Nandini Milk: ನಂದಿನಿ ಹಾಲಿನ ಪ್ಯಾಕೆಟ್‌ಗೆ ಹೊಸ ರೂಪ; ಏನಿದರ ವಿಶೇಷತೆ?
ಜಾಗತಿಕ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಕರ್ನಾಟಕದ ಹೆಮ್ಮೆಯ "ನಂದಿನಿ" ಇದೀಗ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕರ್ನಾಟಕ ಮಾತ್ರವಲ್ಲದೆ, ದೆಹಲಿ ಸೇರಿ ವಿದೇಶಗಳಲ್ಲಿ ನಂದಿನಿ ಹೆಸರುವಾಸಿಯಾಗಿದೆ. ತನ್ನ ಗುಣಮಟ್ಟದಿಂದ ನಂದಿನಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿದೆ. ಇದೀಗ ನಂದಿನಿ ಹಾಲಿನ ಪ್ಯಾಕೆಟ್ ವಿಚಾರದಲ್ಲೂ ಬದಲಾವಣೆಯ ಪರ್ವ ಶುರುವಾಗಿದೆ. ಇಲ್ಲಿವರೆಗೆ ಬಳಸುತ್ತಿದ್ದ ಹಾಲಿನ ಪ್ಯಾಕೆಟ್‌ಗಳಿಗೆ ಗುಡ್‌ಬೈ ಹೇಳಲಾಗುತ್ತಿದ್ದು, ಪರಿಸರಸ್ನೇಹಿ ಕ್ರಮಕ್ಕೆ ಮುಂದಾಗಿದೆ. ಈ ಹೊಸ ಪ್ರಯತ್ನ ದೇಶದಲ್ಲೇ ಮೊದಲು ಎನ್ನಲಾಗುತ್ತಿದ್ದು, ಈ ಹೊಸ ಪ್ಯಾಕೆಟ್‌ನ ವಿಶೇಷತೆಯೂ ಗಮನ ಸೆಳೆದಿದೆ.
ಕರ್ನಾಟಕ ಮಿಲ್ಕ್ ಫೆಡರೇಶನ್‌ನ (ಕೆಎಂಎಫ್) ನಂದಿನಿ ಹಾಲು ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಶೇ 100ರಷ್ಟು ಬಯೋಡಿಗ್ರೇಡಬಲ್ ಹಾಲು ಪ್ಯಾಕೆಟ್‌ಗಳನ್ನು ಪರಿಚಯಿಸುತ್ತಿದೆ. ಇಲ್ಲಿವರೆಗೆ ತನ್ನ ರುಚಿ, ಗುಣಮಟ್ಟದಿಂದ ಹೆಸರುವಾಸಿಯಾಗಿರುವ ನಂದಿಯು ಇದೀಗ ತನ್ನ ಪ್ಯಾಕೆಟ್ ವಿಚಾರದಲ್ಲೂ ಪರಿಸರ ಸ್ನೇಹಿ ಕ್ರಾಂತಿಗೆ ಮುಂದಾಗಿದೆ. ಈ ಪ್ಯಾಕೆಟ್‌ಗಳು ಮೆಕ್ಕೆಜೋಳ (ಕಾರ್ನ್ ಸ್ಟಾರ್ಚ್), ಕಬ್ಬು ಮತ್ತು ಇತರ ಸಸ್ಯಾಧಾರಿತ ವಸ್ತುಗಳಿಂದ ತಯಾರಾಗುತ್ತವೆ. ವಿದೇಶಿ ತಂತ್ರಜ್ಞಾನದಲ್ಲಿ ಈ ಪ್ಯಾಕೆಟ್ ಹೊರತರಲಾಗಿದ್ದು, ಹಾಳಾದ ಪ್ಲಾಸ್ಟಿಕ್ ಪ್ಯಾಕೆಟ್‌ಗಳಿಗೆ ಪರ್ಯಾಯ ಮಾರ್ಗ ಎಂದು ಹೇಳಲಾಗುತ್ತಿದೆ.

ಹೊಸ ಪ್ಯಾಕೆಟ್‌ನ ವಿಶೇಷತೆ ಏನು?
