Muda Scam: ಸಿದ್ದರಾಮಯ್ಯ ಈ ಸ್ಥಿತಿಗೆ ಡಿಕೆ ಶಿವಕುಮಾರ್ ಕಾರಣ- ಹೆಚ್‍ಡಿಕೆ ಹೊಸ ಬಾಂಬ್
ಬೆಂಗಳೂರು ಆಗಸ್ಟ್ 18: ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದಕ್ಕೆ ಕಾರಣ ಡಿಸಿಎಂ ಡಿಕೆ ಶಿವಕುಮಾರ್ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿರಾರೊಂದಿಗೆ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ ಅವರು, ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ವಿಚಾರವಾಗಿ ಪ್ರತಿಕ್ರಿಯಿಸಿದರು.
ಈ ವೇಳೆ ಅವರು, 'ಕನಕಪುರ ಬಂಡೆ ಅನ್ನೋದೇ ಡೇಂಜರ್. ವಯನಾಡ್, ಪಶ್ಚಿಮ ಘಟ್ಟ ಹಾಗೂ ಕೊಡಗಿನಲ್ಲಿ ಭೂಕುಸಿತ ಆಗಿದೆ. ಭೂಕುಸಿತ ಆದ್ರೂ ಬಂಡೆಗಳು ರಕ್ಷಣೆ ಕೊಟ್ಟಿವೆಯೇ? ಭೂಕುಸಿತ ಆಗಿ ಹಲವಾರು ಜನ ಸಾಯೋಕೆ ಬಂಡೆಗಳೇ ಕಾರಣ. ಕರ್ನಾಟಕದಲ್ಲೂ ಈ ಬಂಡೆಗಳೇ ಕಾರಣ ಆಗುವ ಕಾಲ ದೂರವಿಲ್ಲ' ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಈ ಸ್ಥಿತಿಗೆ ಡಿಕೆ ಶಿವಕುಮಾರ್ ಅವರೇ ಕಾರಣ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

'ರಾಜ್ಯಪಾಲರ ಅಧಿಕಾರದ ವಿರುದ್ಧ ನೀವು ಏನು ಮಾಡ್ತಾಯಿದ್ದೀರಾ? ನನ್ನ ವಿರುದ್ಧ ಆರೋಪ ಬಂದಾಗ ನಾನು ಏಕಾಂಗಿಯಾಗಿ ಎದುರಿಸುತ್ತೇನೆ. ನನ್ನ ವಿರುದ್ಧ ಯಾಕೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಬೇಕು ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ' ಎಂದು ವಾಗ್ದಾಳಿ ಮಾಡಿದ್ದಾರೆ.
'ನೀವು ತಪ್ಪು ಮಾಡದೇ ಇದ್ದರೆ ನಿಮ್ಮಲ್ಲಿ ನೈತಿಕತೆ ಇದ್ದರೆ ರಾಜ್ಯಪಾಲರ ಮುಖಕ್ಕೆ ಮಸಿ ಬಳಿದು ಪ್ರತಿಭಟನೆ ಮಾಡ್ತಾಯಿದ್ರಾ? ಏನು ಸಾಧನೆ ಮಾಡಿದ್ದೀರಿ ಎಂದು ಪ್ರತಿಭಟನೆ ಮಾಡ್ತಾಯಿದಿರಿ? ನನ್ನ ಮೇಲೆ ಏನೇ ಆರೋಪ ಇದ್ದರೂ ತನಿಖೆ ಮಾಡಿ' ಎಂದು ಹೆಚ್‌ಡಿಕೆ ಸವಾಲು ಹಾಕಿದ್ದಾರೆ.
'ನಿಮ್ಮಲ್ಲೇ ನಿಮ್ಮನ್ನು ಇಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಿಮ್ಮವರೇ ನಿಮ್ಮನ್ನು ಇಳಿಸುವ ಸಂಚು ಮಾಡುತ್ತಿದ್ದಾರೆ' ಎಂದು ಹೆಚ್‌ಡಿ ಕುಮಾರಸ್ವಾಮಿ ದೂರಿದ್ದಾರೆ. ಈ ಮೂಲಕ ಅವರು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಈ ಸ್ಥಿತಿಗೆ ಡಿಕೆ ಶಿವಕುಮಾರ್ ಅವರೇ ಕಾರಣ ಎಂದು ಆರೋಪಿಸಿದ್ದಾರೆ.

ಸಂವಿಧಾನದ ಅಡಿ ಇರುವ ಯಾವುದೇ ಸಂಸ್ಥೆಯನ್ನೂ ನಾನು ದುರುಪಯೋಗ ಮಾಡಿಕೊಂಡಿಲ್ಲ. ಆದರೆ ನೀವು ಎಸಿಬಿ ಮೂಲಕ ಸಿದ್ದರಾಮಯ್ಯ ಅವರನ್ನು ಅನೇಕ ಕೇಸ್‌ನಲ್ಲಿ ರಕ್ಷಣೆ ಪಡೆದಿದ್ದೀರಿ. ಅರ್ಕಾವತಿ ಸೈಟ್ ರೀಡೂ ಹೆಸರಲ್ಲಿ ಯಾರಿಗೆ ಕೊಟ್ಟೀದ್ದೀರಿ? ಸಿದ್ದರಾಮಯ್ಯ ಅವರು ಗೋಗರೆದು ನನ್ನ ಪರ ಮಾತಾಡಿ ಎಂದು ಹೇಳಿ ಬೆಂಬಲ ಪಡೆದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಾಸಿಕ್ಯೂಷನ್‌ಗೆ ನಾನು ಹೆದರುವುದಿಲ್ಲ. ನಾನು ರಾಜೀನಾಮೆಗೆ ನಿಮ್ಮನ್ನು ಒತ್ತಾಯಿಸುವುದಿಲ್ಲ. ದೇಶದಲ್ಲಿ ಕಾನೂನು ಇದೆ. ಕಾನೂನು ಪ್ರಕಾರ ಎಲ್ಲವೂ ಆಗುತ್ತದೆ. ಒಂದುವರೆ ವರ್ಷದಿಂದ ಸರ್ಕಾರ ಹಾಳು ಮಾಡಿದ್ದೀರಿ. ಅಭಿವೃದ್ಧಿ ಆಗ್ತಿಲ್ಲ ಎಂದು ನಿಮ್ಮ ಶಾಸಕರೇ ಹೇಳಿದ್ದಾರೆ. ಒಮದನ್ನು ಉಳಿಸೋಕೆ ರಾಜ್ಯವನ್ನು ಹಾಳು ಮಾಡಬೇಡಿ ಎಂದು ಸಿಎಂಗೆ ಹೆಚ್‌ಡಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ಜಾತಿ ರಕ್ಷಣೆ ಪಡೆದು ರಾಜಕೀಯ ಎಷ್ಟು ದಿನ ಮಾಡ್ತೀರಾ? ಸಿಎಂ ಚೇರ್ ಭದ್ರವಾಗಿದೆ. ಆದರೆ ದಾರಿ ತಪ್ಪಿದರೆ ಚೇರ್ ಮೇಲೆ ಕೂತುಕೊಳ್ಳಲು ಆಗುವುದಿಲ್ಲ ಎಂದಿದ್ದಾರೆ.












Click it and Unblock the Notifications