ಕ್ಯಾಬಿನೆಟ್ ಬಸ್ ಮಿಸ್ ಮಾಡಿಕೊಂಡ ಪ್ರಮುಖ ಕಾಂಗ್ರೆಸ್ ಶಾಸಕರು

ಬೆಂಗಳೂರು, ಜೂನ್ 6: ಕೊನೆಗೂ ಗಜ ಪ್ರಸವ ನಡೆದಿದೆ. ಹಲವು ದಿನಗಳಿಂದ ನಡೆಯುತ್ತಿದ್ದ ಸಂಪುಟ ವಿಸ್ತರಣೆಯ ಕಸರತ್ತು ಮೊದಲ ಹಂತದ ಮುಕ್ತಾಯ ಕಂಡಿದೆ. ಕಾಂಗ್ರೆಸಿನಿಂದ 15 ಮತ್ತು ಜೆಡಿಎಸ್ ನಿಂದ 10 ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಆದರೆ ಅಚ್ಚರಿಯ ರೀತಿಯಲ್ಲಿ ಕಾಂಗ್ರೆಸಿನ ಘಟಾನುಘಟಿಗಳು ಸಚಿವ ಸ್ಥಾನ ತಪ್ಪಿಸಿಕೊಂಡಿದ್ದಾರೆ. ಪ್ರಭಾವಿ ನಾಯಕರನ್ನು ಹೊರಗಿಟ್ಟು ಸಚಿವ ಸಂಪುಟ ರಚನೆ ಮಾಡಿರುವುದು, ಆಕಾಂಕ್ಷಿಗರ ಬೆಂಬಲಿಗರು ಮತ್ತು ಅವರ ಸಮುದಾಯದಲ್ಲಿ ಆಕ್ರೋಶ ಹುಟ್ಟುಹಾಕಿದೆ.

ಕಾಂಗ್ರೆಸಿನಿಂದ ಸಚಿವ ಸ್ಥಾನ ತಪ್ಪಿಸಿಕೊಂಡ ಪ್ರಮುಖ ನಾಯಕರ ಪಟ್ಟಿ ಇಲ್ಲಿದೆ.

ಎಂ.ಬಿ. ಪಾಟೀಲ್

ಎಂ.ಬಿ. ಪಾಟೀಲ್

ಕರ್ನಾಟಕದಲ್ಲಿ 'ಲಿಂಗಾಯತ' ಧರ್ಮಕ್ಕೆ ಪ್ರತ್ಯೇಕ ಅಸ್ತಿತ್ವ ನೀಡಬೇಕೆಂಬ ಚಳವಳಿಯ ನೇತೃತ್ವ ವಹಿಸಿದ್ದವರು ಎಂ.ಬಿ. ಪಾಟೀಲರು. ವಿಜಯಪುರದ ಖಡಕ್ ರಾಜಕಾರಣಿ ಎಂ.ಬಿ. ಪಾಟೀಲ್ ಕಳೆದ ಸಿದ್ದರಾಮಯ್ಯ ಸರಕಾರದಲ್ಲಿ ನೀರಾವರಿ ಸಚಿವರಾಗಿ ಸಾಕಷ್ಟು ಕೆಲಸ ಮಾಡಿದ್ದರು. ಈ ಬಾರಿಯೂ ಗೆದ್ದು ಐದನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು.

ಸಹಜವಾಗಿಯೇ ಬಬಲೇಶ್ವರ ಶಾಸಕ ಪಾಟೀಲರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಕೆಪಿಸಿಸಿ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ, ಒಂದಲ್ಲಾ ಒಂದು ದಿನ ಮುಖ್ಯಮಂತ್ರಿಯಾಗುತ್ತೇನೆ ಎಂಬ ಕನಸು ಕಾಣುತ್ತಿರುವ ಎಂ.ಬಿ. ಪಾಟೀಲರು ಸಚಿವ ಹುದ್ದೆಯನ್ನು ಪಡೆದುಕೊಳ್ಳುವಲ್ಲಿಯೇ ಎಡವಿದ್ದಾರೆ.

