ಬಿಜೆಪಿ ಶಾಸಕರ ಮೇಲೆ ಯಾಕೆ ಎಫ್‍ಐಆರ್ ದಾಖಲಿಸಿದ್ದೀರಿ?: ಎನ್.ರವಿಕುಮಾರ್
ಬೆಂಗಳೂರು, ಮೇ 25: ಕಾಂಗ್ರೆಸ್ ಸರ್ಕಾರ ರಚನೆಯ ಬಳಿಕ ನಮ್ಮ ಶಾಸಕರ ಮೇಲೆ ಯಾಕೆ ಎಫ್‍ಐಆರ್ ದಾಖಲಿಸಿದ್ದೀರಿ? ಎಂಥ ಸರಕಾರ ನಿಮ್ಮದು ಎಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಆಕ್ರೋಶ ಹೊರಹಾಕಿದರು.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶಾಸಕ ಹರೀಶ್ ಪೂಂಜ, ಮಾಜಿ ಸಚಿವ ಡಾ. ಅಶ್ವತ್ಥನಾರಾಯಣರ ವಿರುದ್ಧ ಎಫ್‍ಐಆರ್ ಮಾಡಿದ್ದನ್ನು ಆಕ್ಷೇಪಿಸಿದರು. ಯಾವ ಕಾರಣಕ್ಕೆ ಎಫ್‍ಐಆರ್ ಮಾಡಿದ್ದೀರಿ ಎಂದು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ನಿಮ್ಮದು ಪಿಎಫ್‍ಐ ಕಾರ್ಯಕರ್ತರನ್ನು ರಕ್ಷಿಸುವ ಸರಕಾರವೇ? ಕ್ಯಾಂಪಸ್ ಫ್ರಂಟ್, ನಕ್ಸಲೀಯರನ್ನು ರಕ್ಷಿಸುವ ಸರಕಾರವೇ? ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಹರೀಶ್ ಪೂಂಜ, ಡಾ. ಅಶ್ವತ್ಥನಾರಾಯಣರವರು ಟಿಪ್ಪು ಸುಲ್ತಾನ್ ಜಯಂತಿ ಮಾಡಬಾರದು ಎಂದು ಹೇಳಿದ್ದು ತಪ್ಪೇ? ನಮ್ಮ ಹಿಂದೂ ಧರ್ಮವನ್ನು ನಾಶ ಮಾಡಿದ, ಸಾವಿರಾರು ದೇವಾಲಯ ಧ್ವಂಸ ಮಾಡಿದ, ಲಕ್ಷಾಂತರ ಜನರನ್ನು ಮತಾಂತರ ಮಾಡಿದ ಟಿಪ್ಪು ಸುಲ್ತಾನ್ ಧೋರಣೆಯನ್ನು ಅವರು ಖಂಡಿಸಿದ್ದು ತಪ್ಪೇ. ಕ್ಯಾಂಪಸ್ ಫ್ರಂಟ್, ಪಿಎಫ್‍ಐ, ಎಸ್‍ಡಿಪಿಐ ಕಾರ್ಯಕರ್ತರ ಮೇಲಿದ್ದ ಕೇಸುಗಳನ್ನು ತೆಗೆದುಹಾಕಿದ್ದೀರಿ. ನಮ್ಮ ಶಾಸಕರ ಮೇಲೆ ಎಫ್‍ಐಆರ್ ಮಾಡಿದ್ದೀರಿ, ಮಂಗಳೂರು ಮತ್ತಿತರ ಕಡೆ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಎಫ್‍ಐಆರ್ ಮಾಡುತ್ತಿಲ್ಲ ಎಂದು ಟೀಕಿಸಿದರು.

ಆರ್ ಎಸ್ ಎಸ್ ಸಂಘಟನೆಯನ್ನು ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಬ್ಯಾನ್ ಮಾಡಿದ್ದರು. ಪರಿಣಾಮ ಏನಾಗಿದೆ ಎಂದು ಪ್ರಿಯಾಂಕ್ ಖರ್ಗೆಯವರು ತಮ್ಮ ಹಿರಿಯರಿಂದ ತಿಳಿದುಕೊಳ್ಳಲಿ. ಆಮೇಲೆ ಬ್ಯಾನ್ ಮಾಡಲಿ ಎಂದು ನುಡಿದರು. ರಾಜ್ಯದಲ್ಲಿ ಕೇಸರೀಕರಣ ಏನಾಗಿದೆ ಎಂದು ಮಾಹಿತಿ ಕೊಡಿ ಎಂದು ಆಗ್ರಹಿಸಿದರು.
ಬಜರಂಗದಳ, ಆರೆಸ್ಸೆಸ್ ರದ್ದು ಮಾಡುವ ಕುರಿತು ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಕುರಿತು ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರಿನ್ನೂ ಮಗು ಇರಬೇಕು. ಆರೆಸ್ಸೆಸ್ ಏನು ಮಾಡುತ್ತಿದೆ ಎಂದು ಅಧ್ಯಯನ ಮಾಡಬೇಕು; ಆರೆಸ್ಸೆಸ್ ಇರುವ ಕಾರಣ ಪ್ರಪಂಚದಲ್ಲಿ ಭಾರತದ ಗೌರವ ಹೆಚ್ಚಾಗಿದೆ. ಇಡೀ ಪ್ರಪಂಚಕ್ಕೆ ಆರೆಸ್ಸೆಸ್ ಕುರಿತು ಗೌರವ ಇದೆ. ನೀವು ಕೂಪ ಮಂಡೂಕರಾಗಿ ಆರೆಸ್ಸೆಸ್ ಕುರಿತು ಅಧ್ಯಯನ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.
ಆರ್ ಎಸ್ ಎಸ್ ಧರ್ಮ ರಕ್ಷಣೆ ಮಾಡುತ್ತಿದೆ. ಬಡವರು, ಕಷ್ಟದಲ್ಲಿ ಇರುವವರ ಸೇವೆ ಮಾಡುತ್ತಿದೆ. ನೀವು ಪಿಎಫ್‍ಐ, ಕ್ಯಾಂಪಸ್ ಫ್ರಂಟ್, ಭಯೋತ್ಪಾದಕ ಸಂಘಟನೆಯನ್ನು ಬ್ಯಾನ್ ಮಾಡುವುದಿಲ್ಲ. ಧರ್ಮ ರಕ್ಷಿಸುವ ಬಜರಂಗದಳವನ್ನು ನಿಷೇಧಿಸಲು ಮುಂದಾಗಿದ್ದೀರಲ್ಲ ಎಂದು ಪ್ರಶ್ನಿಸಿದರು.












Click it and Unblock the Notifications