'ಮುನಿರತ್ನ ತಲೆಗೆ ಮೊಟ್ಟೆ ಏಟು ಬಿದ್ದು ತಲೆ ಕೆಟ್ಟು ಹೋಗಿದೆ'
ಬೆಂಗಳೂರು, ಫೆಬ್ರವರಿ 14: ಶಾಸಕ ಮುನಿರತ್ನ ಅವರು ಬೆಂಗಳೂರು ಅಭಿವೃದ್ಧಿಯಾಗುತ್ತಿಲ್ಲ. ಸುಮಾರು 20 ವರ್ಷಗಳ ಹಿಂದಕ್ಕೆ ಹೋಗಿದೆ. ಶೇ.35 ರಷ್ಟು ಲಂಚ ಕೇಳುತ್ತಿದ್ದಾರೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, "ಲೋಕಸಭಾ ಸದಸ್ಯರಾದ ತಜ್ಞ ವೈದ್ಯರೊಬ್ಬರು ಮುನಿರತ್ನ ಅವರ ತಲೆಗೆ ಮೊಟ್ಟೆ ಏಟು ಬಿದ್ದು, ಆಸಿಡ್ ದಾಳಿಯಾಗಿ ಪೆಟ್ಟು ಬಿದ್ದಿದೆ. ತಲೆಗೆ ಏಟಾಗಿ ಒಂದೆರಡು ಇಂಚು ಒಳಗೆ ಹೋಗಿದೆ, ಹೀಗಾಗಿ ತಲೆಕೆಟ್ಟು ಹೋಗಿದೆ ಎಂದು ಹೇಳಿದ್ದರು. ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕು ಎಂದು ಮಾಜಿ ಸಂಸದ ಡಿ ಕೆ ಸುರೇಶ್ ವ್ಯಂಗ್ಯವಾಡಿದರು.
ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ ಕೆ ಸುರೇಶ್ ಅವರು, ಬೆಂಗಳೂರು ಹೈದರಾಬಾದ್ ಗಿಂತ ಹಿಂದಕ್ಕೆ ಉಳಿದಿದೆ, ಈ ಆರೋಪಗಳನ್ನು ಮಾಡಿರುವ ನನ್ನ ಮೇಲೆ ಮತ್ತೆ ಪ್ರಕರಣ ದಾಖಲಿಸಬಹುದು ಎನ್ನುವ ಮುನಿರತ್ನ ಹೇಳಿಕೆ ಬಗ್ಗೆ ಕೇಳಿದಾಗ, "ಅವರು ಮೊದಲೇ ಮಾಡಿಟ್ಟುಕೊಂಡಿರುವ ಕುತಂತ್ರಗಳನ್ನು ಈ ರೀತಿ ಸಾರ್ವಜನಿಕವಾಗಿ ತಿಳಿಸುತ್ತಿದ್ದಾರೆ. ಅವರು ನಡೆದು ಬಂದ ದಾರಿ ನೋಡಿದರೆ ಎಲ್ಲವೂ ತಿಳಿಯುತ್ತದೆ. ಅವರು ಯಾವ ಠಾಣೆಗಳಲ್ಲಿ ಇರುತ್ತಿದ್ದರು ಎನ್ನುವ ಇತಿಹಾಸವಿದೆ. ಈಗ ಪಲಾಯನ ಮಾಡಲು ಈ ರೀತಿಯ ಹೇಳಿಕೆಗಳನ್ನು ಮುಂಚಿತವಾಗಿಯೇ ನೀಡುತ್ತಿದ್ದಾರೆ ಎಂದರು.

