'ಕೇರಳದಲ್ಲಿ ಮತದಾರರಿಗೆ ಅವಮಾನವಾಗುತ್ತಿದೆ'

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಕಾಸರಗೋಡು, ಮೇ 09 : 'ಕೇರಳದಲ್ಲಿ ಯುಡಿಎಫ್ ಮತ್ತು ಎಲ್‌ಡಿಎಫ್ ನಡುವೆ ಹೊಂದಾಣಿಕೆಯ ರಾಜಕೀಯ ನಡೆಯುತ್ತಿದೆ. ಇಲ್ಲಿನ ವಿದ್ಯಾವಂತ ಮತದಾರರನ್ನು ಈ ಎರಡೂ ಪಕ್ಷಗಳು ಅವಮಾನ ಮಾಡುತ್ತಿವೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾನುವಾರ ಕಾಸರಗೋಡಿನ ವಿದ್ಯಾನಗರ ಸರ್ಕಾರಿ ಕಾಲೇಜಿನ ಮೈದಾನದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, 'ಕೇರಳದಲ್ಲಿ ಹೊಸ ರೀತಿಯ ರಾಜಕೀಯ ನಡೆದುಬರುತ್ತಿದೆ. ಇದು ಹೊಂದಾಣಿಕೆಯ ರಾಜಕೀಯ, ಭ್ರಷ್ಟಾಚಾರದ ರಾಜಕೀಯ ಮತ್ತು ಪರಸ್ಪರ ಒಬ್ಬರನ್ನೊಬ್ಬರು ಉಳಿಸಿಕೊಳ್ಳಲಿರುವ ಒಪ್ಪಂದದ ರಾಜಕೀಯ' ಎಂದು ದೂರಿದರು. [ಚುನಾವಣಾ ಸಮೀಕ್ಷೆ : ಕೇರಳದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ 1 ಸ್ಥಾನ]

kasargod

'ಕೇರಳದಲ್ಲಿರುವುದು ಎಲ್‌ಡಿಎಫ್ ಮತ್ತು ಯುಡಿಫ್ ನಡುವಿನ ಕರಾರು ಆಡಳಿತ. ಮೊದಲಿನ ಐದು ವರ್ಷ ಒಂದು ಪಕ್ಷ ಅಧಿಕಾರಕ್ಕೆ ಬಂದರೆ ನಂತರದ ಐದು ವರ್ಷ ಇನ್ನೊಂದು ಪಕ್ಷ ಆಡಳಿತ ನಡೆಸುತ್ತದೆ. ಹೀಗೆ ಎರಡು ಪಕ್ಷಗಳು ಒಮ್ಮೆ ನಾನು, ಮತ್ತೊಮ್ಮೆ ನೀನು ಎಂಬಂತೆ ಅಧಿಕಾರ ಚಲಾಯಿಸುತ್ತಿವೆ' ಎಂದು ಹೇಳಿದರು. [ಪಂಚರಾಜ್ಯಗಳ ಚುನಾವಣೆ: ಹೊರಬಿದ್ದ ಮತ್ತೊಂದು ಸಮೀಕ್ಷೆ]

'ಕೇರಳದ ಕಾಂಗ್ರೆಸ್ ನಾಯಕರು ಸಿಪಿಎಂ ಮಾಡುತ್ತಿರುವ ಕ್ರೌರ್ಯಗಳ ಬಗ್ಗೆ ಹೇಳುತ್ತಾರೆ. ಆದರೆ ಪಶ್ಚಿಮ ಬಂಗಾಳಕ್ಕೆ ಹೋದರೆ ಅಲ್ಲಿ ಕಮ್ಯುನಿಸ್ಟ್ ಪಕ್ಷಕ್ಕೆ ಮಾತ್ರ ಬಂಗಾಳವನ್ನು ರಕ್ಷಿಸಲು ಸಾಧ್ಯ ಎಂದು ಹೇಳುತ್ತಾರೆ. ಎರಡು ಪ್ರದೇಶಗಳಲ್ಲಿ ಎರಡು ರೀತಿಯ ವರ್ತನೆ ಮಾಡುವ ಪಕ್ಷಗಳನ್ನು ನೀವು ನಂಬುತ್ತೀರೋ? ಎಂದು' ಮೋದಿ ಪ್ರಶ್ನಿಸಿದರು. [ಶ್ರೀಶಾಂತ್ ಹೊಸ ಇನ್ನಿಂಗ್ಸ್, ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧೆ!]

narendra modi

'ಕೇರಳದಲ್ಲಿ ಯಾರು ಅಧಿಕಾರಕ್ಕೇರುತ್ತಾರೆ? ಎಂಬುದು ಈ ಚುನಾವಣೆಯಲ್ಲಿ ಮುಖ್ಯವಲ್ಲ. ಕೇರಳವನ್ನು ಯಾರು ರಕ್ಷಿಸುತ್ತಾರೆ? ಮತ್ತು ಕೇರಳದ ಯುವ ಜನಾಂಗಕ್ಕೆ ಯಾರು ಉದ್ಯೋಗ ನೀಡುತ್ತಾರೆ?, ಯಾರು ಅವರ ಭವಿಷ್ಯವನ್ನು ಭದ್ರ ಪಡಿಸುತ್ತಾರೆ? ಎಂಬುದು ಮುಖ್ಯ' ಎಂದರು.

'ಕೇರಳವನ್ನು ದೇವರ ನಾಡು ಎಂದು ಹೇಳಲಾಗುತ್ತದೆ. ಆದರೆ, ಇಲ್ಲಿ ಮುಗ್ಧ ಜನರನ್ನು ಹತ್ಯೆಗೈಯ್ಯಲಾಗುತ್ತಿದ್ದು, ಈ ಬಗ್ಗೆ ದೇಶದ ಜನರಿಗೆ ಗೊತ್ತಿಲ್ಲ ಎಂಬುದನ್ನು ನಾನು ದೆಹಲಿಯ ಮಾಧ್ಯಮದವರಿಗೆ ಹೇಳಲು ಬಯಸುತ್ತೇನೆ' ಎಂದು ಹೇಳಿದರು.

ಕೇರಳದಲ್ಲಿ ಮೇ 16ರಂದು ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಭಾನುವಾರ ಮಂಗಳೂರಿಗೆ ಆಗಮಿಸಿದ ಮೋದಿ ಅಲ್ಲಿಂದ ಕಾಸರಗೋಡಿಗೆ ತೆರಳಿ ಚುನಾವಣಾ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡಿದರು. [ಪಿಟಿಐ ಚಿತ್ರಗಳು]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi on Sunday addressed election campaign rally in Kasargod, Kerala. Here are the highlights.
Please Wait while comments are loading...