ನನ್ನ ಜೈಲಿಗೆ ಕಳುಹಿಸಿದ್ದು ಡಿ ಕೆ ಶಿವಕುಮಾರ್: ನೇರವಾಗಿ ಆರೋಪಿಸಿದ ಮುನಿರತ್ನ
ಬೆಂಗಳೂರು, ಮಾರ್ಚ್ 05: ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಬಿಜೆಪಿ ಶಾಸಕರು ಇಂದು ನಗರದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರು ಜೈಲಿಗೆ ಹೋದ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ. ನನ್ನನ್ನು ಜೈಲಿಗೆ ಕಳುಹಿಸಿದ್ದು, ಇವರೇ ಎಂದು ಆರೋಪಿಸಿದ್ದಾರೆ.
ವೇದಿಕೆಯಲ್ಲಿ ಶಾಸಕ ಮುನಿರತ್ನ ಅವರು ಮಾತನಾಡಿವಾಗ ಅವರ ಎಡಬಲದಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯರ ಮುಖವಾಡಗಳನ್ನು ಧರಿಸಿದ ಇಬ್ಬರು ವ್ಯಕ್ತಿಗಳನ್ನು ನಿಲ್ಲಿಸಿಕೊಂಡಿದ್ದರು. ಶಿವಕುಮಾರ್ ಮುಖವಾಡ ಧರಿಸಿದ ವ್ಯಕ್ತಿಯ ಕುತ್ತಿಗೆಯಲ್ಲಿ ನಾನು ಕಮಿಷನ್ ಕುಮಾರ್ ಅಂತ ಪ್ಲಕಾರ್ಡ್ ಜೋತಾಡುತ್ತಿದ್ದರೆ ಮತ್ತೊಂದು ವ್ಯಕ್ತಿಯ ಕುತ್ತಿಗೆಯಿಂದ ಲೂಟಿ ರಾಮಯ್ಯ ಎಂದು ಪ್ಲಕಾರ್ಡ್ ನಲ್ಲಿ ಕಾಣಬಹುದಾಗಿದೆ.

ಈ ವೇಳೆ ಮಾತನಾಡಿದ ಮುನಿರತ್ನ ಅವರು, ಡಿ ಕೆ ಶಿವಕುಮಾರ್ ಅವರೇ ನನ್ನ ಮೇಲೆ ರೇಪ್ ಕೇಸ್ ಹಾಕಬೇಡಿ. ಕೈ ಮುಗಿದು ಕೇಳಿಕೊಳ್ಳುತ್ತೇನೆ, ಮೊನ್ನೆ ಜೈಲಿಗೆ ಕಳುಹಿಸಿದ್ದಿರಾ.. ಮತ್ತೆ ಜೈಲಿಗೆ ಕಳುಹಿಸಬೇಡಿ. ನಿಮ್ಮ ಬಗ್ಗೆ ಮಾತನಾಡಲು ಭಯ ಆಗುತ್ತದೆ. ನಿಮ್ಮ ನೋಟವನ್ನ ನೋಡಿದ್ರೆ ಭಯ ಆಗುತ್ತೆ. ನಿಮ್ಮ ಬಗ್ಗೆ ಮಾತನಾಡಿದ್ರೆ ಎಲ್ಲಿ ಜೈಲಿಗೆ ಕಳುಹಿಸುತ್ತಿರೋ ಅಂತ. ಈ ಬಾರಿಯೂ ಜೈಲಿಗೆ ಕಳುಹಿಸುತ್ತಿರಾ ಎಂದು ಮುನಿರತ್ನ ಅವರು ಪ್ರಶ್ನಿಸಿದ್ದಾರೆ.