ಶಾಮನೂರು ಶಿವಶಂಕರಪ್ಪ

ಶಾಮನೂರು ಶಿವಶಂಕರಪ್ಪ

ಕೆಪಿಸಿಸಿಯ ಆಜೀವ ಖಜಾಂಚಿ, ಅತ್ಯಂತ ಹಿರಿಯ ರಾಜಕಾರಣಿ, ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ಶಾಮನೂರು ಶಿವಶಂಕರಪ್ಪ ಸಚಿವ ಸ್ಥಾನ ತಪ್ಪಿಸಿಕೊಂಡ ಪ್ರಮುಖರು. ಸಿದ್ದರಾಮಯ್ಯ ಸಂಪುಟದಲ್ಲಿ ತೋಟಗಾರಿಕೆ ಸಚಿವರಾಗಿದ್ದ ಶಿವಶಂಕರಪ್ಪರನ್ನು ಮಧ್ಯದಲ್ಲಿ ಕೈಬಿಟ್ಟು ಮಗ ಎಸ್.ಎಸ್. ಮಲ್ಲಿಕಾರ್ಜುನ್ ರನ್ನು ಸಚಿವರನ್ನಾಗಿ ಮಾಡಲಾಗಿತ್ತು.

ಈ ಬಾರಿ ಮಗ ಗೆದ್ದಿಲ್ಲ. ಹೀಗಿರುವಾಗ ಶಾಮನೂ
ರು ಸಚಿವರಾಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಅವರಿಗೆ ಸಂಪುಟ ಸೇರುವ ಭಾಗ್ಯ ಸಿಕ್ಕಿಲ್ಲ.

ರಾಮಲಿಂಗಾ ರೆಡ್ಡಿ

ರಾಮಲಿಂಗಾ ರೆಡ್ಡಿ

ಈ ಹಿಂದಿನ ಸಿದ್ದರಾಮಯ್ಯ ಸಂಪುಟದಲ್ಲಿ ದೊಡ್ಡ ಮಟ್ಟಕ್ಕೆ ಮಿಂಚಿದವರು ಬಿಟಿಎಂ ಕ್ಷೇತ್ರದ ಶಾಸಕ ರಾಮಲಿಂಗಾ ರೆಡ್ಡಿ. 7 ಬಾರಿ ಶಾಸಕರಾಗಿರುವ ಅವರು ಕಳೆದ ಅವಧಿಯಲ್ಲಿ ಸಾರಿಗೆ, ಗೃಹ ದಂಥ ಪ್ರಮುಖ ಖಾತೆಗಳನ್ನು ಪಡೆದಿದ್ದರು. ಇಷ್ಟೆಲ್ಲಾ ಹಿನ್ನೆಲೆ ಇಟ್ಟುಕೊಂಡಿರುವ ಹಿರಿಯ ರಾಜಕಾರಣಿ ರೆಡ್ಡಿ ಸಚಿವ ಸಂಪುಟ ಸೇರಿಲ್ಲ.

ರೋಷನ್ ಬೇಗ್

ರೋಷನ್ ಬೇಗ್

7 ಬಾರಿ ವಿಧಾನಸಭೆ ಪ್ರವೇಶಿಸಿರುವ ಶಿವಾಜಿನಗರ ಶಾಸಕ ರೋಷನ್ ಬೇಗ್ ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ಮುಸ್ಲಿಂ ಸಮುದಾಯದಿಂದ ಬಂದಿರುವ ಅವರು ಕನಿಷ್ಠ ಸಚಿವರಾಗುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟವರಿಗೆ ಸಚಿವ ಸಂಪುಟ ಸೇರುವುದೇ ಸಾಧ್ಯವಾಗಿಲ್ಲ.

