150 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಆ ನಿಟ್ಟಿನಲ್ಲಿ ಎರಡೂ ಪಕ್ಷಗಳು ಸೇರಿ ಕೆಲಸ ಮಾಡುತ್ತಿದ್ದೇವೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಆದರೆ ಒಳ್ಳೆಯದು ಎಂದು ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ನಿಖಿಲ್ ಕುಮಾರಸ್ವಾಮಿ, ನಮ್ಮ ಪಕ್ಷದ ಕಥೆ ಇರಲಿ. ಬಿಹಾರದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿ ಬಂದು ನಿಂತಿದೆ? ಎಷ್ಟು ಡಿಜಿಟ್'ಗೆ ಬಂದು ನಿಂತಿದೆ. ಬಿಹಾರ ಅಷ್ಟೇ ಅಲ್ಲ, ಇನ್ನೂ ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್ ಎಷ್ಟೆಷ್ಟು ಸ್ಥಾನ ಕಳಿಸಿದೆ? ಅದರ ಮತ ಗಳಿಕೆಯಷ್ಟು? ಅಲ್ಲಿ ಡಿಕೆ ಶಿವಕುಮಾರ್ ಅವರು ತಮ್ಮ ಪಕ್ಷವನ್ನು ಯಾವ ಪಕ್ಷದಲ್ಲಿ ವಿಲೀನ ಮಾಡಿದ್ದಾರೆ ಎನ್ನುವುದನ್ನು ಮೊದಲು ಹೇಳಲಿ ಎಂದರು.

ಜೆಡಿಎಸ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ 19 ಕ್ಷೇತ್ರಗಳಲ್ಲಿ ಗೆದ್ದಿದೆ. ಅದೇ ಬಿಹಾರ, ಮಹಾರಾಷ್ಟ್ರ, ದೆಹಲಿ ಮುಂತಾದ ರಾಜ್ಯಗಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ? ಮೊದಲು ರಾಷ್ಟ್ರೀಯ ಪಕ್ಷ ಎನ್ನುವ ಬೋರ್ಡ್ ತೆಗೆದುಹಾಕಿ ಬೇರೆ ಹಾಕಿಕೊಳ್ಳಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಾರ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ರಾಜಕಾರಣ ಮಾಡೋದಕ್ಕೆ ಬಂದಿರೋದು. ವಿಧಾನಸೌಧಕ್ಕೆ ಹೋಗೋದಕ್ಕೆ ನಾನು ರಾಜಕಾರಣಕ್ಕೆ ಬಂದಿದ್ದೇನೆ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ ಎಂದು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಹೇಳಿದರು.
ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್ 37% ಮತ ಪಾಲು (ವೋಟ್ ಶೇರ್) ಹೊಂದಿದೆ. ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ನಮ್ಮ ಬಲಿಷ್ಟವಾಗಿದೆ. ಎಷ್ಟು ಪರ್ಸೆಂಟ್ ವೋಟು ಪಡೆದಿದ್ದೇವೆ ಎನ್ನುವುದನ್ನು ಅಂಕಿಅಂಶಗಳು ಹೇಳುತ್ತವೆ. ಇನ್ನು ಕಿತ್ತೂರು ಕರ್ನಾಟಕ, ಕರಾವಳಿ ಭಾಗದಲ್ಲಿಯೂ ನಮ್ಮ ಪಕ್ಷವಿದೆ. ಜೆಡಿಎಸ್ ರಾಜ್ಯದ ಉದ್ದಗಲಕ್ಕೂ ಇರುವ ಪ್ರಾದೇಶಿಕ ಪಕ್ಷ ಎಂದು ಡಿಕೆಶಿಗೆ ತಿರುಗೇಟು ನಿಖಿಲ್ ಕುಮಾರಸ್ವಾಮಿ ಕೊಟ್ಟರು.
ಸವದತ್ತಿಯಲ್ಲಿ 30,000 ವೋಟ್ ಪಡೆದು ಪಕ್ಷ ಗಟ್ಟಿಯಾಗಿದೆ. ಅದೇ ರೀತಿ ಸೇಡಂ, ರಾಯಭಾಗ, ಶೃಂಗೇರಿ ಸೇರಿ ಅನೇಕ ಕ್ಷೇತ್ರದಲ್ಲಿ ಹೆಚ್ಚು ಮತಗಳನ್ನು ಪಡೆದಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿರುವ ಕೆಲ ವ್ಯಕ್ತಿಗಳು ಜೆಡಿಎಸ್ ಶಕ್ತಿಯನ್ನು ಪ್ರಶ್ನೆ ಮಾಡಬಹುದು. ನಮ್ಮ ಪಕ್ಷದ ಶಕ್ತಿ ಏನು ಎಂಬುದನ್ನು ಕಳೆದ ನಾಲ್ಕು ವಿಧಾನಸಭೆ ಚುನಾವಣೆಗಳಲ್ಲಿ ರಾಜ್ಯದ ಜನ ತೋರಿಸಿದ್ದಾರೆ. 55 ಲಕ್ಷ ಜನರು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದು ವಿಲೀನ ಮಾಡಿ ಎಂದ ಡಿಕೆಶಿ ಟಾಂಗ್ ಕೊಟ್ಟರು.
ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಸಹಜ ಮೈತ್ರಿ ಏರ್ಪಟ್ಟಿದೆ. ಲೋಕಸಭೆ ಚುನಾವಣೆಯಲ್ಲಿ ನಮ್ಮ ಒಗ್ಗಟ್ಟಿನ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಗೊತ್ತಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಯ ಬಲ ತಿಳಿಯಲಿದೆ ನಮ್ಮ ಹಾಗೂ ಬಿಜೆಪಿಯ ಮೈತ್ರಿ ಸ್ವಾಭಾವಿಕ, ಹಾಗೂ ಕಾರ್ಯಕರ್ತರ ಪ್ರೀತಿ ವಿಶ್ವಾಸದಿಂದ ಆಗಿರುವ ಮೈತ್ರಿ ಇದು ಎಂದು ನಿಖಿಲ್ ಅವರು ಹೇಳಿದರು.












Click it and Unblock the Notifications