ಬೆಂಗಳೂರಿನಲ್ಲಿ ನಂದಿನಿ ನಕಲಿ ತುಪ್ಪ ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆ
ಬೆಂಗಳೂರು, ಜ. 28: ಕೆಎಂಎಫ್ ನಂದಿನಿ ತುಪ್ಪದ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿರುವ ಜಾಲ ಬೆಂಗಳೂರಿನಲ್ಲಿ ಪತ್ತೆಯಾಗಿದೆ.
ನಗರದಲ್ಲಿ ಕೆಎಂಎಫ್ ಹಾಗೂ ನಂದಿನಿ ಬ್ರಾಂಡ್ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿರುವ ಜಾಲವನ್ನು ಕೆಎಂಎಫ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮೈಸೂರಿನಲ್ಲಿ ಉತ್ಪಾದಿಸುತ್ತಿರುವ ನಕಲಿ ತುಪ್ಪವನ್ನು ಬೆಂಗಳೂರು ಹಾಗೂ ಸುತ್ತಮುತ್ತ ಮಾರಾಟ ಮಾಡುತ್ತಿರುವುದನ್ನು ಕೆಎಎಫ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
Koo Appರಾಜ್ಯದ ರೈತರ ಹಿತ ಕಾಯುತ್ತಿರುವ ಸರ್ಕಾರಿ ಸ್ವಾಮ್ಯದ ನಂದಿನಿ ಹಾಲಿನ ಉತ್ಪನ್ನಗಳ ಬ್ರ್ಯಾಂಡ್ಗೆ ಕಳಂಕ ತರುವ ಪ್ರಯತ್ನಗಳು ಮೇಲಿಂದ ಮೇಲೆ ನಡೆಯುತ್ತಿಲೇ ಇವೆ. ಬೆಂಗಳೂರಿನಲ್ಲಿ ನಂದಿನಿ ಬ್ರ್ಯಾಂಡ್ನ ನಕಲಿ ತುಪ್ಪ ಮಾರಾಟ ಜಾಲ ಪತ್ತೆಯಾಗಿರುವುದು ಆತಂಕಕಾರಿ ವಿಷಯ. ಈ ಮೊದಲು ಮೈಸೂರಿನಲ್ಲಿ ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಾಗಿದೆ. 1/3 - D K Shivakumar (@dkshivakumar_official) 28 Jan 2022
ನಂದಿನಿ ಬ್ರಾಂಡ್ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಕೆಎಂಎಫ್ ಅಧಿಕಾರಿಗಳು ಹನುಮಂತನಗರ, ಜಯನಗರ, ನೆಲಮಂಗಲ, ಮಾದವಾರ, ಮಾಕಳಿ, ಹೊಸಕೋಟೆಯ ದೇವನಗುಂದಿ ಮತ್ತಿತರ ಕಡೆ ದಾಳಿ ನಡೆಸಿ ನಕಲಿ ತುಪ್ಪವನ್ನು ವಶಪಡಿಸಿಕೊಂಡಿದ್ದಾರೆ. ಅಂಗಡಿಗಳಲ್ಲಿ ಸಿಕ್ಕಿದ ನಕಲಿ ತುಪ್ಪದ ಜಾಡು ಹಿಡಿದು ಗೋದಾಮುಗಳ ಮೇಲೂ ದಾಳಿ ಮಾಡಿದ್ದಾರೆ.

ನಂದಿನಿ ಒಂದು ಕೆ.ಜಿ. ಹಾಗೂ ಹದಿನೈದು ಕೆಜಿ ತೂಕದ ಟಿನ್ ಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೇ ಅನುಮಾನಸ್ಪದ ನಕಲಿ ತುಪ್ಪದ ಪಾಕೆಟ್‌ಗಳನ್ನು ಆಹಾರ ಮತ್ತು ಗುಣಮಟ್ಟ ಪರಿಶೀಲನಾ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಇದರ ಜತೆಗೆ ಕೆಎಂಎಫ್ ಗುಣಮಟ್ಟ ಪರಿಶೀಲನಾ ಪ್ರಯೋಗಾಲಯಕ್ಕೂ ರವಾನಿಸಲಾಗಿದೆ. ಈ ವೇಳೆ ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿರುವುದು ದೃಢಪಟ್ಟಿದ್ದು, ಕೆಎಂಎಫ್ ಮಾರ್ಕೆಟಿಂಗ್ ವಿಭಾಗದ ಅಪರ ನಿರ್ದೇಶಕ ಬಿ.ಪಿ. ಸುರೇಶ್ ದೂರು ನೀಡಿದ್ದಾರೆ.

ದೂರು ಹಿನ್ನೆಲೆಯಲ್ಲಿ ಬಸವನಗುಡಿ ಪೊಲೀಸರು ಕ್ರಿಮಿನಲ್ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತುಪ್ಪ ಸಗಟು ಮಾರಾಟ ಸಂಸ್ಥೆ ಮೇಲೆ ಕೇಸು ದಾಖಲಿಸಿದ್ದು, ಇದೀಗ ನಂದಿನಿ ನಕಲಿ ತಪ್ಪದ ಜಾಡು ಹಿಡಿದು ತನಿಖೆ ನಡೆಸುತ್ತಿದ್ದಾರೆ.

ಹಾಲಿನಲ್ಲೂ ಮೋಸ:
ಈ ಹಿಂದೆ ನಂದಿನಿ ಹಾಲಿನ ಹೆಸರಿನಲ್ಲಿ ನಕಲಿ ಹಾಲಿನ ಪ್ಯಾಕೆಟ್ ಗಳನ್ನು ಮಾರಾಟ ಮಾಡಲಾಗಿತ್ತು. ಕಲಾಸಿಪಾಳ್ಯದಲ್ಲಿ ನಕಲಿ ನಂದಿನಿ ಹಾಲು ಮಾರಾಟ ಜಾಲ ಸಿಕ್ಕಿಬಿದ್ದಿತ್ತು. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದ್ದರು. ಅತಿ ಕಡಿಮೆ ಬೆಲೆಗೆ ಗುಣಮಟ್ಟದ ಉತ್ಪನ್ನ ನೀಡುವ ಮೂಲಕ ತನ್ನದೇ ಛಾಪು ಮೂಡಿಸಿರುವ ಕೆಎಂಎಫ್ ಗೆ ನಕಲಿ ತುಪ್ಪದ ಬಿಸಿ ತಟ್ಟಿದೆ.












Click it and Unblock the Notifications