ಸಿದ್ದಣ್ಣ, ಲೂಟಿ ಗ್ಯಾರಂಟಿ ಅಣ್ಣ : ಆರ್. ಅಶೋಕ್
ಇನ್ನೂ ಈ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಸರಕಾರದಲ್ಲಿ ದುಡ್ಡಿಲ್ಲ; ಬೊಕ್ಕಸ ಖಾಲಿಯಾದ ಕಾರಣ ದಲಿತರ ಉದ್ಧಾರಕ್ಕೆ ಮೀಸಲಾಗಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸುತ್ತಿದ್ದಾರೆ. ನಾನು ಸಿದ್ದಣ್ಣ, ಲೂಟಿ ಗ್ಯಾರಂಟಿ ಅಣ್ಣ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯವನ್ನು ಭಿಕ್ಷೆ ಬೇಡುವ ಸ್ಥಿತಿಗೆ ಸಿದ್ದರಾಮಯ್ಯನವರು ತಂದು ನಿಲ್ಲಿಸಿದ್ದಾರೆ. ಸಿದ್ದರಾಮಯ್ಯನವರು ಸಾಲದ ವಿಚಾರದಲ್ಲೂ ಚಾಂಪಿಯನ್ ಎಂದು ಆಕ್ಷೇಪಿಸಿದರು. ಎಲ್ಲ ನಿಗಮ, ತಾಂಡಾ ಅಭಿವೃದ್ಧಿ ನಿಗಮಗಳಿಗೆ ಕನಿಷ್ಠ ಮೊತ್ತವನ್ನು ಈ ಮನೆಹಾಳ ಕಾಂಗ್ರೆಸ್ ಸರಕಾರ ನೀಡಿದೆ ಎಂದು ಆರೋಪಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ದಲಿತರ ಹಣ ದುರ್ಬಳಕೆ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಜನಾಂದೋಲನ ರೂಪಿಸಿದೆ. ಬಿಜೆಪಿಯ ದಲಿತಪರ ಚಿಂತನೆ, ಅವರ ಪರವಾದ ಯೋಜನೆಗಳೇ ಕಾರಣ ಎಂದು ತಿಳಿಸಿದರು. ನಮ್ಮ ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರು ಈ ವಿಷಯವನ್ನು ತೀಕ್ಷ್ಣವಾಗಿ ಪರಿಗಣಿಸಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷ ತಲೆ ಎತ್ತಿ ತಿರುಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಕೌನ್ಸಿಲರ್ ಚುನಾವಣೆ ಹತ್ತಿರದಲ್ಲಿರುವಂತೆ ಕಾಣುತ್ತಿದೆ. ಕೋರ್ಟಿನ ಆದೇಶದ ಕಾರಣ ಚುನಾವಣೆ ನಡೆಯುವ ಸಾಧ್ಯತೆ ಇದೆ. ನಾವು ಜನರನ್ನು ಭೇಟಿ ಮಾಡಿ ಮನೆಮನೆಗೆ ಹೋಗಿ ಅವರನ್ನು ಪ್ರೇರೇಪಿಸಬೇಕು. ಬಿಜೆಪಿ ಕಾರ್ಯಕರ್ತರನ್ನು ನಾವು ಉತ್ತೇಜಿಸಬೇಕು ಎಂದು ಮನವಿ ಮಾಡಿದರು. ಈ ಹೋರಾಟಕ್ಕೆ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ಶಾಸಕರಾದ ಎಸ್.ಆರ್.ವಿಶ್ವನಾಥ್, ಬೈರತಿ ಬಸವರಾಜ್, ಮಾನಪ್ಪ ವಜ್ಜಲ್, ಉದಯ್ ಗರುಡಾಚಾರ್, ರಘು, ಸಿಮೆಂಟ್ ಮಂಜು, ಭಾಗೀರಥಿ ಮರುಳಸಿದ್ದಯ್ಯ, ಮಾಜಿ ಶಾಸಕ ಹಾಲಪ್ಪ, ಪ್ರಕೋಷ್ಠಗಳ ಸಂಯೋಜಕ ದತ್ತಾತ್ರಿ, ಮುಖಂಡರಾದ ತಮ್ಮೇಶ್ ಗೌಡ, ಶರಣು ತಳ್ಳಿಕೇರಿ, ಉಮೇಶ್ ಶೆಟ್ಟಿ, ರವೀಂದ್ರ, ನಗರದ 3 ಜಿಲ್ಲೆಗಳ ಅಧ್ಯಕ್ಷರಾದ ಹರೀಶ್, ರಾಮಮೂರ್ತಿ, ಸಪ್ತಗಿರಿ ಗೌಡ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.












Click it and Unblock the Notifications