ಆಗಸ್ಟ್ 20ರವರೆಗೆ ಶಿರಾಡಿ ಘಾಟ್ ಸಂಚಾರ ಸಂಪೂರ್ಣ ಬಂದ್
ಬೆಂಗಳೂರು, ಆಗಸ್ಟ್ 15: ವಿಪರೀತ ಮಳೆಯಿಂದ ಗುಡ್ಡ ಹಾಗೂ ರಸ್ತೆ ಕುಸಿತ ಉಂಟಾಗುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆಗಸ್ಟ್ 20ರವರೆಗೂ ಶಿರಾಡಿ ಘಾಟ್ ಮಾರ್ಗದಲ್ಲಿನ ಸಂಚಾರವನ್ನು ಬಂದ್ ಮಾಡಿದೆ.
ಅಲ್ಲದೆ, ಭಾರಿ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸೀಸ್ ವಾಹನಗಳು, ಎಲ್ಲ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ಓಡಾಟವನ್ನು ಆಗಸ್ಟ್ 25ರವರೆಗೂ ನಿಷೇಧಿಸಿದೆ.

ಸಕಲೇಶಪುರ ಉಪವಿಭಾಗದ ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿ ಘಾಟ್ ಭಾಗದ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಶಿರಾಡಿ ಘಾಟ್ ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದು, ಕೆಲವು ಅಪಘಾತಗಳು ಸಂಭವಿಸಿವೆ. ಟ್ಯಾಂಕರ್ ಪಲ್ಟಿಯಾಗಿ ಚಾಲಕ ಮೃತಪಟ್ಟಿರುವ ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ ಮೇಲೆ ಗುಡ್ಡ ಕುಸಿದಿದೆ.
ಮಳೆ ಮುಂದುವರಿದಿರುವ ಕಾರಣ ಇನ್ನಷ್ಟು ಅನಾಹುತಗಳು ಉಂಟಾಗುವ ಅಪಾಯವಿದೆ. ಈಗಾಗಲೇ ರಸ್ತೆಯಲ್ಲಿ ಭಾರಿ ಪ್ರಮಾಣದ ಮಣ್ಣು ತುಂಬಿಕೊಂಡಿದ್ದು, ವಾಹನ ದಟ್ಟಣೆಯಿಂದಾಗಿ ಅದನ್ನು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ.
ಮಣ್ಣನ್ನು ತೆರವುಗೊಳಿಸಿ ರಸ್ತೆಗಳನ್ನು ದುರಸ್ತಿಗೊಳಿಸಲು ಕನಿಷ್ಠ ಎರಡು ದಿನಗಳು ಬೇಕಾಗಲಿದ್ದು, ಅಲ್ಲಿಯವರೆಗೂ ಸಂಪೂರ್ಣ ವಾಹನ ಸಂಚಾರ ನಿಷೇಧ ಮಾಡುವಂತೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೋರಿದ್ದರು.
ಅದರಂತೆ ವಾಹನ ಸಂಚಾರವನ್ನು ಐದು ದಿನಗಳವರೆಗೆ ನಿರ್ಬಂಧಿಸಲಾಗಿದ್ದು, ಆಗಸ್ಟ್ 20ರ ಬೆಳಗಿನ ಆರು ಗಂಟೆಯ ಬಳಿಕ ಲಘು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.












Click it and Unblock the Notifications