ವಾಹನ ಅಪಘಾತ: ಅಕ್ರಮ ಸಂಬಂಧದ ಮಗುವಿಗೂ ಪರಿಹಾರದ ಹಕ್ಕಿದೆ; ಹೈಕೋರ್ಟ್
ಬೆಂಗಳೂರು, ಡಿಸೆಂಬರ್ 21; ಮೋಟಾರು ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಅಕ್ರಮ ಸಂಬಂಧದಿಂದ ಜನಿಸಿದ ಮಗು ಕೂಡ ಕಾನೂನಾತ್ಮಕ ಪ್ರತಿನಿಧಿಯಾಗಲಿದ್ದು, ಆತನೂ ಪರಿಹಾರದ ಹಕ್ಕು ಹೊಂದಿದ್ದಾನೆ.
ಹೀಗೆಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ಹಲವು ದೂರಗಾಮಿ ಪರಿಣಾಮಗಳನ್ನು ಬೀರಲಿದೆ.
ಬೆಂಗಳೂರಿನ ನಿವಾಸಿ ಮಲ್ಲಿಕಾರ್ಜುನ ಅಪಘಾತದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಪರಿಹಾರ ವಿಚಾರವಾಗಿ ಮೃತನ ಪೋಷಕರು, ಆತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಹಾಗೂ ಆಕೆಯ ಅಪ್ರಾಪ್ತ ಪುತ್ರ ರಾಜು (ಎಲ್ಲರ ಹೆಸರು ಬದಲಿಸಲಾಗಿದೆ) ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್. ಪಿ. ಸಂದೇಶ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಪರಿಹಾರ ಹೆಚ್ಚಳ; ಪ್ರಕರಣದಲ್ಲಿ ಅಪ್ರಾಪ್ತ ರಾಜುಗೆ ಪರಿಹಾರ ನೀಡಲು ನಿರಾಕರಿಸಿದ ಮೋಟಾರು ವಾಹನ ಅಪಘಾತ ನ್ಯಾಯಾಧಿಕರಣದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್, ರಾಜು ಸಹ ಪರಿಹಾರ ಪಡೆಯಲು ಅರ್ಹನಾಗಿದ್ದಾನೆ ಎಂದು ಆದೇಶಿಸಿದೆ.
2010ರಲ್ಲಿ ಮಲ್ಲಿಕಾರ್ಜುನ ಅವರು ಪ್ರಮಾಣಪತ್ರವನ್ನು ಮಾಡಿಸಿದ್ದು, ಆ ಮಹಿಳೆ ತನ್ನ ಪತ್ನಿಯಾಗಿದ್ದು, ರಾಜು ಎಂಬ ಮಗು ಜನನವಾಗಿರುವುದಾಗಿ ಘೋಷಿಸಿಕೊಂಡಿದ್ದರು. ಅಲ್ಲದೆ, 2012ರ ಮೇ 15ರಂದು ವಿತರಣೆಯಾದ ವಂಶವೃಕ್ಷದಲ್ಲಿ ಆಕೆ ಜೊತೆಗಿನ ಸಹ ಜೀವನವನ್ನು ಉಲ್ಲೇಖಿಸಿದ್ದರು.
ರಾಜುವಿನ ಶಾಲಾ ದಾಖಲಾತಿಯಲ್ಲಿ, ಮಗು 2006ರ ಆ.8ರಂದು ಜನಿಸಿದೆ ಎಂದು ಉಲ್ಲೇಖವಾಗಿದೆ. ಆದರೆ, ಮಲ್ಲಿಕಾರ್ಜುನ ಮತ್ತು ಆಕೆಯ ಸಂಬಂಧವು ಅಕ್ರಮವಾಗಿದ್ದು, ಅದರ ಭಾಗವಾಗಿ ರಾಜು ಜನಿಸಿದ್ದಾನೆ ಎಂದು ಹೈಕೋರ್ಟ್ ವಿವರಿಸಿದೆ.
