ಬಿಜೆಪಿ ಸಮಾವೇಶದಲ್ಲಿ ಕೂಲ್‌ಡ್ರಿಂಕ್ಸ್ ವಾಹನದ ಮೇಲೆ ಮುಗಿಬಿದ್ದ ಜನ: ಕಣ್ಣೀರಿಟ್ಟ ವ್ಯಾಪಾರಿಗೆ ಪ್ರತಾಪ್ ಸಿಂಹ ನೆರವು
ಬೆಂಗಳೂರು, ಮೇ 1: ರಾಜ್ಯದಲ್ಲಿ ಬಿಸಿಲಿನ ಝಳದ ಜೊತೆಗೆ ಚುನಾವಣಾ ಕಾವು ಕೂಡ ಹೆಚ್ಚಾಗಿದೆ. ರಾಜ್ಯದಾದ್ಯಂತ ದಿನೇ ದಿನೇ ಸಮಾವೇಶಗಳು ಹೆಚ್ಚಾಗುತ್ತಿದ್ದು, ಸಾವಿರಾರು ಜನರು ವಿವಿಧ ಪಕ್ಷದ ಸಮಾವೇಶಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಸಮಾವೇಶಕ್ಕೆ ಬಂದಿದ್ದ ಜನ ಬಿಸಿಲಿನ ಝಳಕ್ಕೆ ಕೋಲ್ಡ್ ಡ್ರಿಂಕ್ಸ್ ವ್ಯಾಪಾರಿಯ ವಾಹನದ ಮೇಲೆ ಮುಗಿಬಿದ್ದು, ಆತ ಕಣ್ಣೀರಿಟ್ಟ ಘಟನೆ ಇತ್ತೀಚಿಗೆ ನಡೆದಿತ್ತು. ಇದೀಗ ಸಂಸದ ಪ್ರತಾಪ್ ಸಿಂಹ ಆತನಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಸಮಾವೇಶದ ವೇಳೆ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಸಮಾವೇಶಕ್ಕೆ ಬದಿದ್ದ ಜನರಿಗೆ ಕಾರ್ಯಕ್ರಮದ ಆಯೋಜಕರು ನೀರಿನ ವ್ಯವಸ್ಥೆ ಮಾಡಿರಲಿಲ್ಲ. ಮೊದಲೇ ಜನ ಬಿಸಿಲಿನ ಬೇಗೆಗೆ ಬಸವಳಿದ್ದು ಹೋಗಿದ್ದರು. ಜನರಿಗೆ ತುಂಬ ಬಾಯಾರಿಕೆಯಿಂದ ನೀರಿಗಾಗಿ ಪರದಾಡುತ್ತಿದ್ದರು.
ಸಮೀರ್ ಹಸನ್ ಸಾಬ್ ಗೆ ಹಣ ಕಳುಹಿಸಿದ್ದೇನೆ. Sorry brother. ಧನ್ಯವಾದಗಳು. pic.twitter.com/Ah1IVFmbuf
— Pratap Simha (@mepratap) April 30, 2023
ಇದೇ ವೇಳೆ ಸಮೀರ್ ಹಸನ್ ಸಾವ್ ಎನ್ನುವಾತ ಕೂಲ್ ಡ್ರಿಂಕ್ಸ್ ಇರುವ ವಾಹನ ಸಮಾವೇಶದ ಬಳಿ ವ್ಯಾಪಾರಕ್ಕೆ ತಗೆದುಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿಯವರೇ ಕೂಲ್ ಡ್ರಿಂಕ್ಸ್ ತರಿಸಿದ್ದಾರೆ ಎಂದುಕೊಂಡ ಜನ ಸಮೀರ್ ವಾಹನಕ್ಕೆ ಮುಗಿಬಿದ್ದು, ಕೂಲ್ ಡ್ರಿಂಕ್ಸ್, ಜ್ಯೂಸ್, ನೀರಿನ ಬಾಟಲ್ ತಗೆದುಕೊಂಡು ಹೋಗಿದ್ದರು.
ಸಾವಿರಾರು ರೂಪಾಯಿ ನಷ್ಟ ಅನುಭವಿಸಿ ಜನರ ವರ್ತನೆಯಿಂದ ಬೇಸತ್ತ ಸಮೀರ್ ಹಸನ್ ಸಾವ್ ಕಣ್ಣೀರು ಹಾಕಿದ್ದರು. ಜನರಿಂದ ತಪ್ಪಿಸಿಕೊಂಡು ಬರುವಾ ವೇಳೆ ಸಮೀರ್ ಕಣ್ಣೀರಿಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ನೆಟ್ಟಿಗರು ಕಾರ್ಯಕ್ರಮದ ಆಯೋಜಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಕೋಲ್ಡ್ ಡ್ರಿಂಕ್ಸ್ ವ್ಯಾಪಾರಿ ಸಮೀರ್ ಹಸನ್ ಸಾವ್ ನೆರವಿಗೆ ಧಾವಿಸಿದ್ದಾರೆ. ವ್ಯಾಪಾರಿ ಸಮೀರ್ ಅಕೌಂಟ್ಗೆ 35 ಸಾವಿರ ರೂಪಾಯಿ ಟ್ರಾನ್ಸ್ಫರ್ ಮಾಡಿರುವ ಪ್ರತಾಪ್ ಸಿಂಹ ಸ್ವಾರಿ ಬ್ರದರ್ ಎಂದು ಕ್ಷಮೆಯಾಚಿಸಿದ್ದಾರೆ. ಈ ಮೂಲಕ ಪ್ರತಾಪ್ ಸಿಂಹ ಮಾನವೀಯತೆ ಮರೆದಿದ್ದಾರೆ. ಈ ವಿಚಾರವನ್ನು ಪ್ರತಾಪ್ ಸಿಂಹ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಬಿಜೆಪಿ ಸಂಸದ ಪ್ರತಾಪ್ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications