ವಿದ್ಯಾರ್ಥಿಗಳಿಂದ 16 ಕೇಂದ್ರಗಳಲ್ಲಿ ಮೈಸೂರು ದಸರಾ ಮಾಹಿತಿ
ಮೈಸೂರು
ಸೆ.27, ದಸರಾ ಕಾರ್ಯಕ್ರಮ, ಮೈಸೂರು ಮತ್ತು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ನೀಡಲು 16 ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೈಸೂರಿನ ಪ್ರವಾಸೋದ್ಯಮ ಕಾಲೇಜಿನ ವಿದ್ಯಾರ್ಥಿಗಳು ಪ್ರವಾಸಿಗರಿಗೆ ಉಚಿತ ಮಾಹಿತಿ ನೀಡಲಿದ್ದಾರೆ. id="toptextpromo"> id='are-slot-1' class='oiad oi-axt oiadv'>ಈ
ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ದಸರಾ ಪ್ರವಾಸೋದ್ಯಮ ಉಪಸಮಿತಿ ಅಧ್ಯಕ್ಷ ವೈಎನ್ ಶಂಕರೇಗೌಡ ಅವರು 'ಈ ಮಾಹಿತಿ ಕೇಂದ್ರಗಳಲ್ಲಿ ನಿರ್ವಹಣೆಗಾಗಿ ಪ್ರವಾಸೋದ್ಯಮ ಕೋರ್ಸ್ ಓದುತ್ತಿರುವ ಕಾಲೇಜಿನ ವಿದ್ಯಾರ್ಥಿಗಳನ್ನು ಪ್ರವಾಸೋದ್ಯಮ ಸದಸ್ಯರಾಗಿ ನಿಯೋಜಿಸಲಾಗುತ್ತದೆ. ಇವರು ಮಾಹಿತಿ ಕೇಂದ್ರದಲ್ಲಿ ಪ್ರವಾಸಿಗರಿಗೆ ಮಾಹಿತಿ ನೀಡುವುದರ ಜತೆಗೆ ಪ್ರವಾಸಿ ಮಾಹಿತಿ ಸ್ಥಳಗಳ ಕೈಪಿಡಿ, ದಸರಾ ಕಾರ್ಯಕ್ರಮದ ಪಟ್ಟಿಯನ್ನು ಉಚಿತವಾಗಿ ಪ್ರವಾಸಿಗರಿಗೆ ನೀಡಲಿದ್ದಾರೆ' ಎಂದು ತಿಳಿಸಿದ್ದಾರೆ.id='are-slot-2' class='oiad oi-axt oiadv'>

16 ಮಾಹಿತಿ ಕೇಂದ್ರಗಳು ಎಲ್ಲೆಲ್ಲಿ?:
ಸಂತ ಫಿಲೋಮಿನಾ ಚರ್ಚ್, ಚಾಮರಾಜೇಂದ್ರ ಮೃಗಾಲಯ, ಅಂಬಾ ವಿಲಾಸ ಅರಮನೆ ವರಹಾ ಗೇಟ್, ಬಲರಾಮ ದ್ವಾರ, ಗ್ರಾಮಾಂತರ ಬಸ್ ನಿಲ್ದಾಣ, ಚಾಮುಂಡಿ ಬೆಟ್ಟ, ವಿಮಾನ ನಿಲ್ದಾಣ, ರೈಲು ನಿಲ್ದಾಣ ಒಳಾವರಣ ಮತ್ತು ಹೊರಾವರಣ, ದಸರಾ ವಸ್ತು ಪ್ರದರ್ಶನ, ಸೋಮನಾಥಪುರ, ಶ್ರೀರಂಗಪಟ್ಟಣ, ನಂಜನಗೂಡು, ತಲಕಾಡು, ಹುಣಸೂರು ಮತ್ತು ಟಿ ನರಸೀಪುರದಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ.

ವಿದೇಶಿಯರಿಗೆ ವಿದೇಶಿ ವಿದ್ಯಾರ್ಥಿಗಳಿಂದಲೇ ಮಾಹಿತಿ:
ಮೈಸೂರಿನಲ್ಲಿ ಓದುತ್ತಿರುವ ವಿದೇಶಿ ವಿದ್ಯಾರ್ಥಿಗಳು ವಿದೇಶಿ ಪ್ರವಾಸಿಗಳಿಗೆ ಮಾಹಿತಿ ನೀಡಲಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ನಿಯಂತ್ರಣ ಕೊಠಡಿಗೆ ಬರುವ ವಿದೇಶಿ ಕರೆಗಳಿಗೆ ಮಾಹಿತಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ವಿದೇಶಿ ವಿದ್ಯಾರ್ಥಿಗಳು ಉತ್ತರಿಸಲಿದ್ದಾರೆ. ಈ ವಿದ್ಯಾರ್ಥಿಗಳು ವಿದೇಶಿಯರಿಗೆ ಅವರವರದೇ ಭಾಷೆಯಲ್ಲಿ ಮೈಸೂರು ಮತ್ತು ದಸರಾ ಬಗ್ಗೆ ಮಾಹಿತಿ ನೀಡಲಿದ್ದಾರೆ.

20 ಸಾರೋಟು ಮತ್ತು ಟಾಂಗಾ ರಸ್ತೆಗೆ:
ಪಾರಂಪರಿಕ ದಸರಾ ಟಾಂಗಾ ಪ್ರೋತ್ಸಾಹಿಸುವ ದೃಷ್ಟಿಯಿಂದ ಹಾಗೂ ಪ್ರವಾಸಿಗರಿಗೆ ಇದರ ಪ್ರಯೋಜನ ದೊರೆಯುವಂತೆ ಮಾಡಲು 20 ಸಾರೋಟು ಮತ್ತು ಟಾಂಗಾಗಳನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ಸಮವಸ್ತ್ರ, ಮೈಸೂರು ಪೇಟ ನೀಡಲಾಗುತ್ತದೆ. ವಿದ್ಯಾರ್ಥಿಗಳು ಹಾಗೂ ಟಾಂಗಾದವರಿಗೆ ತಲಾ 1,000 ಗೌರವ ಧನ ನೀಡಲಾಗುತ್ತದೆ.

ಸಚಿವ ಆರ್ ವಿ ದೇಶಪಾಂಡೆ ಚಾಲನೆ
ಸಮಿತಿಯ ಕಾರ್ಯಕ್ರಮಗಳಿಗೆ ಅ. 5ರ ಮಧ್ಯಾಹ್ನ 3 ಕ್ಕೆ ಅರಮನೆ ಆವರಣದಲ್ಲಿ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ಆರ್ ವಿ ದೇಶಪಾಂಡೆ ಚಾಲನೆ ನೀಡುವರು. ಸಮಿತಿಗೆ 2 ಲಕ್ಷ ಅನುದಾನ ಬಂದಿದ್ದು, ಕರಪತ್ರ, ಮಾಹಿತಿ ಕೇಂದ್ರ ಇನ್ನಿತರ ಸೌಲಭ್ಯಗಳಿಗೆ ಪ್ರಾಯೋಜಕತ್ವ ಪಡೆಯಲಾಗಿದೆ ಎಂದು ವೈಎನ್ ಶಂಕರೇಗೌಡ ತಿಳಿಸಿದ್ದಾರೆ.

ವಿಮಾನದಲ್ಲಿ ಪೈಲೆಟ್ ಜತೆ 'ಜಾಲಿ ರೈಡ್'
ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿಗೆ ಆಗಮಿಸುವ ಪ್ರವಾಸಿಗರಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ದಸರಾ ಕಾರ್ಯಕ್ರಮಗಳನ್ನು ವೀಕ್ಷಿಸುವ ಜತೆಗೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಪುಟ್ಟ ವಿಮಾನದಿಂದ ನಗರ ಪ್ರದಕ್ಷಿಣೆ ಹಾಕಿ 'ಜಾಲಿ ರೈಡ್' ಸಹ ಮಾಡಬಹುದು.
ಜಿಲ್ಲಾಡಳಿತ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಸಹಯೋಗದೊಂದಿಗೆ ಪ್ರವಾಸಿಗರಿಗಾಗಿ 'ಮಹಾರಾಜ' ಮತ್ತು 'ಯುವರಾಜ' ಎಂಬ ಪುಟ್ಟ ವಿಮಾನಗಳ ಹಾರಾಟವನ್ನು ಅ. 5 ರಿಂದ 14ರವರಗೆ ಏರ್ಪಡಿಸಿದೆ.
'ಮಹಾರಾಜ' ವಿಮಾನದಲ್ಲಿ ಪೈಲೆಟ್ ಜೊತೆಗೆ ಒಬ್ಬರು, 'ಯುವರಾಜ' ವಿಮಾನದಲ್ಲಿ ಪೈಲೆಟ್ ಜತೆಗೆ ಮೂವರು ಪ್ರಯಾಣಿಕರು ಕುಟುಂಬ ಸಮೇತರಾಗಿ ಪ್ರಯಾಣಿಸಬಹುದು. ಚಾಮುಂಡಿ ಬೆಟ್ಟ, ಅರಮನೆ, ಸೇಂಟ್ ಫಿಲೊಮಿನಾ ಚರ್ಚ್ ಅನ್ನು ಒಂದು ಸುತ್ತು ಹಾಕಿ 15 ನಿಮಿಷಗಳಲ್ಲಿ ವಿಮಾನ ವಾಪಸಾಗಲಿದೆ. ಮಂಡಕಳ್ಳಿ ವಿಮಾನ ನಿಲ್ದಾಣ, ಜಿಲ್ಲಾಡಳಿತ ಕಚೇರಿ ಮತ್ತು ಮೈಸೂರು ದಸರಾ ವೆಬ್ ಸೈಟ್ ನಲ್ಲಿ ಪ್ರವಾಸಿಗರು ಟಿಕೆಟ್‌ಗಳನ್ನು ಖರೀದಿ ಮಾಡಬಹುದು. ಟಿಕೆಟ್ ದರ ಇನ್ನೂ ನಿಗದಿ ಮಾಡಿಲ್ಲ.












Click it and Unblock the Notifications