MP Renukacharya: ನಾನು ಯಾವುದಕ್ಕೂ ಹೆದರಲ್ಲ ಎಂದ ಎಂಪಿ ರೇಣುಕಾಚಾರ್ಯ
ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಬಿಜೆಪಿ ನಾಯಕರ ಮೇಲಿನ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ತಮ್ಮ ವಿರುದ್ಧ ನೀಡಿರುವ ನೋಟಿಸ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಏನೂ ತಪ್ಪು ಮಾಡಿಲ್ಲ, ಯಾವ ನೋಟಿಸ್‌ಗೂ ಉತ್ತರ ಕೊಡಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ರೇಣುಕಾಚಾರ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು. ಅಲ್ಲದೆ ಮಾಜಿ ಶಾಸಕ ಗುರುಸಿದ್ಧನಗೌಡ ಅವರನ್ನು ಉಚ್ಛಾಟನೆ ಮಾಡಿದ್ದನ್ನು ಖಂಡಿಸಿರುವ ಅವರು, ನೋಟಿಸ್ ಕೊಡದೆ ಉಚ್ಛಾಟನೆ ಮಾಡಲಾಗಿದೆ ಎಂದು ಆರೋಪಿಸಿದರು. ಚುನಾವಣೆ ವೇಳೆ ಪಕ್ಷ ಸಂಘಟನೆಯನ್ನು ತೊಡಗಿಸಿಕೊಂಡವರನ್ನು ಕಳೆದ ವಾರ ಉಚ್ಛಾಟನೆ ಮಾಡುತ್ತಾರೆ ಎಂದರೆ ಏನು ಎಂದು ಅವರು ಪ್ರಶ್ನೆ ಮಾಡಿದ್ದಾರೆ.

"ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದರೆ ನೋಟಿಸ್ ಕೊಡಬೇಕು, ಆದರೆ ಯಾವ ನೋಟಿಸ್ ಕೂಡ ನೀಡದೆ ಗುರುಸಿದ್ಧನಗೌಡ್ರನ್ನು ಮತ್ತು ಕುಟುಂಬಸ್ಥರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ ಎಂದು ಹೇಳಿದರು. ರವಿ ಕುಮಾರ್ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದು ಬೆಳೆಯಬಾರದು ಎಂದು ಉಚ್ಚಾಟನೆ ಮಾಡಿದ್ದಾರೆ" ಎಂದು ಆರೋಪಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಐವರು ಶಾಸಕರು ಒಟ್ಟಾಗಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟರೂ ರವೀಂದ್ರನಾಥ ಅವರು ಕೊಡಲು ಬಿಡಲಿಲ್ಲ. ಜಿಲ್ಲೆಗೆ ಸಚಿವ ಸ್ಥಾನ ತಪ್ಪಿಸಿದರು, ಏಕಪಕ್ಷೀಯವಾಗಿ ಜಿಲ್ಲಾಧ್ಯಕ್ಷರು ನಿರ್ಧಾರ ಮಾಡಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ದೇಶಕ್ಕೆ ಮೋದಿ ಹೇಗೋ ರಾಜ್ಯಕ್ಕೆ ಬಿಎಸ್‌ವೈ ಹಾಗೆ
ದೇಶಕ್ಕೆ ನರೇಂದ್ರ ಮೋದಿ ಅವರ ಹೇಗೋ ಹಾಗೆ ಕರ್ನಾಟಕಕ್ಕೆ ಬಿಎಸ್ ಯಡಿಯೂರಪ್ಪ ಅವರು, ಎಲ್ಲಾ ಸಮುದಾಯಗಳನ್ನು ಜೊತೆಗೆ ತೆಗದುಕೊಂಡ ಹೋದ ಅತ್ಯುತ್ತಮ ನಾಯಕ. ಅವರ ವಿರುದ್ಧ ವ್ಯವಸ್ಥಿತ ಸಂಚು ಮಾಡುವ ಮೂಲಕ ಅಧಿಕಾರದಿಂದ ದೂರ ಮಾಡಿ ಜೈಲಿಗೆ ಕಳುಹಿಸಿದರು. ನಮ್ಮ ಪಕ್ಷದವರೇ ಆರೋಪ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಎಸ್‌ವೈ ವಿರುದ್ಧ ಮಾತನಾಡಿದವರಿಗೆ ನೋಟಿಸ್ ನೀಡಿಲ್ಲ, ಆದರೆ ನಿಜ ಹೇಳುವ ನಮಗೆ ಮಾತ್ರ ನೋಟಿಸ್ ನೀಡಿದ್ದಾರೆ ಎಂದು ಅವರು ಕಿಡಿಕಾರಿದರು. ನಾನು ಯಾವುದೇ ಗೊಡ್ಡು ಬೆದರಿಕೆಗೆ ಜಗ್ಗಲ್ಲ, ಬಗ್ಗಲ್ಲ ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ ಎಂದು ಹೇಳಿದರು.
ಎಂಪಿ ರೇಣುಕಾಚಾರ್ಯ ಹೇಳಿಕೆಗಳು ಬಿಜೆಪಿ ಪಕ್ಷದ ನಾಯಕರಿಗೆ ಕಿರಿ ಕಿರಿ ಉಂಟು ಮಾಡುತ್ತಿವೆ ಎನ್ನುವುದು ಸುಳ್ಳಲ್ಲ. ರಾಜ್ಯದಲ್ಲಿ ಬಿಜೆಪಿ ಸೋತ ಬಳಿಕ ರೇಣುಕಾಚಾರ್ಯ ಅವರು ರಾಷ್ಟ್ರ ಮತ್ತು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications