ಎಎಪಿ ಸೇರಿದ್ದ ಮುಖ್ಯಮಂತ್ರಿ ಚಂದ್ರುಗೆ ಮಹತ್ವದ ಹುದ್ದೆ
ಬೆಂಗಳೂರು, ಜುಲೈ 04: ನಟ ಮುಖ್ಯಮಂತ್ರಿ ಚಂದ್ರು ಆಮ್ ಆದ್ಮಿ ಪಕ್ಷದ ರಾಜ್ಯ ಜನಸಂಪರ್ಕ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ತೊರೆದಿದ್ದ ಅವರು ಎಎಪಿ ಸೇರಿದ್ದರು.
ಎಎಪಿ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ನಿರ್ದೇಶನದಂತೆ ಮುಖ್ಯಮಂತ್ರಿ ಚಂದ್ರು ನೇಮಕ ಮಾಡಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಆದೇಶ ಹೊರಡಿಸಿದ್ದಾರೆ. ಪಕ್ಷವನ್ನು ಸದೃಢವಾಗಿ ಬೆಳೆಸುವುದರಲ್ಲಿ ಚಂದ್ರುರವರು ಮಹತ್ವದ ಪಾತ್ರ ವಹಿಸವ ದೃಢ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, "ದೆಹಲಿ ಹಾಗೂ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರಗಳು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿವೆ. ಪಕ್ಷವು ಸ್ವಚ್ಛ ರಾಜಕೀಯ ಹಾಗೂ ಪ್ರಾಮಾಣಿಕ ಆಡಳಿತ ನೀಡುತ್ತಿದೆ" ಎಂದರು.

"ಅಲ್ಲಿನ ಸರ್ಕಾರದ ಸಾಧನೆಗಳನ್ನು ಕರ್ನಾಟಕದ ಜನತೆಗೆ ತಿಳಿಸಿ, ಇಲ್ಲಿ ಕೂಡ ಎಎಪಿಯನ್ನು ಅಧಿಕಾರಕ್ಕೆ ತರಬೇಕಿದೆ. ಈ ನಿಟ್ಟಿನಲ್ಲಿ ಜನಸಂಪರ್ಕ ಹಾಗೂ ಪ್ರಚಾರ ಸಮಿತಿಯು ಶ್ರಮಿಸಲಿದೆ. ನನ್ನ ಮೇಲೆ ವಿಶ್ವಾಸವನ್ನಿಟ್ಟು ಸಮಿತಿಯ ಅಧ್ಯಕ್ಷ ಜವಾಬ್ದಾರಿ ನೀಡಿದ ಪಕ್ಷದ ಮುಖಂಡರಿಗೆ ಧನ್ಯವಾದಗಳು" ಎಂದು ಹೇಳಿದರು.
ಗೌರಿಬಿದನೂರು ಕ್ಷೇತ್ರದ ಮಾಜಿ ಶಾಸಕ, ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಜೂನ್‌ನಲ್ಲಿ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದರು. ಬೆಂಗಳೂರಿನ ಪರಾಗ್ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಚಂದ್ರು ಅವರನ್ನು ಪಕ್ಷದ ಮುಖಂಡರು ಬರಮಾಡಿಕೊಂಡಿದ್ದರು.
ಬಿಬಿಎಂಪಿಯ ಚುನಾವಣೆ ಕೆಲವೇ ತಿಂಗಳಲ್ಲಿ ಎದುರಾಗಲಿದೆ. 2023ರಲ್ಲಿ ರಾಜ್ಯ ವಿಧಾನಸಭೆಯ ಚುನಾವಣೆಯು ಎದುರಾಗಲಿದೆ. ಇಂತಹ ಸಂದರ್ಭದಲ್ಲಿ ಎಎಪಿಯಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.












Click it and Unblock the Notifications