ನವೆಂಬರ್ 1ಕ್ಕೆ ವಿಧಾನಸೌಧದ ಮುಂದೆ ಬೃಹತ್ 'ನಾಡದೇವಿ ಭುವನೇಶ್ವರಿ' ಕಂಚಿನ ಪ್ರತಿಮೆ ಅನಾವರಣ
ಬೆಂಗಳೂರು, ಆಗಸ್ಟ್ 22: ರಾಜ್ಯದ ಶಕ್ತಿ ಸೌಧ ವಿಧಾನಸೌಧದ ಮುಂದೆ ಈಗಾಗಲೇ ನೆಹರು, ಬಸವಣ್ಣ, ಗಾಂಧೀಜಿ ಪ್ರತಿಮೆಗಳು ಇವೆ. ಮುಂದಿನ ನವೆಂಬರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ ಜರುಗಲಿದೆ. ಈ ಹೊತ್ತಿಗೆ ಇದೇ ವಿಧಾನಸೌಧದ ಮುಂದೆ ನಾಡದೇವಿ ಭುವನೇಶ್ವರಿ ಪ್ರತಿಮೆಯನ್ನು ಅನಾವರಣಗೊಳಿಸಲು ಸಕಲ ಸಿದ್ಧತೆ ನಡೆದಿದೆ. ಈ ಕುರಿತು ಸಚಿವ ಶಿವರಾಜ್ ತಂಗಡಗಿಯವರು ಅಪ್ಡೇಟ್ ಮಾಹಿತಿ ನೀಡಿದ್ದಾರೆ.
ಹೌದು, ಬೆಂಗಳೂರಿನ ಹೊರ ವಲಯದ ಕಾರ್ಖಾನೆಯೊಂದರಲ್ಲಿ ನಾಡದೇವಿ ಭುವನೇಶ್ವರಿಯ ಕಂಚಿನ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ. ನಿರ್ಮಾಣ ಕೆಲಸ ಭರದಿಂದ ಸಾಗಿದ್ದು, ಸಿಮೆಂಟ್ ನಲ್ಲಿ ಪ್ರತಿಮೆ ಸ್ಥಾಪನೆ ಆಗಿದೆ. ಈ ಪ್ರತಿಮೆಯ ಸ್ಥಳಕ್ಕೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ವಿಧಾನಸೌಧದ ಪಶ್ಚಿಮದ್ವಾರದಲ್ಲಿ ನವೆಂಬರ್ 1ರಂದು ಈ ನಾಡದೇವಿಯ ಕಂಚಿನ ಪ್ರತಿಮೆಯನ್ನು ಅನಾವರಣ ಗೊಳಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಾಗಲಗುಂಟೆಯಲ್ಲಿರುವ ಶಿಲ್ಪಿ ಕೆ. ಶ್ರೀಧರ್ಮೂರ್ತಿ ಅವರ ಫ್ಯಾಕ್ಟರಿಗೆ ಸಚಿವರು ಭೇಟಿ ನಿರ್ಮಾಣ ಕೆಲಸದ ಕುರಿತು ಮಾಹಿತಿ ಪಡೆದರು.
45 ದಿನದಲ್ಲಿ ಪ್ರತಿಮೆ ಸಿದ್ಧ
ಮೊದಲು ಸಿಮೆಂಟಿನಲ್ಲಿ ಪ್ರತಿಮೆ ನಿರ್ಮಿಸಿ ನಂತರ ಫೈಬರ್ ಗ್ಲಾಸ್ ನಲ್ಲಿ ಅಚ್ಚು ತೆಗೆದು ಕಂಚಿನಲ್ಲಿ ಎರಕ ಹಾಕಲಾಗುತ್ತದೆ. ಈಗಾಗಲೇ ಸಿಮೆಂಟ್ ನಲ್ಲಿ ಪ್ರತಿಮೆ ನಿರ್ಮಿಸಲಾಗಿದೆ. ಅಂದಾಜು 45 ದಿನಗಳಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಸಚಿವರಿಗೆ ಶಿಲ್ಪಿ ಶ್ರೀಧರ್ ಮೂರ್ತಿ ತಿಳಿಸಿದರು.
