ಬಣಕಲ್ ಬಾಲಕನ ಬದುಕಿಗೆ ಮಾರಕವಾದ ತುಳಸಿ ತೈಲ

Posted By: ಚಿಕ್ಕಮಗಳೂರು ಪ್ರತಿನಿಧಿ
Subscribe to Oneindia Kannada

ಮೂಡಿಗೆರೆ, ನವೆಂಬರ್ 10: ಇಲ್ಲಿನ ಜಾವಳಿಯ ದೊಡ್ಡಿನಕೊಪ್ಪ ಸಣ್ಣಪ್ಪ ಎಂಬುವರು ವರ್ಷಗಳ ಹಿಂದೆ ಮನೆಗೆ ತಂದ ತುಳಸಿ ತೈಲದಿಂದ ಅವರ ಮೊಮ್ಮಗನ ಬದುಕು ದುಸ್ತರವಾಗಿದೆ. ತೈಲ ಸೇವಿಸಿ ಅಂಗವೈಕಲ್ಯ ಮತ್ತು ಬುದ್ಧಿ ಮಾಂದ್ಯತೆಗೆ ಒಳಗಾಗಿರುವ ಬಾಲಕನ ಕರುಣಾಜನಕ ಕಥೆ ಇಲ್ಲಿದೆ.

ಮೂಡಿಗೆರೆ ವಿದ್ಯಾರ್ಥಿನಿ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ

ಶೀತ, ಕೆಮ್ಮಿಗೆಂದು ತಂದಿದ್ದ ತುಳಸಿ ತೈಲ ಎಂಬ ಔಷಧಿಯಿಂದಾಗಿ ಜಾವಳಿಯ ದೊಡ್ಡಿನಕೊಪ್ಪದ ಯೋಗೇಶ್ ಮತ್ತು ಕವಿತಾ ದಂಪತಿಗಳ ಪುತ್ರ ಪ್ರತ್ಯುಕ್ಷ್, ಅಂಗವೈಕಲ್ಯ ಮತ್ತು ಬುದ್ದಿಮಾಂದ್ಯತೆಗೆ ಒಳಗಾಗಿ 4 ವರ್ಷದಿಂದ ನರಕಯಾತನೆ ಪಡುತ್ತಿರುವ ಕರುಣಾಜನಕ ಕತೆಯಿದು.

ಜಾವಳಿಯ ದೊಡ್ಡಿನಕೊಪ್ಪದ ಯೋಗೇಶ್ ಅವರ ತಂದೆ ಸಣ್ಣಪ್ಪ ಅವರು 4 ವರ್ಷದ ಹಿಂದೆ ಕೊಟ್ಟಿಗೆಹಾರದ ಬಸ್ ನಿಲ್ದಾಣದಲ್ಲಿ ಮಾರುತ್ತಿದ್ದ ತುಳಸಿ ತೈಲ ಎಂಬ ಶೀತ, ಕೆಮ್ಮಿಗೆ ಬಳಸುವ ತೈಲವೊಂದನ್ನು ಮನೆಗೆ ತಂದಿದ್ದರು.

ಮನೆಯಲ್ಲಿ ಇಟ್ಟಿದ್ದ ತುಳಸಿ ತೈಲವನ್ನು ಯೋಗೇಶ್ ಅವರ 2 ವರ್ಷದ ಮಗ ಪ್ರತ್ಯುಕ್ಷ್ ಆಟವಾಡುತ್ತಾ ಬಾಯಿಗೆ ಹಾಕಿಕೊಂಡಿದ್ದು ಸ್ವಲ್ಪ ಸಮಯದಲ್ಲೆ ಒದ್ದಾಡಲು ಪ್ರಾರಂಭಿಸಿದ. ಕೂಡಲೆ ಮಗು ಪ್ರತ್ಯುಕ್ಷ್‍ನನ್ನು ಮಂಗಳೂರಿಗೆ ಕರೆದ್ಯೊಯ್ದಿದ್ದು, ಮಂಗಳೂರಿನಲ್ಲೂ ವೈದ್ಯರು ಕೈಚೆಲ್ಲಿದಾಗ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈದ್ಯರು ಕೂಡಲೆ ಚಿಕಿತ್ಸೆ ಆರಂಭಿಸಿದರೂ ಮಗುವಿಗೆ ಪ್ರಜ್ಞೆ ಮರುಕಳಿಸಲು 22 ದಿನ ಬೇಕಾಯಿತು. ಮುಂದೇನಾಯ್ತು? ಓದಿ...

ಮುಂಚಿನ ಲವಲವಿಕೆ ಮಗುವಿನಲ್ಲಿ ಕಾಣಿಸಿಕೊಳ್ಳಲಿಲ್ಲ.

ಮುಂಚಿನ ಲವಲವಿಕೆ ಮಗುವಿನಲ್ಲಿ ಕಾಣಿಸಿಕೊಳ್ಳಲಿಲ್ಲ.

22 ದಿನಗಳ ನಂತರ ಪ್ರಜ್ಞೆ ಬಂದರೂ, ಮುಂಚಿನ ಲವಲವಿಕೆ ಮಗುವಿನಲ್ಲಿ ಕಾಣಿಸಿಕೊಳ್ಳಲಿಲ್ಲ. ಆ ನಂತರದಲ್ಲಿ ಮಗು ಪ್ರತ್ಯುಕ್ಷ್ ಸೊಂಟದ ಬಲವನ್ನು ಕಳೆದುಕೊಂಡು ನಡೆದಾಡುವುದಕ್ಕೂ ಕಷ್ಟವಾಗಿದೆ.
ಮಾತನಾಡಲು ಕೂಡ ಸಾಧ್ಯವಾಗುತ್ತಿಲ್ಲ.