ಸಾಮಾನ್ಯ ಪ್ಲಾಸ್ಟಿಕ್ ಪ್ಯಾಕೆಟ್‌ಗಳು ಭೂಮಿಯಲ್ಲಿ ಕುಸಿದುಹೋಗಲು ಹಲವು ವರ್ಷಗಳಿಗಿಂತ ಹೆಚ್ಚಿನ ಸಮಯ ಬೇಕು. ಪ್ರಸ್ತುತ ಹಾಲಿನ ಪ್ಯಾಕೆಟ್‌ಗೆ ಬಳಸುವ ಪಾಲಿಥಿನ್ ಕವರ್ ಮಣ್ಣಲ್ಲಿ ಕರಗುವುದು ನಿಧಾನ. ಆದರೆ, ನಂದಿನಿಯ ಹೊಸ ಪ್ಯಾಕೆಟ್‌ಗಳು ಕೇವಲ 90 ದಿನಗಳಲ್ಲಿ ಅಥವಾ ಸುಮಾರು 6 ತಿಂಗಳಲ್ಲಿ ಮಣ್ಣಿನಲ್ಲಿ ಕರಗುತ್ತವೆ. ಕರ್ನಾಟಕದಲ್ಲಿ ಪ್ರತಿದಿನ 20-25 ಲಕ್ಷದಷ್ಟು ಪ್ಲಾಸ್ಟಿಕ್ ಹಾಲಿನ ಪ್ಯಾಕೆಟ್‌ಗಳು ಬಳಕೆಯಾಗುತ್ತಿದ್ದು, ಪರಿಸರದ ಮೇಲೆ ಬೀರುತ್ತಿರುವ ದುಷ್ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಈ ವಿನೂತನ ಪ್ಯಾಕೆಟ್‌ಗಳು ಪ್ರಮುಖ ಪಾತ್ರ ವಹಿಸಲಿವೆ.
ಕನಕಪುರದ ಶಿವನಹಳ್ಳಿ ಬಳಿ ಇರುವ ಮೆಗಾಡೇರಿ ಪ್ಲಾಂಟ್‌ನಲ್ಲಿ ಹೊಸದಾಗಿ ಡಿಕಂಪೋಸಬಲ್ ಕವರ್‌ಗಳನ್ನು ಬಳಕೆ ಮಾಡಲು ಮುಂದಾಗಿದೆ. ಇದು ಭಾರತದಲ್ಲೇ ಮೊದಲನೆ ಪ್ರಯತ್ನ ಎನ್ನಲಾಗಿದೆ. ಪ್ರಾಯೋಗಿಕ ಹಂತದಲ್ಲಿ ಪ್ರತಿ ದಿನ ಸುಮಾರು 2 ಲಕ್ಷ ಹಾಲಿನ ಪ್ಯಾಕೆಟ್‌ಗಳನ್ನು ಹೊರತರಲಾಗುತ್ತಿದೆ. ಹಾಲು ಲೀಕ್ ಆಗುವುದು, ಗುಣಮಟ್ಟ ತಗ್ಗುವುದು ಎನ್ನುವ ಸಮಸ್ಯೆ ಇಲ್ಲ ಎಂದು ಗ್ರಾಹಕರಿಂದಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದುವರೆಗೂ ಅಮುಲ್‌ನಂತಹ ಬ್ರಾಂಡ್‌ಗಳು ಕೂಡ ಈ ಮಟ್ಟದ ಜೈವಿಕ ಪ್ಯಾಕೇಜಿಂಗ್ ವಿಧಾನವನ್ನು ಅನುಸರಿಸಿಲ್ಲ.
ಬೆಂಗಳೂರು ಒಂದರಲ್ಲೇ ಪ್ರತಿದಿನ 25 ಲಕ್ಷ ಪ್ಲಾಸ್ಟಿಕ್ ಹಾಲಿನ ಪ್ಯಾಕೆಟ್‌ಗಳನ್ನು ಬಳಸುತ್ತದೆ. ಈ ಹೊಸ ಕವರ್‌ಗಳು ನಗರಗಳಲ್ಲಿ ಮುಚ್ಚಿಹೋಗುವ ತ್ಯಾಜ್ಯವನ್ನು ತೀವ್ರವಾಗಿ ಕಡಿಮೆ ಮಾಡುತ್ತವೆ. ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (BAMUL) ಇದನ್ನು ಎಲ್ಲ ಹಾಲು ಪ್ಯಾಕೇಜಿಂಗ್ ಕಾರ್ಯಾಚರಣೆಗಳಲ್ಲಿ ಶೀಘ್ರದಲ್ಲೇ ಜಾರಿಗೆ ತರುವ ಗುರಿ ಹೊಂದಿದೆ. ಹೊಸ ಪ್ಯಾಕೆಟ್‌ಗಳ ಬೆಲೆ ಸಾಮಾನ್ಯ ಪ್ಲಾಸ್ಟಿಕ್ ಪ್ಯಾಕೆಟ್‌ಗಳಿಗಿಂತ ದರದಲ್ಲಿ ಸುಮಾರು 5ರಷ್ಟು ಹೆಚ್ಚಿನದು, ಆದರೆ ಪರಿಸರ ಸ್ನೇಹಿ ಎನ್ನಲಾಗಿದೆ. ಬಮೂಲ್ ಮತ್ತು ಕೆಎಂಎಫ್ ಕರ್ನಾಟಕದ ಎಲ್ಲ ನಂದಿನಿ ಔಟ್‌ಲೆಟ್‌ಗಳಲ್ಲಿ ಈ ಪ್ಯಾಕೆಟ್‌ಗಳನ್ನು ಬಳಕೆ ಮಾಡಲು ಸಿದ್ಧವಾಗಿವೆ.












Click it and Unblock the Notifications