ಜೊತೆಗೆ, ಮೃತ ಮಲ್ಲಿಕಾರ್ಜುನ ಅವರ ಪೋಷಕರಿಗೆ ಘೋಷಿಸಿದ್ದ 9.86 ಲಕ್ಷ ರೂ. ಪರಿಹಾರವನ್ನು 13,28,940 ರೂ. ಗೆ ಹೆಚ್ಚಳ ಮಾಡಿದೆ. ಅದರಲ್ಲಿ ಮೃತನ ಪೋಷಕರಿಗೆ ತಲಾ ಶೇ.30ರಷ್ಟು ಮತ್ತು ಅಪ್ರಾಪ್ತ ಮಗ ರಾಜುಗೆ ಶೇ.40ರಷ್ಟು ಪರಿಹಾರ (ದಾವೆ ಆರಂಭವಾದಾಗಿಂದ ಪರಿಹಾರ ಮೊತ್ತ ಪಾವತಿಸುವ ದಿನದವರೆಗೆ ಶೇ.6ರಷ್ಟು ಬಡ್ಡಿದರದೊಂದಿಗೆ ) ನೀಡಬೇಕು ಎಂದು ವಿಮಾ ಕಂಪನಿಗೆ ನಿರ್ದೇಶಿಸಿದೆ.
ಮೃತನ ಪೋಷಕರು ವೃದ್ಧರಾಗಿರುವುದರಿಂದ ಅವರ ಭಾಗದ ಶೇ.60ರಷ್ಟು ಪರಿಹಾರ ಹಣವನ್ನು ಸಂಪೂರ್ಣವಾಗಿ ಪಾವತಿಸಬೇಕು. ಮಗ ಅಪ್ರಾಪ್ತ ಆಗಿರುವುದರಿಂದ ಪ್ರಾಪ್ತನಾಗುವವರೆಗೆ ಅವನ ಭಾಗದ ಹಣವನ್ನು ನಿಶ್ಚಿತ ಠೇವಣಿ ಇಡಬೇಕು. ಮಗನ ಶೈಕ್ಷಣಿಕ ವೆಚ್ಚವನ್ನು ನಿಶ್ಚಿತ ಠೇವಣಿಯಿಂದ ಬರುವ ಬಡ್ಡಿ ಹಣವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ತಾಯಿ ಪಡೆದುಕೊಳ್ಳಬೇಕು. ವಿಮಾ ಕಂಪನಿಯು ಪರಿಹಾರ ಮೊತ್ತವನ್ನು ಕ್ಲೇಮುದಾರರಿಗೆ ಆರು ವಾರಗಳಲ್ಲಿ ಪಾವತಿಸಬೇಕು ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: 1996ರಲ್ಲಿ ವ್ಯಕ್ತಿಯೊಬ್ಬರನ್ನು ಮಹಿಳೆಯನ್ನು ಮದುವೆಯಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗು ಜನಿಸಿತ್ತು. 2006ರಲ್ಲಿ ಪತಿಯಿಂದ ದೂರವಾಗಿದ್ದ ಆಕೆ ಮಲ್ಲಿಕಾರ್ಜುನ ಜೊತೆಗೆ ಸಹ ಜೀವನ ನಡೆಸುತ್ತಿದ್ದರು. ಅವರಿಗೆ 2006ರ ಆ.8ರಂದು ಗಂಡುಮಗುವಿನ ಜನನವಾಗಿತ್ತು. 2010ರಲ್ಲಿ ಆಕೆ ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಮತ್ತೊಂದಡೆ 2007ರಲ್ಲಿ ಮಲ್ಲಿಕಾರ್ಜುನ, ಬೇರೊಬ್ಬ ಮಹಿಳೆಯೊಂದಿಗೆ ಮದುವೆಯಾಗಿದ್ದನು.
ಈ ಮಧ್ಯೆ ಮಲ್ಲಿಕಾರ್ಜುನ 2012ರ ಆ.23ರಂದು ರಸ್ತೆ ಅಪಘಾತದಿಂದ ಸಾವನ್ನಪ್ಪಿದ್ದನು. ಇದರಿಂದ ಮೃತನ ತಂದೆ-ತಾಯಿ ಮತ್ತು ಸೌಮ್ಯ, ಅಪ್ರಾಪ್ತ ಮಗ ಪರಿಹಾರ ಕೋರಿ ನ್ಯಾಯಾಧೀಕರಣಕ್ಕೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಪರಿಹಾರ ನಿರಾಕರಿಸಿದ ನ್ಯಾಯಾಧೀಕರಣದ ಕ್ರಮ ಪ್ರಶ್ನಿಸಿ ಆ ಮಹಿಳೆ ಮತ್ತವರ ಅಪ್ರಾಪ್ತ ಮಗ, ಹೈಕೋರ್ಟ್‌ಗೆ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು.












Click it and Unblock the Notifications