Nandini vs Amul: ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ, ಮೆಗಾ ಡೈರಿಗಳ ಸ್ಥಾಪನೆ ಎಲ್ಲವೂ ಬಿಜೆಪಿ ಸಾಧನೆ; ಕಟೀಲ್
ಬೆಂಗಳೂರು, ಏಪ್ರಿಲ್. 10: ತಮ್ಮ ಆಡಳಿತಾವಧಿಯಲ್ಲಿ ಕೆಎಂಎಫ್ ಬೆಳವಣಿಗೆಯನ್ನು ಸಹಿಸಲಾರದೇ ವಿರೋಧ ಪಕ್ಷಗಳು ನಂದಿನಿಯನ್ನು ಅಮುಲ್ ಜತೆ ವಿಲೀನ ಮಾಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸುವಲ್ಲಿ ನಿರತವಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ವಿರುದ್ಧ ಆರೋಪ ಮಾಡಲು ವಿರೋಧ ಪಕ್ಷಗಳಿಗೆ ವಿಷಯಗಳೇ ಸಿಗುತ್ತಿಲ್ಲ. ರಾಜ್ಯದಲ್ಲಿ ಕಳೆದುಹೋಗುತ್ತಿರುವ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಂದಿನಿಯನ್ನು ಅಮುಲ್ ಜತೆ ವಿಲೀನ ಮಾಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸುವಲ್ಲಿ ನಿರತವಾಗಿವೆ.
— Nalinkumar Kateel (@nalinkateel) April 10, 2023
1/4 pic.twitter.com/2EToZHGHwp
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ನಳಿನ್ ಕುಮಾರ್ ಕಟೀಲ್, "ಬಿಜೆಪಿ ವಿರುದ್ಧ ಆರೋಪ ಮಾಡಲು ವಿರೋಧ ಪಕ್ಷಗಳಿಗೆ ವಿಷಯಗಳೇ ಸಿಗುತ್ತಿಲ್ಲ. ರಾಜ್ಯದಲ್ಲಿ ಕಳೆದುಹೋಗುತ್ತಿರುವ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಂದಿನಿಯನ್ನು ಅಮುಲ್ ಜತೆ ವಿಲೀನ ಮಾಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸುವಲ್ಲಿ ನಿರತವಾಗಿವೆ" ಎಂದು ಕಿಡಿಕಾರಿದ್ದಾರೆ.

"ನಂದಿನಿ ನಾಡಿನ ಹೆಮ್ಮೆಯ ಪ್ರತೀಕ. ಜತೆಗೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ, ಮೆಗಾ ಡೈರಿಗಳ ಸ್ಥಾಪನೆ ಎಲ್ಲವೂ ಬಿಜೆಪಿಯ ಸಾಧನೆ. ನಾಡಿನ ರೈತರ ಜೀವನಾಡಿಯನ್ನು ಹಾಲು ಉತ್ಪಾದನಾ ಕ್ಷೇತ್ರದಲ್ಲಿನ ದೇಶದ ಇತರೆ ಸಂಸ್ಥೆಗಳ ತಂತ್ರಜ್ಞಾನಗಳ ಸಹಕಾರದೊಂದಿಗೆ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತೇವೆಯೇ ಹೊರತು ವಿಲೀನದ ಪ್ರಶ್ನೆಯಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.
"ದೇಶದ ಎರಡನೇ ಅತಿ ದೊಡ್ಡ ಹಾಲು ಸಹಕಾರಿ ಸಂಸ್ಥೆ ನಮ್ಮ ಕೆಎಂಎಫ್. ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಡಿಪೋಗಳನ್ನು ಹೊಂದಿರುವ ಕೆಎಂಎಫ್ ಶೇ. 15ರಷ್ಟು ಮಾರಾಟ ಕರ್ನಾಟಕದ ಹೊರಗೆ ನಡೆಸುತ್ತದೆ. ಜತೆಗೆ ನಂದಿನಿಯನ್ನು ಸಿಂಗಾಪುರ, ಯುಎಇ ಮತ್ತು ಇತರ ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತದೆ" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
"ನಮ್ಮ ಆಡಳಿತಾವಧಿಯಲ್ಲಿ ಕೆಎಂಎಫ್ ಬೆಳವಣಿಗೆಯನ್ನು ಸಹಿಸಲಾರದೇ, ಅದನ್ನು ತಮ್ಮ ಕುಟುಂಬದ ಆಸ್ತಿಯೆಂಬಂತೆ ಮಾಡಿಕೊಂಡಿದ್ದವರಿಗೆ ಈ ಭಯ ಸಹಜವಾದದ್ದೇ. ನಾವು ಅಧಿಕಾರಕ್ಕೆ ಬಂದ ನಂತರ ಕೆಎಂಎಫ್ ವಹಿವಾಟು 10,000 ಕೋಟಿಗಳಷ್ಟು ಹೆಚ್ಚಾಗಿ 25,000 ಕೋಟಿಗಳಿಗೆ ಏರಿದೆ. ಇಷ್ಟೆಲ್ಲ ಸಾಧನೆ ಮಾಡಿರುವ ನಮ್ಮ ಕೆಎಂಎಫ್ ನ ವಿಲೀನದ ಪ್ರಶ್ನೆಯೇ ಇಲ್ಲ" ಎಂದು ಮತ್ತೊಮ್ಮೆ ಹೇಳಿದ್ದಾರೆ.