ಪ್ರತಿಮೆಯ ವಿಶೇಷತೆಗಳು ಏನು?
ನಾಡದೇವಿ ಪ್ರತಿಮೆಯ ಹಿಂದೆ ಕರ್ನಾಟಕ ನಕ್ಷೆ ಹಾಗೂ ಉಬ್ಬು ಶಿಲ್ಪ ಇರಲಿದೆ. ಮುಂಭಾಗದಲ್ಲಿ ಭೌಗೋಳಿಕ ನಕ್ಷೆ ಇದ್ದರೆ ಹಿಂಬದಿಯಲ್ಲಿ ನಾಡಗೀತೆಯನ್ನು ಕೆತ್ತಲಾಗಿದೆ. ಕರ್ನಾಟಕದ ಪ್ರಸಿದ್ಧ ಶಿಲ್ಪಕಲಾ ಶೈಲಿಗಳಾದ ಹೊಯ್ಸಳ ಚಾಲುಕ್ಯ ಕದಂಬ ಹಾಗೂ ಆಧುನಿಕ ನೈಜ ಶಿಲ್ಪಗಳ ಶೈಲಿಗಳನ್ನು ಅಳವಡಿಸಿ ಪ್ರತಿಮೆಯನ್ನು ನಿರ್ಮಿಸಲಾಗುತ್ತದೆ. ಇದರಲ್ಲಿ ರಾಜಲಾಂಛನಗಳಾದ ಹೊಯ್ಸಳ ಲಾಂಛನ, ವೈ ಜಯಂತಿ ಮಾಲೆ ಕಂಠಿಹಾರ, ಗಂಡ ಭೇರುಂಡ ಇರಲಿವೆ.

'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ'
ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ 'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಎಂಬ ಶೀರ್ಷಿಕೆಡಿ ಹಲವು ಕಾರ್ಯಕ್ರಮ ಗಳನ್ನು ಆಯೋಜನೆ ಮಾಡಲಾಗುತ್ತಿದೆ. ಅದರಂತೆ ವಿಕಾಸಸೌಧದ ಆವರಣದಲ್ಲಿ ಕನ್ನಡಾಂಬೆಯ ಪ್ರತಿಮೆಯನ್ನು ನಿರ್ಮಿಸಲು ಸಚಿವ ಶಿವರಾಜ ತಂಗಡಗಿ ಅವರು ಪಣತೊಟ್ಟಿದರು. ಕಳೆದ ಕೆಲವು ತಿಂಗಳ ಹಿಂದೆ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.
ನವೆಂಬರ್ 1ಕ್ಕೆ ಪ್ರತಿಮೆ ಅನಾವರಣ
ಇನ್ನು ಮೂರ್ತಿ ಕೆಲಸ ಪರಿಶೀಲನೆ ಬಳಿಕ ಸಚಿವ ಶಿವರಾಜ್ ತಂಗಡಗಿ ಅವರು ಮಾತನಾಡಿ, ಪ್ರತಿಮೆ ನಿರ್ಮಾಣ ಯೋಜನೆಗೆ ಮುಖ್ಯಮಂತ್ರಿಗಳಿಂದ ಚಾಲನೆ ನೀಡಲಾಗಿತ್ತು. ಕಳೆದ ಮೂರು ನಾಲ್ಕು ತಿಂಗಳಿಂದ ಶಿಲ್ಪಿ ಕೆ.ಶ್ರೀಧರ್ ಮೂರ್ತಿಯವರು ಕಂಚಿನ ಮೂರ್ತಿ ಪ್ರತಿಮೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಾಡದೇವಿ ಭುವನೇಶ್ವರಿ ತಾಯಿಯ ಕಂಚಿನ ಪ್ರತಿಮೆ ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.1ರಂದು ವಿಧಾನಸೌಧದ ಆವರಣದಲ್ಲಿ ಅನಾವರಣಗೊಳಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಮೆ ತಯಾರಿಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ ಎಂದು ಮಾಹಿತಿ ನೀಡಿದರು.












Click it and Unblock the Notifications