Mysuru Dasara 2023: ಮೈಸೂರು ದಸರಾ.. ಎಷ್ಟೊಂದು ಸುಂದರ.. ಚೆಲ್ಲಿದೆ ನಗೆಯ ಪನ್ನೀರ!
ಮೈಸೂರು: ಇಡೀ ಜಗತ್ತೇ ಕಾಯುತ್ತಿದ್ದ ಮೈಸೂರು ದಸರಾ ಮತ್ತೊಮ್ಮೆ ವಿಜೃಂಭಣೆಯಿಂದ ನೆರವೇರಿದೆ. ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಹತ್ತಾರು ಲಕ್ಷ ಜನ ದಸರಾ ಹಬ್ಬದ ಸಂಭ್ರಮ ಕಣ್ತುಂಬಿಕೊಂಡಿದ್ದಾರೆ. ಹಾಗಾದರೆ ಹೇಗಿತ್ತು ಗೊತ್ತಾ ನಮ್ಮ ಮೈಸೂರಿನ ದಸರಾ ಅಬ್ಬರ? ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.
ಮಂಗಳವಾರ ರಾಜಮಾರ್ಗದಲ್ಲಿ ಎತ್ತ ನೋಡಿದರತ್ತ ಜನಸ್ತೋಮ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮಂಗಳವಾರ ಸಂಜೆ ಗೋಧೂಳಿ ಸಮಯದಲ್ಲಿ ವಿಜೃಂಭಣೆಯಿಂದ ನೆರವೇರಿತು. ನಿಗದಿತ ಸಮಯಕ್ಕಿಂತ ಸುಮಾರು 9 ನಿಮಿಷ ತಡವಾಗಿ ಅಂದ್ರೆ ಸಂಜೆ 5.09ಕ್ಕೆ ಸಿಎಂ ಸಿದ್ದರಾಮಯ್ಯ ಅವರು ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ನೆರವೇರಿಸಿ ಜಂಬೂಸವಾರಿಗೂ ಚಾಲನೆ ನೀಡಿದರು.

ಜಂಬೂಸವಾರಿ ಆರಂಭಕ್ಕೂ ಮುನ್ನ...
ಡಿಸಿಎಂ ಶಿವಕುಮಾರ್, ಮೇಯರ್ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಲೆ ಸಾಥ್ ನೀಡಿದರು. ನಂತರ ಅರಮನೆ ಆವರಣದಿಂದ ಬನ್ನಿಮಂಟದವರೆಗೆ 5 ಕಿಲೋ ಮೀಟರ್ ಉದ್ದದ ರಾಜಮಾರ್ಗದಲ್ಲಿ ಸಮಾವೇಶಗೊಂಡಿದ್ದ ಲಕ್ಷಾಂತರ ಜನ ಜಂಬೂಸವಾರಿ ವೀಕ್ಷಿಸಿದ್ರು. ಜಂಬೂಸವಾರಿ ಮುನ್ನ ಸಿಎಂ ಸಿದ್ದರಾಮಯ್ಯ ಅರಮನೆಯ, ಬಲರಾಮ ದ್ವಾರದಲ್ಲಿ ಮಧ್ಯಾಹ್ನ 1.46ಕ್ಕೆ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು.
ಮಧ್ಯಾಹ್ನ 2.31ಕ್ಕೆ ಅರಮನೆ ಆವರಣದಿಂದ ನಿಶಾನೆ ಆನೆ ನೇತೃತ್ವದಲ್ಲಿ ಸ್ತಬ್ಧಚಿತ್ರ ಕಲಾತಂಡ ಮೆರವಣಿಗೆ ಆರಂಭವಾಯಿತು. ಬೆಳಗ್ಗೆಯಿಂದ ಸ್ಥಳೀಯರು ರಸ್ತೆ ಇಕ್ಕೆಲಗಳಲ್ಲಿ ಜಾಗ ಹಿಡಿದು ಕುಳಿತಿದ್ದರು. ಸಾವಿರಾರು ಮಂದಿ ಮರ ಏರಿದ್ದರೆ, ಇನ್ನೂ ಹಲವರು ಜೀವದ ಹಂಗು ತೊರೆದು ಶಿಥಿಲವಾವಸ್ಥೆಯಲ್ಲಿ ಇರುವ ಪಾರಂಪರಿಕ ಕಟ್ಟಡಗಳನ್ನ ಹತ್ತಿದ್ದರು. ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯದಲ್ಲಿ ಅಂಬಾರಿ ಹೊತ್ತು ಬರುತ್ತಿದ್ದಂತೆ 'ಚಾಮುಂಡೇಶ್ವರಿಗೆ ಉಘೇ ಉಘೇ' ಎನ್ನುತ್ತ ನಾಡದೇವತೆಯನ್ನು ಕಣ್ತುಂಬಿಕೊಂಡು ಪುನೀತರಾದರು ಭಕ್ತರು.
ಇನ್ನು ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಿಸಲು ಕುಳಿತಿದ್ದ ಜನ ಬಾಟಲಿ ತೂರಾಟ ನಡೆಸಿದರು. ಸ್ತಬ್ಧಚಿತ್ರ & ಕಲಾತಂಡಗಳು ಮೆರವಣಿಗೆ ನೋಡಲು ಮತ್ತೆ ಫೋಟೋ ತೆಗೆಯಲು ಮುಂದಿನ ಸಾಲಿನಲ್ಲಿ ಕುಳಿತಿದ್ದ ಕೆಲವರು ಪದೇ ಪದೆ ಮೇಲೆ ಏಳುತ್ತಿದ್ದರು. ಇದರಿಂದ ಹಿಂದೆ ಕೂತರಿಗೆ ಏನೂ ಕಾಣುತ್ತಿರಲಿಲ್ಲ. ಹೀಗಾಗಿ ಬೇಸರಗೊಂಡ ಹಿಂದೆ ಕೂತವರು, ನಮಗೆ ಏನೂ ಕಾಣಿಸುತ್ತಿಲ್ಲ ಕುಳಿತುಕೊಳ್ಳಿ ಎಂದು ಖಾಲಿ ಬಾಟಲ್, ಜ್ಯೂಸ್ ಡಬ್ಬವನ್ನು ಎಸೆಯುತ್ತಿದ್ದರು. ಪೊಲೀಸರು ನಿಯಂತ್ರಿಸಲು ಯತ್ನಿಸಿದರೂ ಗಲಾಟೆ ನಿಲ್ಲಲೇ ಇಲ್ಲ.