ಇನ್ನು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ವಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ. " ನಮ್ಮ ನಂದಿನಿ ಹಾಲಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದ್ದು, ಎಲ್ಲಾ ರಾಜ್ಯಗಳಲ್ಲಿಯೂ ಸಹ ದೊರೆಯುತ್ತಿದ್ದು, ಹೊರ ದೇಶಗಳಿಗೂ ರಫ್ತಾಗುತ್ತಿದೆ. 2018ರಲ್ಲಿ ಪ್ರತಿದಿನ 84 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸಲಾಗುತ್ತಿತ್ತು, ಪ್ರಸ್ತುತ 94 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸಲಾಗುತ್ತಿದೆ" ಎಂದಿದ್ದಾರೆ.
"ಈ ಅಂಕಿಅಂಶಗಳನ್ನು ಗಮನಿಸಿದರೇ ಸಾಕು, ನಂದಿನಿಯ ಬ್ರಾಂಡ್ ಮೌಲ್ಯ ಎಷ್ಟರ ಮಟ್ಟಿಗೆ ಹೆಚ್ಚಿದೆ ಎಂಬುದು ತಿಳಿಯುತ್ತದೆ. ಆದರೇ ಕರ್ನಾಟಕ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಪಕ್ಷಗಳು, ನಂದಿನಿ ಬಗ್ಗೆ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹರಿಬಿಟ್ಟು, ಜನರಲ್ಲಿ ಗೊಂದಲ ಉಂಟು ಮಾಡುವ ಕೀಳು ರಾಜಕೀಯವನ್ನು ಮಾಡುತ್ತಿವೆ. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ಒಟ್ಟಾರೆ ಬಿಜೆಪಿಯು ಗುಜರಾತಿನ ಅಮುಲ್ ರಾಜ್ಯಕ್ಕೆ ಕಾಲಿಡುವುದಕ್ಕೆ ಆಹ್ವಾನ ನೀಡುತ್ತಿದ್ದರೇ, ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ನಾಡಿನ ಜನರು ಕೂಡ ನಂದಿನಿಯನ್ನು ಮುಗಿಸಲು ಕರ್ಕಾರ ಮಾಡುತ್ತಿರುವ ಕುತಂತ್ರ ಎಂದು ಆರೋಪಿಸಿದ್ದಾರೆ. ಕನ್ನಡಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿವೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಎಚ್.ಡಿ ಕುಮಾರಸ್ವಾಮಿ ನಿರಂತರವಾಗಿ ಈ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ.












Click it and Unblock the Notifications