15,000,00 ಕೊಡ್ತಿನಿ ಎಂದ ನರೇಂದ್ರ ಮೋದಿ ದಿನಕ್ಕೊಂದು ರೈಲು ಬಿಡ್ತಾರೆ : ಕೆ.ಎನ್. ರಾಜಣ್ಣ
ತುಮಕೂರು, ಆಗಸ್ಟ್ 11: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 10, 2025ರಂದು ಬೆಂಗಳೂರಿನ ನಮ್ಮ ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಿದ್ದಾರೆ. ನಮ್ಮ ಮೆಟ್ರೋ ಹಳದಿ ಮಾರ್ಗವನ್ನ ನರೇಂದ್ರ ಮೋದಿ ಉದ್ಘಾಟನೆ ಮಾಡಿರುವುದನ್ನು ಕುಹಕವಾಡಿರುವ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು, ಪ್ರಧಾನಿ ಮೋದಿ ದಿನಕ್ಕೊಂದು ರೈಲು ಬಿಡುತ್ತಾರೆ ಎಂದು ಟೀಕಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸಿ, ಅವರದ್ದೇ ಸರ್ಕಾರದ ರೈಲ್ವೆ ಖಾತೆ ಸಹಾಯಕ ಸಚಿವ ಹಾಗೂ ತುಮಕೂರು ಸಂಸದ ವಿ.ಸೋಮಣ್ಣ ಅವರನ್ನು ಹಾಡಿಹೊಗಳಿದ್ದಾರೆ. ಪ್ರಧಾನಿ ಮೋದಿ ದಿನಕ್ಕೊಂದು ರೈಲು ಬಿಡುತ್ತಾರೆ. ಆದರೆ, ರೈಲ್ವೆ ಖಾತೆ ಸಹಾಯಕ ಸಚಿವರಾಗಿರುವ ವಿ.ಸೋಮಣ್ಣ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ಕೇವಲ ಇದೊಂದು ದಿನ ಮಾತ್ರವಲ್ಲ, ಪ್ರತಿದಿನವೂ ರೈಲು ಬಿಡುತ್ತಾರೆ. 15 ಲಕ್ಷ ರೂಪಾಯಿ ಹಣವನ್ನು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹಾಕುವುದಾಗಿ ರೈಲು ಬಿಟ್ಟು ಎಷ್ಟೋ ವರ್ಷಗಳೇ ಉರುಳಿವೆ. ಇನ್ನೂ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ, ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ರೂ. ಅನುದಾನ ಕೊಡುವುದಾಗಿ, ಪ್ರಧಾನಿ ಮೋದಿ ರೈಲು ಬಿಟ್ಟಿದ್ದಾರೆ ಎಂದು ಕೆ.ಎನ್. ರಾಜಣ್ಣ ವ್ಯಂಗ್ಯವಾಡಿದರು.
ಇನ್ನೂ ನರೇಂದ್ರ ಮೋದಿ ಅವರ ಟೀಕಿಸಿರುವ ಕೆ ಎನ್ ರಾಜಣ್ಣ ಅವರು, ರೈಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಒಳ್ಳೆಯ ಕೆಲಸಗಾರ. ರಾಜ್ಯಕ್ಕೆ ಹೆಚ್ಚಿನ ರೈಲ್ವೆ ಅನುದಾನ ತರುವಲ್ಲಿ ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಹಕಾರ ಕೆ ಎನ್ ರಾಜಣ್ಣ ಅವರು ಹೇಳಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸರ್ವಾಧಿಕಾರಿ ಎಂದು ಹೇಳುತ್ತಿದ್ದ ಕಾಲದಲ್ಲೂ, ಸಿಬಿಐ, ಇಡಿ, ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಳ್ಳುತ್ತಿರಲಿಲ್ಲ. ಈಗ ಪ್ರತಿಯೊಂದರಲ್ಲೂ ಏಜೆನ್ಸಿಗಳನ್ನು ದುರುಪಯೋಗ ಮಾಡಿಕೊಂಡು, ರಾಜಕೀಯ ವಿರೋಧಿಗಳನ್ನು ಭಯಭೀತಿಗೊಳಿಸಲಾಗುತ್ತಿದೆ" ಎಂದು ಕೆ.ಎನ್. ರಾಜಣ್ಣ ತೀವ್ರ ವಾಗ್ದಾಳಿ ನಡೆಸಿದರು. ರಾಜಕೀಯದಲ್ಲಿಸಕ್ರಿಯವಾಗಿರಲು ಅಕ್ರಮಗಳನ್ನು ಮಾಡಬಾರದು. ಇವತ್ತು ಅಧಿಕಾರದಲ್ಲಿದ್ದವರು ಇಂತಹ ಅಕ್ರಮಗಳನ್ನು ಎಸಗಿದರೆ, ನಾಳೆ ಬೇರೆಯವರು ಅಧಿಕಾರಕ್ಕೆ ಬಂದು ಅದನ್ನೇ ಮಾಡುತ್ತಾರೆ ಎಂದು ಕೆ.ಎನ್. ರಾಜಣ್ಣ ಹೇಳಿದರು.
ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ಮತಗಳ್ಳತನ ಆರೋಪ ಮಾಡಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಕೆ.ಎನ್. ರಾಜಣ್ಣ ಅವರು ಉತ್ತರಿಸಿದ್ದು, ಮತಕಳ್ಳತನ ಆರೋಪದ ಬೆನ್ನಲ್ಲೇ ಚುನಾವಣಾ ಆಯೋಗದ ವೆಬ್‌ಸೈಟ್ ಬಂದ್ ಮಾಡಿರುವುದಕ್ಕೆ ತಪ್ಪು ಮಾಡಿರುವ ಭೀತಿಯೇ ಕಾರಣ ಎಂದು ಕಿಡಿಕಾರಿದರು.












Click it and Unblock the Notifications