ಬಿಸಿಲಿಗೂ ಜಗ್ಗಲಿಲ್ಲ ಜನ!
ಅರಮನೆ ಒಳಗೆ ಜಂಬೂಸವಾರಿ ವೀಕ್ಷಿಸಲು ಆಸನ ವ್ಯವಸ್ಥೆ ಮಾಡಲಾಗಿತ್ತು. ಪಾಸ್ ಇದ್ದವ್ರು ಬೆಳಗ್ಗೆ 11 ಗಂಟೆಯಿಂದ ಅರಮನೆ ಒಳಗೆ ಬರಲು ಆರಂಭಿಸಿದರು. ಬಿಸಿಲಿಗೆ ಜಗ್ಗದ ಜನ ಸಂಜೆ 5 ಗಂಟೆವರೆಗೆ ಒಂದೇ ಕಡೆ ಕುಳಿತಿದ್ದರು. ಹೊರಗಡೆ ಸಾಕಷ್ಟು ಮಂದಿ ಕೊಡೆ ತೆರೆದುಕೊಂಡು ಕುಳಿತಿದ್ದರು. ಇನ್ನೂ ಕೆಲವರು ಟೋಪಿ, ಕರ್ಚಿಫ್, ಟವಲ್ ಮೊರೆ ಹೋಗಿದ್ದರು. ನೀರನ್ನ ಮಜ್ಜಿಗೆಯನ್ನ ಹೆಚ್ಚಾಗಿ ಸೇವಿಸಿ ಬಿಸಿಲ ಧಗೆಯಿಂದ ರಕ್ಷಿಸಿಕೊಳ್ಳಲು ಜನ ಪ್ರಯತ್ನಿಸುತ್ತಿದ್ದರು.
ದಿಢೀರ್ ಬೆಚ್ಚಿದ ಕುದುರೆಗಳು
ಮೆರವಣಿಗೆಯಲ್ಲಿ ಹೆಜ್ಜೆ ಹಾಕುವಾಗ ಕಲಾತಂಡದ ತಮಟೆ, ನಗಾರಿ ಶಬ್ದಕ್ಕೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಕುದುರೆಗಳು ಬೆಚ್ಚಿದವು. ದೇವರಾಜ ಮಾರುಕಟ್ಟೆ ಬಳಿ ಬರುತ್ತಿದಂತೆಯೇ ಕಲಾ ತಂಡಗಳು ತಮಟೆ ಶಬ್ದವನ್ನು ಜಾಸ್ತಿ ಮಾಡಿದವು. ಇದಕ್ಕೆ ಕುದುರೆಗಳು ಕೆಲಕಾಲ ಬೆಚ್ಚಿ ಅತ್ತಿತ್ತ ಓಡಾಡಿದವು. ಬಳಿಕ ಅವುಗಳನ್ನು ಸವಾರರು ಸಮಾಧಾನಪಡಿಸಿದರು.

ಜಂಬೂ ಸವಾರಿ ಮಾರ್ಗದಲ್ಲಿ ಪಾಲಿಕೆಯಿಂದ ಸ್ವಚ್ಛತೆಗೆ ಮೊದಲ ಆದ್ಯತೆಯನ್ನ ನೀಡ್ಲಾಗಿತ್ತು. ಮಾರ್ಗ ಸ್ವಚ್ಛತೆಗೆ 500 ಹೆಚ್ಚು ಪೌರಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಪೌರಕಾರ್ಮಿಕರು ಆನೆ ಲದ್ದಿ, ತ್ಯಾಜ್ಯ ತಕ್ಷಣ ತೆರವುಗೊಳಿಸುವ ಮೂಲಕ ಸ್ವಚ್ಛತೆ ಕಾಪಾಡಿದರು. ಕಸ ತುಂಬಲು 20 ಆಟೋ, 1 ಲಾರಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಹೆಜ್ಜೆ ಹೆಜ್ಜೆಗೂ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕವಾಯತು ಮೈದಾನದಲ್ಲಿ 100 ಪೌರ ಕಾರ್ಮಿಕರು ಇದೀಗ ಕಾರ್ಯ ನಿರ್ವಹಿಸುತ್ತಿದ್ದಾರೆ.












Click it and Unblock the Notifications