PM Modi Sworn: ಕರ್ನಾಟಕದ ಅನೇಕ ಕಡೆ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ, 'ಮೋದಿ-ಶ್ರೀರಾಮ' ಪರ ಘೋಷಣೆ
ಬೆಂಗಳೂರು, ಜೂನ್ 09: ನರೇಂದ್ರ ಮೋದಿಯವರು ಇಂದು ಭಾನುವಾರ (ಜೂನ್ 09) ಸಂಜೆ ಮೂರನೇ ಭಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಹಿನ್ನೆಲೆಯಲ್ಲಿ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಮಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಸಂಭ್ರಮಾಚರಣೆ ಕಂಡು ಬಂತು.
ಪ್ರಧಾನಿ ಪದಗ್ರಹಣ ಸ್ವೀಕಾರ ಆಗುತ್ತಿದ್ದಂತೆ ರಾತ್ರಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ಮೂಲಕ ತಮ್ಮ ನಾಯಕನನ್ನು ಜನರು ಬೆಂಬಲಿಸಿದರು. ಆಯಾ ಜಿಲ್ಲೆಗಳ ಕ್ಷೇತ್ರದಲ್ಲಿ ಚುನಾಯಿತ ಬಿಜೆಪಿ ಸಂಸದರ ಪೋಟೋಗಳನ್ನು ಹಿಡಿದು ಸಂಭ್ರಮಿಸಿದರು. ಪ್ರಧಾನಿ ಮೋದಿ ಪರ, ಭಾರತದ ಪರ ಹಾಗೂ ಶ್ರಿರಾಮನ ಪರ ಘೋಷಣೆ ಕೂಗಿದರು.

ಹುಬ್ಬಳ್ಳಿಯಲ್ಲಿ ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ವಿವಿಧ ಕಡೆಗಳಲ್ಲಿ ವಿಜಯೋತ್ಸವ ನಡೆಯಿತು. ಹುಬ್ಬಳ್ಳಿ ದುರ್ಗದ ಬೈಲ್, ಹಳೆ ಹುಬ್ಬಳ್ಳಿ ವೃತ್ತದ ಬಳಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಬಿಜೆಪಿ ಬೆಂಬಲಿಗರು, ಕಾರ್ಯಕರ್ತರು ಸ್ಥಳೀಯರು ಮುಖಂಡರು ಪಾಲ್ಗೊಂಡು ಸಿಹಿ ಹಂಚಿದರು.
ರಸ್ತೆಗಳು, ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಟಿ, ಪ್ರಧಾನಿ ಮೋದಿ ಬ್ಯಾನರ್ ಹಿಡಿದು ದೇಶದ ಪರ ಘೋಷಣೆ ಕೂಗಿದರು. ''ಮೋದಿ..ಮೋದಿ..ಜೈ ಶ್ರೀರಾಮ, ವಂದೇ ಭಾರತ್ ಮಾತಾಕಿ ಜೈ..' ಎಂದು ಘೋಷಣೆ ಕೂಗಿದರು. ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಧಾರವಾಡ ಲೋಕಸಭಾ ಚುನಾವಣೆ ಕ್ಷೇತ್ರದಲ್ಲಿ ಚುನಾಯಿತರಾದ ಪ್ರಹ್ಲಾದ್ ಜೋಶಿಯವರ ಭಾವಚಿತ್ರ ಹಿಡಿದು ಅವರ ಪರ ಘೋಷಣೆ ಕೂಗಿದರು.
ಮೋದಿ ಜೊತೆ 69 ಸಂಸದರ ಪದಗ್ರಹಣ
ಸದರಿ ಲೋಕಸಭಾ ಚುನಾವಣೆಯಲ್ಲಿ ದೇಶದ 543 ಸೀಟುಗಳ ಪೈಕಿ ಎನ್‌ಡಿಎ ಮೈತ್ರಿಕೂಟ 292 ಸ್ಥಾನಗಳನ್ನು ಪಡೆದುಕೊಂಡಿದೆ. ಎನ್‌ಡಿಗೆ ಬಹುಮತ ಬರುತ್ತಿದ್ದಂತೆ ಪ್ರಧಾನಿ ಮೋದಿಯವರು ಮತ್ತೆ ಮೂರನೇ ಭಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ನಿಶ್ಚಿತವಾಯಿತು. ಅದರಂತೆ ಇಂದು ಪ್ರಧಾನಿ ಮೋದಿ ಜೊತೆಗೆ 69 ಸಂಸದರು ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.












Click it and Unblock the Notifications