ತಾಯಿ ಕವಿತಾ ಯಾವಾಗಲೂ ಮಗುವಿನ ಜೊತೆಯಲೆ ಇದ್ದು ಮಗುವನ್ನು ನೋಡಿಕೊಳ್ಳಬೇಕಾಗಿದೆ.

ಪ್ರತ್ಯುಕ್ಷ್ ತಾಯಿ ಕವಿತಾ ಅಳಲು

ಪ್ರತ್ಯುಕ್ಷ್ ತಾಯಿ ಕವಿತಾ ಅಳಲು

‘ಮಗ ಪ್ರತ್ಯುಕ್ಷ್ ಎಲ್ಲಾ ಮಕ್ಕಳಂತೆ ಸಹಜವಾಗಿದ್ದರೆ ಈ ವೇಳೆಗೆ ಸಮವಸ್ತ್ರ ತೊಟ್ಟು ಶಾಲೆಗೆ ಹೋಗಿ ಬರುತ್ತಿದ್ದ. ಆದರೆ, ನಮಗೆ ಆ ಸಂಭ್ರಮವನ್ನು ನೋಡುವ ಭಾಗ್ಯವಿಲ್ಲ. ಮೊದಲನೆ ಮಗುವನ್ನು ಅನೀಮಿಯ ಕಾಯಿಲೆಯಿಂದ ಉಳಿಸಿಕೊಳ್ಳಲಾಗಲಿಲ್ಲ. ಪ್ರತ್ಯುಕ್ಷ್ ಚಿಕಿತ್ಸೆಗೆ ತಿಂಗಳಿಗೆ 7 ಸಾವಿರ ವೆಚ್ಚವಾಗುತ್ತದೆ. ಕುಟುಂಬ ನಿರ್ವಹಣೆಯ ಜೊತೆಗೆ ಚಿಕಿತ್ಸೆಯ ಖರ್ಚು ಬರಿಸಲು ಕಷ್ಟವಾಗುತ್ತಿದೆ' ಎಂದು ನಮ್ಮ ಪ್ರತಿನಿಧಿ ಜತೆ ನೋವು ತೋಡಿಕೊಂಡರು.

5 ವರ್ಷಗಳ ಕಾಲ ಔಷಧಿ ತೆಗೆದುಕೊಳ್ಳಬೇಕು

5 ವರ್ಷಗಳ ಕಾಲ ಔಷಧಿ ತೆಗೆದುಕೊಳ್ಳಬೇಕು

ಪ್ರಸ್ತುತ ಶಿವಮೊಗ್ಗದ ಮಾನಸ ಆಸ್ಪತ್ರೆಯ ನರರೋಗ ವಿಭಾಗದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು 5 ವರ್ಷಗಳ ಕಾಲ ಔಷಧಿ ತೆಗೆದುಕೊಳ್ಳುವಂತೆ ವೈದ್ಯರು ತಿಳಿಸಿದ್ದಾರೆ. ಪ್ರತಿ ತಿಂಗಳು 7 ಸಾವಿರ ಔಷಧಿಗೆ ಖರ್ಚು ಮಾಡಬೇಕಿದೆ. ಕಳೆದ ಕಳೆದ 4 ವರ್ಷದಿಂದ ಕಷ್ಟದಲ್ಲಿ ಹಣ ಹೊಂದಿಸಿ ಚಿಕಿತ್ಸೆ ಕೊಡಿಸುತ್ತಿದೆ ಈ ಕುಟುಂಬ.

ಸರ್ಕಾರದಿಂದ ನೆರವಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿದರೂ ಯಾವುದೆ ಪ್ರಯೋಜನವಾಗಿಲ್ಲ.

ಚಿಕಿತ್ಸೆಗೆ ದಾನಿಗಳಿಂದ ನೆರವಿನ ನಿರೀಕ್ಷೆ

ಚಿಕಿತ್ಸೆಗೆ ದಾನಿಗಳಿಂದ ನೆರವಿನ ನಿರೀಕ್ಷೆ

ಪ್ರತ್ಯುಕ್ಷ್ ತಂದೆ ಯೋಗೇಶ್ ಅವರು ನಿಡುವಾಳೆಯಲ್ಲಿ ರಸ್ತೆ ಬದಿ ಪಾನಿಪೂರಿ ಗಾಡಿಯಲ್ಲಿ ವ್ಯಾಪಾರ ನಡೆಸುತ್ತಾರೆ. ಅದರಿಂದ ಬರುವ ಆದಾಯ ಕುಟುಂಬ ನಿರ್ವಹಣೆಯ ಜೊತೆಗೆ ಮಗುವಿನ ಚಿಕಿತ್ಸೆಗೆ ಸಾಲುತ್ತಿಲ್ಲ.ಈ ಕುಟುಂಬಕ್ಕೆ ಬೇರೆ ಮೂಲಗಳಿಂದ ಆದಾಯವಿಲ್ಲ. ಯೋಗೇಶ್ ಅವರ ಕುಟುಂಬ ಬಾಲಕ ಪ್ರತ್ಯುಕ್ಷ್ ನ ಚಿಕಿತ್ಸೆಗೆ ದಾನಿಗಳಿಂದ ನೆರವಿನ ನಿರೀಕ್ಷೆಯಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mudigere: Consuming Tulsi oil becomes life threat a Child. Pratyuksh now 6 year old is suffering from mental instability and disability.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