ಹಲವು ಬೇಡಿಕೆಗಳೊಂದಿಗೆ ಡಿಕೆ ಶಿವಕುಮಾರ್ ಭೇಟಿ ಮಾಡಿದ ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು, ನವೆಂಬರ್ 9: ಸದಾ ಕಾಂಗ್ರೆಸ್ ಪಕ್ಷ ಹಾಗೂ ಡಿಕೆ ಶಿವಕುಮಾರ್ ಅವರ ಸರ್ಕಾರದ ಕಾರ್ಯವೈಖರಿ ಕುರಿತು ವಾಗ್ದಾಳಿ ನಡೆಸುತ್ತಿದ್ದ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಬುಧವಾರ ಅವರನ್ನು ಹಲವು ಬೇಡಿಕೆಗಳೊಂದಿಗೆ ಭೇಟಿ ಮಾಡಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮನವಿಗಳನ್ನು ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ. ಅದರ ವಿವರ ಇಂತಿದೆ. ಬೆಂಗಳೂರಿಗೆ ಸುರಂಗ ರಸ್ತೆಗಳ ಬದಲಿಗೆ ಸಾಮೂಹಿಕ ಸಾರಿಗೆ ವ್ಯವಸ್ಥೆಗಳನ್ನು ನಿರ್ಮಿಸಬೇಕು. ಹೆಚ್ಚು ರಸ್ತೆಗಳನ್ನು ನಿರ್ಮಿಸುವ ಮೂಲಕ ಸಂಚಾರ ದಟ್ಟಣೆಯನ್ನು ಎಂದಿಗೂ ಪರಿಹರಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಅವರು ಸಲ್ಲಿಸಿರುವ ಬೇಡಿಕೆಗಳು ಈ ಕೆಳಗಿನಂತಿವೆ.

1) ಕಳೆದ 5-6 ತಿಂಗಳುಗಳಿಂದ ಕೆ - ರೈಡ್ & ಬಿ.ಎಂ.ಆರ್.ಸಿ.ಎಲ್ ನ ಎಂ.ಡಿ ಹುದ್ದೆಗಳು ಖಾಲಿಯಿದ್ದು, ಈ ಕುರಿತು ನಾನು ಹಲವಾರು ಬಾರಿ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ. ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣದ ಬಹುಮುಖ್ಯ ಕಾಮಗಾರಿಗಳಿಗೆ ಪೂರ್ಣಾವಧಿ ಎಂ.ಡಿ ನೇಮಕದ ಅಗತ್ಯತೆ ಬಗೆಗೆ ಶ್ರೀ ಡಿ ಕೆ ಶಿವಕುಮಾರ್ ಬಳಿ ವಿವರಿಸಿದ್ದು, ಶೀಘ್ರಗತಿಯಲ್ಲಿ ಎರಡೂ ಪ್ರಾಧಿಕಾರಗಳಿಗೆ ಪೂರ್ಣಾವಧಿ ಎಂ ಡಿ ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ ಎಂದು ಸಂಸದ ಹೇಳಿದ್ದಾರೆ.
2) ಬನಶಂಕರಿ ಮೆಟ್ರೋ ಸ್ಟೇಷನ್ & ಬನಶಂಕರಿ ಬಿ.ಎಂ.ಟಿ.ಸಿ ಬಸ್ ನಿಲ್ದಾಣಗಳ ಮಧ್ಯೆ ಸ್ಕೈವಾಕ್ ನಿರ್ಮಾಣಕ್ಕೆ 2019 ರಿಂದಲೂ ನಾನು ಒತ್ತಾಯಿಸುತ್ತ ಬಂದಿದ್ದು, ಸ್ಕೈ ವಾಕ್ ನಿರ್ಮಾಣದಿಂದ ಬಹು ಆಯಾಮದ ಸಂಚಾರಕ್ಕೆ ಇದರಿಂದ ಅನುಕೂಲವಾಗಲಿದೆ. ಈ ಯೋಜನೆಯು ನೀಲನಕ್ಷೆ 2019 ರಲ್ಲಿಯೇ ತಯಾರಾಗಿದ್ದು, ಶೀಘ್ರಗತಿಯಲ್ಲಿ ಅನುಷ್ಠಾನಗೊಳಿಸುವಂತೆಯೂ ಕೂಡ ಒತ್ತಾಯಿಸಿದ್ದು, ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿರುತ್ತಾರೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
3) #NammaMetro ಮಾರ್ಗದ 3ನೆ ಹಂತದ ಕಾಮಗಾರಿಗೆ ಹಿಂದಿನ ರಾಜ್ಯ ಸರ್ಕಾರ ಈಗಾಗಲೇ ಹಸಿರು ನಿಶಾನೆ ತೋರಿಸಿದ್ದು, ಪರಿಷ್ಕೃತ ಡಿ. ಪಿ.ಆರ್ ಅನ್ನು ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಇನ್ನೂ ಸಲ್ಲಿಕೆಯಾಗಿರುವುದಿಲ್ಲ. ಡಿ.ಪಿ.ಆರ್ ಸಲ್ಲಿಕೆ ವಿಳಂಬದಿಂದ ನಗರದ ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರ ವಹಿಸಬಲ್ಲ ಕಾಮಗಾರಿಗಳು ವಿಳಂಬಗೊಳ್ಳುವ ಸಾಧ್ಯತೆಯ ಕುರಿತು ವಿವರಿಸಿದೆ.
4) ಮೆಟ್ರೋ 3ನೆ ಹಂತದ ಕಾಮಗಾರಿಯೊಂದಿಗೆ, ಇದೇ ಮಾರ್ಗದಲ್ಲಿ ಬಹು ಆಯಾಮದ ಫ್ಲೈ ಓವರ್ ನಿರ್ಮಾಣದಿಂದ ವೆಗಾ ಸಿಟಿ ಮಾಲ್ & ನಾಯಂಡಹಳ್ಳಿ ವರೆಗೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬುದರ ಕುರಿತು ಕೂಡ ಇದೇ ಸಮಯದಲ್ಲಿ ವಿವರಿಸಿದ್ದೇನೆ.
5) ನನ್ನ ಲೋಕಸಭಾ ಕ್ಷೇತ್ರದ ಹೊಸಕೆರೆ ಹಳ್ಳಿಯಲ್ಲಿ, ಅಂಡರ್ ಗ್ರೌಂಡ್ ಕೇಬಲ್ ಮೂಲಕ 66 ಕೆವಿ EHT ಲೈನ್ ಎಳೆಯುವದರಿಂದ ಚಿಕ್ಕಮಕ್ಕಳು, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬಹುದು ಎಂಬುದರ ಬಗ್ಗೆ ವಿವರಿಸಿದ್ದು, ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುತ್ತಾರೆ.
6) ಬೆಂಗಳೂರು ಮಹಾನಗರದಲ್ಲಿ, ನಿಯೋಜಿತ ಟನಲ್ ರಸ್ತೆ ನಿರ್ಮಾಣದ ಬದಲಾಗಿ, ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯತೆ ಇದ್ದು, ಟನಲ್ ಬದಲು ರೈಲು ಮಾರ್ಗ ನಿರ್ಮಾಣವಾದಲ್ಲಿ ಸಂಚಾರ ದಟ್ಟಣೆ ನಿಯಂತ್ರಣವಾಗಲಿದೆ ಎಂಬುದನ್ನು ಇದೇ ಸಂದರ್ಭದಲ್ಲಿ ವಿವರಿಸಿದ್ದು, ಈ ಸಲಹೆಗಳ ಕುರಿತು ಪರಿಶೀಲಿಸುವುದಾಗಿ ತಿಳಿಸಿರುತ್ತಾರೆ.
ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಾರ್ವಜನಿಕ ಸಾರಿಗೆ ಸಂಚಾರ ಉತ್ತೇಜನ ಅತೀ ದೊಡ್ಡ ಪರಿಹಾರವಾಗಿದ್ದು, ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬುದನ್ನು ಮನವರಿಕೆ ಮಾಡಿದ್ದೇನೆ.
ನನ್ನ ಎಲ್ಲ ಮನವಿಗಳಿಗೆ ಮಾನ್ಯ ಉಪ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬೆಂಗಳೂರಿನ ಅಭಿವೃದ್ಧಿ ಕುರಿತಾದ ಈ ಎಲ್ಲ ಕಾಮಗಾರಿಗಳ ಕುರಿತಾದ ಪರಿಷ್ಕೃತ ಮಾಹಿತಿಗಳನ್ನು ಪರಿಶೀಲಿಸುವುದರೊಂದಿಗೆ, ನಾನು ನಿಮಗೆ ನಿರಂತರವಾಗಿ ಈ ಕುರಿತಾದ ಅಪ್ಡೇಟ್ ಗಳನ್ನು ತಮಗೆ ನೀಡುತ್ತಿರುತ್ತೇನೆ ಎಂದು ಅವರು ಹೇಳಿದ್ದಾರೆ.












Click it and Unblock the Notifications