Breaking: ಆಗಸ್ಟ್ 29ರ ತನಕ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್
ಬೆಂಗಳೂರು, ಆಗಸ್ಟ್ 19: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಗಸ್ಟ್ 29ರ ತನಕ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್ ಹೇಳಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ಸೂಚನೆಯನ್ನು ಕೆಳಹಂತದ ನ್ಯಾಯಾಲಯಕ್ಕೆ ನೀಡಿದೆ.
ಸೋಮವಾರ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಪೀಠದಲ್ಲಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ಅರ್ಜಿಯ ವಿಚಾರಣೆಯನ್ನು ಆಗಸ್ಟ್ 29ರ ಮಧ್ಯಾಹ್ನ 2.30ಕ್ಕೆ ಮುಂದೂಡಿ ಕೋರ್ಟ್ ಆದೇಶಿಸಿತು. ಅಲ್ಲದೇ ಅಲ್ಲಿಯ ತನಕ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿತು.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಬಿಐ ಅಥವ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ನಿರ್ದೇಶನ ನೀಡಬೇಕು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯ ತೀರ್ಪನ್ನು ಆಗಸ್ಟ್ 20ರ ಮಂಗಳವಾರಕ್ಕೆ ಕಾಯ್ದಿರಿಸಲಾಗಿತ್ತು.
ಕರ್ನಾಟಕ ಹೈಕೋರ್ಟ್ ತನ್ನ ಸೋಮವಾರದ ಆದೇಶದಲ್ಲಿ ಆಗಸ್ಟ್ 29ರ ತನಕ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧದ ವಿಚಾರಣೆಗೆ ತಡೆ ನೀಡಿದೆ. ಆದ್ದರಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆಗಸ್ಟ್ 29ರ ತನಕ ಯಾವುದೇ ಆದೇಶ ಪ್ರಕಟಿಸುವಂತಿಲ್ಲ.
ಕರ್ನಾಟಕದ ರಾಜ್ಯಪಾಲ ಥಾವರಚಂದ್ ಗೆಹ್ಲೇಟ್ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17-ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್-2023ರ ಸೆಕ್ಷನ್ 218ರ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಿರುವುದನ್ನು ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ಪರವಾಗಿ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ಕರ್ನಾಟಕ ರಾಜ್ಯಪಾಲರ ಕಾರ್ಯದರ್ಶಿ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಅಭಿಷೇಕ್ ಮನು ಸಿಂಘ್ವಿ ಮಂಡಿಸಿದ ವಾದವನ್ನು ಕೋರ್ಟ್ ಸೋಮವಾರ ಆಲಿಸಿತು. ರಾಜಭವನದಿಂದ ಇಂದು ಬೆಳಗ್ಗೆ ದಾಖಲೆಗಳನ್ನು ನೀಡಲಾದ ಕಾರಣ ವಾದ ಮಂಡನೆಗೆ ಅವಕಾಶ ನೀಡಬೇಕು ಎಂದು ತುಷಾರ್ ಮಹ್ತಾ ಮನವಿ ಮಾಡಿದರು.
ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ರಾಜ್ಯಪಾಲರ ಆದೇಕ್ಕೆ ಯಾವುದೇ ಮಧ್ಯಂತರ ತಡೆ ನೀಡಬಾರದು, ನಾಳೆಯೇ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ತುಷಾರ್ ಮೆಹ್ತಾ ಕೋರ್ಟ್‌ಗೆ ಮನವಿ ಮಾಡಿದರು.
ಕೋರ್ಟ್ ಅರ್ಜಿಯ ಎಲ್ಲಾ ಪ್ರತಿವಾದಿಗಳು ಸಹ ಆಕ್ಷೇಪಣೆ ಸಲ್ಲಿಕೆ ಮಾಡಲು ಅವಕಾಶ ನೀಡಿತು.
ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದವನ್ನು ಆಲಿಸಿ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 29ರ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿತು. ಅಲ್ಲಿಯ ತನಕ ಸಿದ್ದರಾಮಯ್ಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚಿಸಿತು.
ಅರ್ಜಿಯ ವಿಚಾರಣೆ ಸಮಯದಲ್ಲಿ ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಸುಪ್ರೀಂಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖ ಮಾಡಿದರು. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಕಾನೂನು ಬಾಹಿರ ಎಂದು ವಾದಿಸಿದರು.












Click it and Unblock the Notifications