ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ! ಆದರೆ...
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಸಿನಿಮೀಯ ರೀತಿಯ ಘಟನೆಯೊಂದು ನಡೆದಿದೆ. ಆದರೆ, ದುರಂತ ಅಂತ್ಯ ಕಂಡಿದೆ. ಕರ್ನಾಟಕದ ಸಾರಿಗೆ ಬಸ್‌ವೊಂದರಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಬೆನ್ನಲ್ಲೇ ಜನ ಸಹಾಯಕ್ಕೆ ಬಂದಿದ್ದಾರೆ.
ಆದರೆ, ಕರ್ನಾಟಕದ ಸರ್ಕಾರಿ ಬಸ್‌ನಲ್ಲಿ ನಡೆದಿರುವ ಘಟನೆ ಇದೀಗ ಹೊರ ರಾಜ್ಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕದ ಸರ್ಕಾರಿ ಬಸ್‌ವೊಂದು ಸಂಚರಿಸುವಾಗಲೇ ಮಹಿಳೆಯೊಬ್ಬರು ಇಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಕನಕಪುರದಲ್ಲಿ ಈ ಘಟನೆ ನಡೆದಿದೆ. ರಜಿಯಾಬಾನು ಅವರು ಏಳು ತಿಂಗಳ ಗರ್ಭಿಣಿಯಾಗಿದ್ದರು.

ತಿಂಗಳ ತಪಾಸಣೆಗಾಗಿ ಅವರು ಕನಕಪುರದಿಂದ ಹುಣಸನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಚೆಕ್ ಅಪ್ ಮಾಡಿಸಿದ್ದಾರೆ. ಇಲ್ಲಿ ತಪಾಸಣೆ ನಡೆಸಿರುವ ವೈದ್ಯರು ಗರ್ಭಿಣಿ ಮಹಿಳೆಯ ಆರೋಗ್ಯ ತಪಾಸಣೆ ಮಾಡಿ, ಹೆಚ್ಚಿನ ಚಿಕಿತ್ಸೆಗಾಗಿ ಕನಕಪುರ ಜಿಲ್ಲಾಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ.
ವೈದ್ಯರ ಸಲಹೆಯಂತೆ ರಜಿಯಾಬಾನು ಅವರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕನಕಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆದರೆ, ಕಬ್ಬಾಳು ಜಾಗ ಸಮೀಪಿಸುತ್ತಿದ್ದಂತೆಯೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೆರಿಗೆ ನೋವಿನಿಂದ ಬಸ್‌ನಲ್ಲೇ ನೋವಿನಿಂದ ಕಿರುಚಾಡಿದ್ದಾರೆ. ಬಾನು ಅವರು ಹೆರಿಗೆ ನೋವಿನಿಂದ ಸಂಕಷ್ಟಪಡುತ್ತಿರುವುದನ್ನು ನೋಡಿ, ಜನ ಸಹಾಯಕ್ಕೆ ಬಂದಿದ್ದಾರೆ. ಸುತ್ತನಿಂತ ಮಹಿಳೆಯರು ಬಟ್ಟೆಗಳನ್ನು ಅಡ್ಡ ಮಾಡಿ ಸಹಾಯ ಮಾಡಿದ್ದಾರೆ. ಬಾನು ಅವರು ಬಸ್‌ನಲ್ಲೇ ಒಂದು ಹೆಣ್ಣು ಮಗು ಹಾಗೂ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಬಸ್‌ನಲ್ಲೇ ಹೆರಿಗೆಯಾದ ಕೂಡಲೇ ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಸೀದಾ ಕನಕಪುರ ಜಿಲ್ಲಾ ಆಸ್ಪತ್ರೆಗೆ ಬಾನು ಅವರನ್ನು ಕರೆದುಕೊಂಡು ಹೋಗಲಾಗಿದೆ. ಈ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್ ಹಾಗೂ ಕಂಡೆಕ್ಟರ್ ಅವರ ಸಹಾಯಕ್ಕೆ ಬಂದಿದ್ದಾರೆ. ವೇಗವಾಗಿ ಕನಕಪುರ ಜಿಲ್ಲಾಸ್ಪತ್ರಗೆ ಕರೆದುಕೊಂಡು ಹೋಗಲಾಗಿದ್ದು, ನವಜಾತ ಶಿಶುಗಳಿಗೆ ಹಾಗೂ ತಾಯಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಅವಧಿಗೂ ಮುನ್ನವೇ ಹೆರಿಗೆ (ಏಳು ತಿಂಗಳಿಗೆ) ಆಗಿರುವುದರಿಂದ ಮಕ್ಕಳ ತೂಕ ತುಂಬಾ ಕಡಿಮೆ ಇತ್ತು. ಹೀಗಾಗಿ, ಹೆಚ್ಚಿನ ಚಿಕಿತ್ಸೆಗಾಗಿ ನವಜಾತ ಶಿಶುಗಳು ಹಾಗೂ ತಾಯಿಯನ್ನು ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಲಾಗಿದೆ. ಹೀಗಾಗಿ, ಕನಕಪುರ ಜಿಲ್ಲಾಸ್ಪತ್ರೆ ವೈದ್ಯರ ಸೂಚನೆಯಂತೆ ವಾಣಿ ವಿಲಾಸ ಆಸ್ಪತ್ರೆಗೆ ಸೇರಿಸಲಾಗಿದೆ.
ಒಂದು ಮಗು ಸಾವು!: ಎಲ್ಲರ ಸಹಾಯ ಹಾಗೂ ನೆರವಿನ ನಂತರವೂ ಜನಿಸಿದ ಅವಳಿ ಮಕ್ಕಳಲ್ಲಿ ಒಂದು ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಆಸ್ಪತ್ರೆಯಲ್ಲಿ ಒಂದು ಮಗು ಸಾವನ್ನಪ್ಪಿದೆ. ಇನ್ನೊಂದು ಮಗುವಿನ ತೂಕ ಸಹ ಕಡಿಮೆ ಇದ್ದು, ಚಿಕಿತ್ಸೆ ಮುಂದುವರಿದಿದೆ.
ಇದೀಗ ಇನ್ನೊಂದು ಮಗು ಪ್ರಾಣಾಪಾಯಿಂದ ಪಾರಾಗಿದ್ದು, ಆರೋಗ್ಯವಾಗಿದೆ. ಮಗು ಹಾಗೂ ತಾಯಿ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ವಾಣಿ ವಿಲಾಸ್ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.












Click it and Unblock the Notifications