ಮಂಡ್ಯ : ಮೂಡಾ ಸೈಟು ಹಗರಣ, ಸಿಬಿಐನಿಂದ ಚಾರ್ಜ್‌ಶೀಟ್

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಏಪ್ರಿಲ್ 29 : ನಿವೇಶನಗಳನ್ನು ನಿಯಮಬಾಹಿರವಾಗಿ ಹಂಚಿಕೆ ಮಾಡಿರುವ ಪ್ರಕರಣ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮುಳುವಾಗಿ ಪರಿಣಮಿಸಿದ್ದು, ಸಂಸದರು, ಶಾಸಕರು ಸೇರಿದಂತೆ 40 ಮಂದಿ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್ ಸಲ್ಲಿಕೆ ಮಾಡಿದೆ.

ಸುಮಾರು 107 ನಿವೇಶನಗಳನ್ನು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರವು ನಿಯಮಬಾಹಿರವಾಗಿ ಹಂಚಿಕೆ ಮಾಡಿತ್ತು. ಈ ಪ್ರಕರಣ ಭಾರೀ ಸುದ್ದಿ ಮಾಡಿತ್ತು ಮತ್ತು ಜನ ಸಾಮಾನ್ಯರ ಆಕ್ರೋಶಕ್ಕೂ ಕಾರಣವಾಗಿತ್ತು. ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಹಾಗೂ ಕೆಪಿಸಿಸಿ ಸದಸ್ಯ ಟಿ.ಎಸ್.ಸತ್ಯಾನಂದ ಅವರ ಹೋರಾಟದ ಫಲವಾಗಿ 2011ರ ಅಕ್ಟೋಬರ್ 17ರಂದು ಹಗರಣ ಬೆಳಕಿಗೆ ಬಂದಿತ್ತು. [ಮುಡಾ ಹಗರಣ ಆರೋಪಿ ಕೆಬ್ಬಳ್ಳಿ ಆನಂದ್ ಗೆ 'ಡಾನ್' ಬೆದರಿಕೆ?]

muda

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರವು 107 ಬಿಡಿ ನಿವೇಶನಗಳನ್ನು ಹಂಚಿಕೆ ಮಾಡುವ ಸಂಬಂಧ 2009ರ ಸೆ. 17ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿ ನಿವೇಶನ ಹಂಚಿಕೆಗೆ ಅರ್ಜಿ ಸಲ್ಲಿಸಲು 2009ರ ನವೆಂಬರ್ 30ರಂದು ಕೊನೆಯ ದಿನಾಂಕ ನಿಗದಿಪಡಿಸಿತ್ತು. [ಜೆಡಿಎಸ್ ಶಾಸಕರು ಮುಡಾ ಸೈಟು ನುಂಗಿದ ಕಥೆ]

ಆದರೂ 2009ರ ನ.26 ಅವಧಿಯೊಳಗೆ 107 ನಿವೇಶನಗಳ ಹಂಚಿಕೆಯನ್ನು ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿ ತರಾತುರಿಯಲ್ಲಿ ವಿಲೇವಾರಿ ಮಾಡಲಾಗಿತ್ತು. ಈ ಹಗರಣವನ್ನು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಹಾಗೂ ಕೆಪಿಸಿಸಿ ಸದಸ್ಯ ಟಿ.ಎಸ್.ಸತ್ಯಾನಂದ ಬಯಲು ಮಾಡಿದ್ದರು.

ಯಾವ ವಿರುದ್ಧ ಆರೋಪ : ಅಂದು ಮುಡಾ ಅಧ್ಯಕ್ಷೆಯಾಗಿದ್ದ ವಿದ್ಯಾ ನಾಗೇಂದ್ರ, ಶಾಸಕರಾಗಿದ್ದ ಎಂ.ಶ್ರೀನಿವಾಸ್, ಸಿ.ಎಸ್.ಪುಟ್ಟರಾಜು, ರಮೇಶ್ ಬಂಡಿಸಿದ್ದೇಗೌಡ, ಮುಡಾ ನಿರ್ದೇಶಕರಾಗಿದ್ದ ಎಂ.ಜೆ.ಚಿಕ್ಕಣ್ಣ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ತಮಗೆ ಹಾಗೂ ತಮ್ಮ ಸಂಬಂಧಿಕರಿಗೆ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿದ್ದರು. ಮುಡಾ ಅಧಿಕಾರಿಗಳು ಮತ್ತು ನೌಕರರಿಗೆ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿದ್ದರು.