ಪಂಚತಾರ ಹೋಟೆಲ್ ಅಲ್ಲಿ ಕುಳಿತುಕೊಂಡು ಶಿವಕುಮಾರ್ ಅವರು ಶೇ 35 ರಷ್ಟು ಕಮಿಷನ್ ಕೇಳುತ್ತಾರೆ ಎನ್ನುವ ಬಗ್ಗೆ ಕೇಳಿದಾಗ, "ಶಿವಕುಮಾರ್ ಅವರು ಪಂಚತಾರ ಹೋಟೆಲ್ ಗಳಿಗೆ ಹೋಗುವುದಿಲ್ಲ. ಅದೇನಿದ್ದರು ಬಿಜೆಪಿಯವರ ಸಂಸ್ಕೃತಿ. ಮುನಿರತ್ನ ಮೊದಲು ಅವರ ಮೇಲಿರುವ ಎಲ್ಲಾ ಆರೋಪಗಳಿಂದ ಮುಕ್ತರಾಗಿ ಹೊರಬರಲಿ ಆನಂತರ ಮಿಕ್ಕ ವಿಚಾರಗಳನ್ನು ಮಾತನಾಡೋಣ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯಾಗಿ ಆ ಸ್ಥಾನಕ್ಕೆ ಡಿ.ಕೆ.ಸುರೇಶ್ ಅವರು ಬರುತ್ತಾರೆ ಎನ್ನುವ ವಿಚಾರದ ಬಗ್ಗೆ ಕೇಳಿದಾಗ, ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ಅಧ್ಯಕ್ಷರ ಬದಲಾವಣೆ ಎನ್ನುವುದು ಪಕ್ಷದ ವರಿಷ್ಠರ ತೀರ್ಮಾನ. ಇದಕ್ಕೆ ಅಧ್ಯಕ್ಷರು ಬದ್ಧವಾಗಿದ್ದಾರೆ, ಬೇರೆಯವರೂ ಬದ್ಧರಾಗಿ ಇರುತ್ತಾರೆ. ಇದನ್ನು ಬೇರೆಯವರು ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ನಾನು ಯಾವುದೇ ಸ್ಥಾನಗಳ ಆಕಾಂಕ್ಷಿಯಲ್ಲ. ಜನ ನನಗೆ ವಿಶ್ರಾಂತಿ ನೀಡಿದ್ದಾರೆ. ನಾನು ಈಗ ವಿಶ್ರಾಂತಿಯಲ್ಲಿದ್ದೇನೆ ಎಂದು ತಿಳಿಸಿದರು. ರಾಜ್ಯ ಉಸ್ತುವಾರಿಯೂ ಬದಲಾವಣೆ ಕುರಿತು ನನಗೆ ಮಾಹಿತಿಯಿಲ್ಲ. ಇದು ಎಐಸಿಸಿ ಮಟ್ಟದಲ್ಲಿ ತೀರ್ಮಾನವಾಗುವ ವಿಚಾರ ಎಂದು ಹೇಳಿದರು.
ಕಾವೇರಿ- ಗೋದಾವರಿ ಜೋಡಣೆ ಬಗ್ಗೆ ದೇವೇಗೌಡರ ಮಾತಿನ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದು, ಕಾವೇರಿ ಮತ್ತು ಗೋದಾವರಿ ನದಿ ಜೋಡಣೆ ಕನಸಿನ ಯೋಜನೆ. ಆದರೆ ಇಲ್ಲಿ ನಮ್ಮ ಕರ್ನಾಟಕ ರಾಜ್ಯದ ಪಾಲಿನ ನೀರು ಎಷ್ಟು ಎಂದು ಮೊದಲು ನಿಗದಿಯಾಗಲಿ. ಈ ಯೋಜನೆಯಿಂದ ಹೆಚ್ಚು ತಮಿಳುನಾಡು, ಆಂಧ್ರ, ತೆಲಂಗಾಣಕ್ಕೆ ಉಪಯೋಗವಾಗಲಿದೆ. ಇದು ಯಾವಾಗ ಅನುಷ್ಠಾನವಾಗುತ್ತದೆ ಎನ್ನುವ ಸ್ಪಷ್ಟತೆಯಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ಮೊದಲು ಸ್ಪಷ್ಟತೆ ದೊರೆಯಲಿ. ದೇವೇಗೌಡರ ಕಾಳಜಿಯನ್ನು ಮೆಚ್ಚಬೇಕು. ಆದರೆ ಕರ್ನಾಟಕದ ಪಾಲಿನ ಬಗ್ಗೆ ಅವರು ಮಾತನಾಡಬೇಕಿತ್ತು. ಮೋದಿಯವರಿಗೆ ಹತ್ತಿರವಿರುವ ದೇವೇಗೌಡರು ನಮಗೆ ಹೆಚ್ಚಿನ ನೀರಿನ ಪಾಲನ್ನು ಕೊಡಿಸಬಹುದು ಎಂದರು.












Click it and Unblock the Notifications