ಎಚ್.ಕೆ. ಪಾಟೀಲ್

ಎಚ್.ಕೆ. ಪಾಟೀಲ್

6 ಬಾರಿಯ ವಿಧಾನ ಪರಿಷತ್ ಸದಸ್ಯ, ಎರಡು ಬಾರಿ ಗದಗದಿಂದ ಗೆದ್ದಿರುವ ಎಚ್.ಕೆ. ಪಾಟೀಲ್ ಸಚಿವ ಸ್ಥಾನ ಕೈತಪ್ಪಿಸಿಕೊಂಡ ಮತ್ತೋರ್ವ ಪ್ರಮುಖರು. ಇಲ್ಲಿನ ಹುಲಕೋಟಿಯ ಪಾಟೀಲ್ ಕುಟುಂಬಕ್ಕೆ ಸೇರಿರುವ ಎಚ್.ಕೆ ಅವರ ತಂದೆಯೂ 4 ಬಾರಿ, ಅವರ ದೊಡ್ಡಪ್ಪನ ಮಗ ಡಿ.ಆರ್. ಪಾಟೀಲ್ 3 ಬಾರಿ ಶಾಸಕರಾಗಿದ್ದರು.

ಹೀಗೆ ಕಾಂಗ್ರೆಸ್ ಜೊತೆಗೆ ಹಿಂದಿನಿಂದಲೂ ಅಂಟಿಕೊಂಡೇ ಬೆಳೆದ ಕುಟುಂಬ ಪಾಟೀಲರದ್ದು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಎಚ್.ಕೆ. ಪಾಟೀಲ್ ಸಚಿವರಾಗಿದ್ದರು. ಆದರೆ ಈ ಬಾರಿ ಅವರನ್ನು ಸಂಪುಟದೊಳಕ್ಕೆ ಸೇರಿಸಿಕೊಂಡಿಲ್ಲ.

ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ

ಪರಿಶಿಷ್ಟ ಪಂಗಡದಿಂದ ಗೆದ್ದು ಬಂದಿರುವ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಸಚಿವ ಸ್ಥಾನ ತಪ್ಪಿಸಿಕೊಂಡ ಮತ್ತೋರ್ವ ಪ್ರಮುಖರಾಗಿದ್ದಾರೆ. ಪ್ರಭಾವಿ ಜಾರಕಿಹೊಳಿ ಕುಟುಂಬಕ್ಕೆ ಸೇರಿರುವ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಆಪ್ತರೂ ಹೌದು.

ಇಷ್ಟೆಲ್ಲಾ ಹಿನ್ನೆಲೆಗಳಿದ್ದರೂ ಸಚಿವರಾಗಲು ಇವೆಲ್ಲಾ ಸತೀಶ್ ಜಾರಕಿಹೊಳಿಯವರ ಸಹಾಯಕ್ಕೆ ಬಂದಿಲ್ಲ.

ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್

ಕೆಪಿಸಿಸಿಯ ದಕ್ಷಿಣ ವಿಭಾಗದ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಗಾಂಧಿನಗರದ ಶಾಸಕ, ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಪುತ್ರರಾಗಿರುವ ದಿನೇಶ್ ಈ ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರಾಗಿದ್ದರು. ನಂತರ ಅವರನ್ನು ಪಕ್ಷದ ಕೆಲಸಕ್ಕೆ ನಿಯೋಜನೆ ಮಾಡಲಾಗಿತ್ತು.

ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿದ್ದು, ಇದೇ ಸಮಯದಲ್ಲಿ ಸಚಿವ ಸ್ಥಾನವನ್ನು ಅವರು ತಪ್ಪಿಸಿಕೊಂಡಿದ್ದಾರೆ.

ಎಸ್.ಆರ್. ಪಾಟೀಲ್

ಎಸ್.ಆರ್. ಪಾಟೀಲ್

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಮತ್ತೋರ್ವ ಹಿರಿಯ ನಾಯಕ ಎಸ್.ಆರ್. ಪಾಟೀಲ್ ಅವರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಇತ್ತೀಚೆಗಷ್ಟೇ ಅವರು ಉತ್ತರ ಕರ್ನಾಟಕದಲ್ಲಿ ಪಕ್ಷದ ಸೋಲಿಗೆ ಹೊಣೆ ಹೊತ್ತು ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆದರೆ ಇದರ ಹಿಂದೆ ಸಂಪುಟ ಸೇರುವ ಗೌಪ್ಯ ಉದ್ದೇಶವೂ ಇತ್ತು. ಆದರೆ ಅವರ ಆಸೆ ಈಡೇರಿಲ್ಲ. ಅತ್ತ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ, ಇತ್ತ ಸಚಿವ ಸ್ಥಾನವನ್ನೂ ಅವರು ಕಳೆದುಕೊಂಡಿದ್ದಾರೆ.

