ನಾಲ್ವಡಿ ಕೃಷ್ಣರಾಜ ಒಡೆಯರ್ - ಸಿದ್ದರಾಮಯ್ಯ ಹೋಲಿಕೆ & ಕೊಡುಗೆ: ಯದುವೀರ್ ಒಡೆಯರ್ ಹೇಳಿದ್ದೇನು ?
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತ ಹೆಚ್ಚಿನ ಕೊಡುಗೆಯನ್ನು ಸಿದ್ದರಾಮಯ್ಯ ಅವರು ಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ರಾಜವಂಶಸ್ಥರು ಹಾಗೂ ಸಂಸದ ಯದುವೀರ್ ಒಡೆಯರ್ ಅವರು ತುಸು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಹ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ. ಅವರ ಕೊಡುಗೆಯನ್ನು ಮೈಸೂರು ಸಂಸ್ಥಾನ ಭಾಗದ ಜನ ಹಾಗೂ ಕನ್ನಡಿಗರು ಇಂದಿಗೂ ಸ್ಮರಿಸುತ್ತಾರೆ. ನಾಡನ್ನು ಕಟ್ಟುವಲ್ಲಿ ಹಾಗೂ ನಾಡಿನ ಅಭಿವೃದ್ಧಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶ್ರಮಿಸಿದ್ದಾರೆ. ಆದರೆ, ಯತೀಂದ್ರ ಅವರು ಮೈಸೂರಿನ ಭಾಗಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತಲೂ ಸಿದ್ದರಾಮಯ್ಯ ಅವರ ಕೊಡುಗೆ ಅಪಾರ ಎಂದು ಹೇಳಿರುವುದು ಅಥವಾ ಹೆಚ್ಚು ಎಂದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನು ವಿರೋಧ ಪಕ್ಷಗಳು ಸೇರಿದಂತೆ ನಾಡಿನ ಹಿರಿಯರು ಸಹ ಖಂಡಿಸಿದ್ದಾರೆ.

ಇದೀಗ ಈ ವಿಚಾರವಾಗಿ ಸಂಸದ ಯದುವೀರ್ ಒಡೆಯರ್ ಅವರು ಮಾತನಾಡಿದ್ದಾರೆ. ಪ್ರಜಾತಂತ್ರವಾಗಲಿ ಅಥವಾ ರಾಜತಂತ್ರವಾಗಲಿ ಎರಡರಲ್ಲೂ ಜನಸೇವೆಯ ಅವಕಾಶ ಸಿಕ್ಕಿರುತ್ತದೆˌ ಅದನ್ನು ಬದ್ಧತೆಯಿಂದˌ ಕಾಳಜಿಯಿಂದ ಕಾರ್ಯನಿರ್ವಹಿಸಿ ಸುಸ್ಥಿರ ಸಮಾಜವನ್ನು ನಿರ್ಮಿಸುವುದು ಅದರ ಧರ್ಮವಾಗಿರುತ್ತದೆ. ಅವರವರ ಕಾಲಘಟ್ಟದಲ್ಲಿ ಅಂದಿನ ಸಂದರ್ಭಕ್ಕೆ ತಕ್ಕಂತೆ ಮೈಸೂರು ರಾಜ್ಯವನ್ನು ಆಳಿದ ಮಹಾರಾಜರು ಅಭಿವೃದ್ದಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ.
ಈಗಿನ ಪ್ರಜಾತಂತ್ರದಲ್ಲಿ ಜವಾಬ್ದಾರಿಯುತ ಅಧಿಕಾರ ಸಿಕ್ಕಿರುವ ನಾಯಕರು ತಮ್ಮ ತಮ್ಮ ಕ್ಷೇತ್ರಗಳ ಜನರ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕೆ ಹೊರತು ನಮ್ಮ ಪೂರ್ವಜರು ನೀಡಿದ ಕೊಡುಗೆಗಳೊಂದಿಗೆ ಹೋಲಿಕೆ ಮಾಡಿಕೊಂಡು ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ.
ಇನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಹ ಈ ವಿಷಯವಾಗಿ ರಿಯಾಕ್ಟ್ ಮಾಡಿದ್ದಾರೆ. ಈ ಸರ್ಕಾರದಲ್ಲಿ ಅನಧಿಕೃತ ವರ್ಗಾವಣೆ ಖಾತೆ ಸಚಿವರಾಗಿ ಯತೀಂದ್ರ ಸಿದ್ದರಾಮಯ್ಯ ಅವರು ಇದ್ದಾರೆ. ಅವರ ಹೇಳಿಕೆಯನ್ನು ನಾನು ನೋಡಿದೆ. ರಾಜಕಾರಣಿಗಳು ಮಕ್ಕಳಿಗೆ ಆಸ್ತಿಯನ್ನು ಮಾಡಿಕೊಡಬಹುದು ತಲೆಯಲ್ಲಿ ಬುದ್ಧಿಯನ್ನು ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಬಹುದು. ಇವರ ವಿಚಾರದಲ್ಲಿ ಅದನ್ನೂ ಹೇಳಲು ಸಾಧ್ಯವಿಲ್ಲ. ಇದು ಯತೀಂದ್ರ ಅವರ ಮಾತು ಅವರ ಮಾತು ಮಾತ್ರವಲ್ಲ ಸಿದ್ದರಾಮಯ್ಯ ಅವರ ಅಂತರಾಳವೂ ಇದೇ ಆಗಿದೆ.
ಈ ಸಿದ್ದರಾಮಯ್ಯನವರು, ನಾನು ದೇವರಾಜು ಅರಸು ಅವರಿಗಿಂತ ದೊಡ್ಡವನು ಅನ್ನುತಿದ್ದರು, ಈಗ ನಾಲ್ವಡಿಯವರಿಗಿಂತ ದೊಡ್ಡ ಕೊಡುಗೆ ಕೊಟ್ಟವರು ಅಂತ ಯತೀಂದ್ರ ಹೇಳಿದ್ದಾರೆ. ನಾಡದೇವತೆ ಚಾಮುಂಡೇಶ್ವರಿಗಿಂತ ನಾನೇ ದೊಡ್ಡವನು ಎಂದು ಸಿದ್ದರಾಮಯ್ಯನವರು ಹೇಳಿಕೊಳ್ಳುವ ಕಾಲವೂ ದೂರವಿಲ್ಲ ಎಂದು ಪ್ರತಾಪ್ ಸಿಂಹ ಅವರು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಮಹರಾಜರ ಕುಟುಂಬದ ಬಗ್ಗೆ ಅಪಾರವಾದ ದ್ವೇಷ ಹಾಗೂ ಅಪಥ್ಯದ ಭಾವ ಇದೆ. ಯತೀಂದ್ರ ಅವರ ಹೇಳಿಕೆ ವಿಪರ್ಯಾಸದಿಂದ ಕೂಡಿದೆ. ಮುಂದಿನ ದಿನಗಳಲ್ಲಿ ಇವರು ನಾಡದೇವತೆಗಿಂತ ದೊಡ್ಡವರು ಎಂದು ಹೇಳಿಕೊಂಡರೂ ಅಚ್ಚರಿ ಇಲ್ಲ ಎಂದಿದ್ದಾರೆ.












Click it and Unblock the Notifications