ಈ ಹಗರಣದಲ್ಲಿ ಅಂದಿನ ಮುಡಾ ಆಯುಕ್ತ ಡಿ.ಉಪೇಂದ್ರ ನಾಯಕ್ ಅವರು ಶಾಮೀಲಾಗಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದರು. ಶಾಸಕರಾಗಿದ್ದ ಎಂ.ಶ್ರೀನಿವಾಸ್, ರಮೇಶ್ ಬಂಡಿಸಿದ್ದೇಗೌಡ, ಸಿ.ಎಸ್.ಪುಟ್ಟರಾಜು ಅವರು ಶಾಸಕರ ಕೋಟಾದಡಿ ರಿಯಾಯಿತಿ ದರದಲ್ಲಿ ನಿವೇಶನಗಳನ್ನು ಪಡೆದುಕೊಂಡಿದ್ದರೂ ಸಹ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ ನಿವೇಶನಗಳನ್ನು ಪಡೆದುಕೊಂಡಿರುವುದು ದೃಢಪಟ್ಟಿತ್ತು.

ಸರ್ಕಾರ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿ ಆದೇಶ ಹೊರಡಿಸಿತ್ತು. ತನಿಖೆ ನಡೆಸಿದ ಸಿಬಿಐ ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್ ಸಲ್ಲಿಕೆ ಮಾಡಿದೆ. ಸದ್ಯ, ಮಂಡ್ಯ ಸಂಸದರಾಗಿರುವ ಸಿ.ಎಸ್.ಪುಟ್ಟರಾಜು (ಜೆಡಿಎಸ್) ಅವರ ಹೆಸರನ್ನು ಚಾರ್ಜ್ ಶೀಟ್‌ನಲ್ಲಿ ಸೇರಿಸಲಾಗಿದೆ.

ಚಾರ್ಜ್‌ಶೀಟ್‌ನಲ್ಲಿ ಯಾರ ಹೆಸರು? : ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ರಮೇಶ್ ಬಂಡಿಸಿದ್ದೇಗೌಡ, ಮಾಜಿ ಶಾಸಕ ಎಂ.ಶ್ರೀನಿವಾಸ್, ಮುಡಾ ಮಾಜಿ ಅಧ್ಯಕ್ಷೆ ವಿದ್ಯಾ ನಾಗೇಂದ್ರ, ಮಾಜಿ ನಿರ್ದೇಶಕ ಎಂ.ಜೆ.ಚಿಕ್ಕಣ್ಣ, ಮುಡಾ ಹಿಂದಿನ ಆಯುಕ್ತ ಡಿ.ಉಪೇಂದ್ರ ನಾಯಕ್, ಕಾರ್ಯಪಾಲಕ ಅಭಿಯಂತರ ಕೆ.ಎಂ.ನಾಗರಾಜು ಅವರ ಹೆಸರು ಚಾರ್ಜ್‌ಶೀಟ್‌ನಲ್ಲಿದೆ.

ನಗರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕ ಮುರಳೀಧರ್, ವೆಂಕಟೇಶ್, ಎಂ.ಜೆ.ಚಿಕ್ಕಣ್ಣ ಪತ್ನಿ ಪದ್ಮಿನಿ, ಸಂಬಂಧಿ ಪಿ.ಎಲ್.ಶಿವಕುಮಾರ್, ಮುಡಾ ಲೆಕ್ಕಾಧಿಕಾರಿ ಹೆಚ್.ಕೆ.ನಾಗರಾಜು, ಸಹಾಯಕ ಅಭಿಯಂತರ ಕಾಳೇಗೌಡ ಸೇರಿದಂತೆ 40 ಮಂದಿ ವಿರುದ್ಧ ಸಿಬಿಐ ಡಿವೈಎಸ್ಪಿ ಇ.ಪಿ.ಸುರೇಶ್‍ಕುಮಾರ್ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Central Bureau of Investigation (CBI) on Friday filed charge sheet in Mandya Urban Development Authority (MUDA) illegal site allotment scam.
Please Wait while comments are loading...