ಸಿ.ಎಂ. ಇಬ್ರಾಹಿಂ

ಸಿ.ಎಂ. ಇಬ್ರಾಹಿಂ

ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯನವರ ಹಿಂದೆ ಮುಂದೆ ಕಾಣಿಸಿಕೊಂಡಿದ್ದ ಏಕೈಕ ವ್ಯಕ್ತಿ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ. ರಾಜ್ಯದಲ್ಲಿ ತಮ್ಮ ಹಾಸ್ಯ ಭರಿತ ಮಾತುಗಳು ಹಾಗೂ ಹಲವು ಕಾರಣಗಳಿಗಾಗಿ ವಿಶೇಷವಾಗಿ ಗುರುತಿಸಿಕೊಳ್ಳುವ ಸಿ.ಎಂ. ಇಬ್ರಾಹಿಂ ಸಚಿವರಾಗಬಹುದು ಎಂಬ ಲೆಕ್ಕಾಚಾರಗಳಿತ್ತು. ಆದರೆ ಅದೀಗ ಸುಳ್ಳಾಗಿದ್ದು ಇಬ್ರಾಹಿಂ ಪರಿಷತ್ ಗೆ ಮಾತ್ರ ಸೀಮಿತರಾಗಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್

ಲಕ್ಷ್ಮೀ ಹೆಬ್ಬಾಳ್ಕರ್

ಕರ್ನಾಟಕ ಪ್ರದೇಶ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಮೊದಲ ಬಾರಿಗೆ ಗೆದ್ದು ಬಂದಿದ್ದರು. ಕಾಂಗ್ರೆಸ್ ಒಳಗೆ ದೆಹಲಿ ಮತ್ತು ರಾಜ್ಯದಲ್ಲಿ ಸಾಕಷ್ಟು ಒಡನಾಟ ಇಟ್ಟುಕೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳಾ ಕೋಟಾದಲ್ಲಿ ಸಚಿವರಾಗುವ ಕನಸು ಕಾಣುತ್ತಿದ್ದರು. ಆದರೆ ಈ ಕನಸು ನನಸಾಗಿಲ್ಲ.

ಇನ್ನೂ ಹಲವರಿಗಿಲ್ಲ ಸಚಿವ ಸ್ಥಾನ

ಇನ್ನೂ ಹಲವರಿಗಿಲ್ಲ ಸಚಿವ ಸ್ಥಾನ

ಇವರೆಲ್ಲಾ ಲ್ಲದೆ ಇನ್ನೂ ಹಲವು ಸಂಪುಟ ಸೇರುವಲ್ಲಿ ವಿಫಲರಾಗಿದ್ದಾರೆ. ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವರಾಗಿದ್ದ ಎಚ್.ಎಂ ರೇವಣ್ಣ, ಈಶ್ವರ್ ಖಂಡ್ರೆ, ತನ್ವೀರ್ ಸೇಠ್, ಎಂ. ಕೃಷ್ಣಪ್ಪ, ಪಿ.ಟಿ. ಪರಮೇಶ್ವರ್ ನಾಯ್ಕ್ ಸಂಪುಟ ಸೇರಿಲ್ಲ.

ಇವರಲ್ಲದೆ ಬೇರೆ ಬೇರೆ ಕಾರಣಕ್ಕೆ ಸಂಪುಟ ಸೇರಬಹುದು ಎಂದುಕೊಂಡಿದ್ದ ಭೈರತಿ ಬಸವರಾಜ್, ಎನ್.ಎ. ಹ್ಯಾರಿಸ್, ಎಚ್.ಟಿ. ಸೋಮಶೇಖರ್, ಅಜಯ್ ಧರ್ಮಸಿಂಗ್, ಆನಂದ್ ಸಿಂಗ್, ವಿ.ಎಸ್. ಉಗ್ರಪ್ಪ, ಮುನಿರತ್ನ, ರೂಪಾ ಶಶಿಧರ್ ಮೊದಲಾದವರೂ ಸಚಿವ ಸ್ಥಾನ ತಪ್ಪಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+