Monsoon: ಮತ್ತೆ ಮುಂಗಾರು ಚುರುಕು, ಜೂನ್ 22ರಿಂದ ಕರ್ನಾಟಕದ ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆ
ಬೆಂಗಳೂರು: ಆರಂಭದಲ್ಲಿ ಅಬ್ಬರಿಸಿ ಸದ್ಯಕ್ಕೆ ಕೊಂಚ ಸೈಲೆಂಟ್ ಆಗಿದ್ದ ಮುಂಗಾರು ಮಳೆಗೆ ಈಗ ಮತ್ತೆ ಮರುಜೀವ ಬಂದಿದೆ. ಆದರೆ ಈ ಬಾರಿ ಮುಂಗಾರಿನ ವೇಗ ಮತ್ತು ತೀವ್ರತೆ ಮೊದಲ ಹಂತಕ್ಕಿಂತಲೂ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ ಜೂನ್ 22 ಮತ್ತು 23ರ ವೇಳೆಗೆ ಕರಾವಳಿ ಕರ್ನಾಟಕದ ಭಾಗದಲ್ಲಿ ಭಾರಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದ್ದು, ಪ್ರವಾಸ ಹೊರಡುವವರು ಮತ್ತು ಕರಾವಳಿ ಜಿಲ್ಲೆಗಳ ಜನರು ಈಗಿನಿಂದಲೇ ಅಲರ್ಟ್ ಆಗಬೇಕಿದೆ. ಮಳೆ ಎಲ್ಲೆಲ್ಲಿ ಹಾನಿ ಮಾಡಬಹುದು? ಇಲಾಖೆಯ ವರದಿಯಲ್ಲೇನಿದೆ? ಇಲ್ಲಿ ತಿಳಿಯಿರಿ.
ರಾಜ್ಯದಲ್ಲಿ ಮುಂಗಾರು ಸದ್ಯಕ್ಕೆ ಕೊಂಚ ಬಿಡುವು ನೀಡಿದ್ದರೂ, ಶೀಘ್ರದಲ್ಲೇ ಪಶ್ಚಿಮ ಕರಾವಳಿ ಭಾಗದಲ್ಲಿ ಮತ್ತೆ ಅಬ್ಬರಿಸಲು ಸಜ್ಜಾಗಿದೆ. ಜೂನ್ 22 ಮತ್ತು 23ರ ಸುಮಾರಿಗೆ ಮುಂಗಾರು ಮಾರುತಗಳು ಮತ್ತೆ ಚುರುಕುಗೊಳ್ಳಲಿದ್ದು, ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಪ್ರಸ್ತುತ ಮುಂಗಾರು ಮಳೆಯ ತೀವ್ರತೆಯು ಪಶ್ಚಿಮ ಕರಾವಳಿಯಿಂದ ಬಂಗಾಳ ಕೊಲ್ಲಿಯ ಕಡೆಗೆ ಸ್ಥಳಾಂತರಗೊಂಡಿದ್ದು, ಅಲ್ಲಿ ಬಲವಾದ ನೈಋತ್ಯ ಮಾರುತಗಳು ಮತ್ತು ದಟ್ಟವಾದ ಮೋಡಗಳು ಸೃಷ್ಟಿಯಾಗುತ್ತಿವೆ.

ಎಲ್ಲೆಲ್ಲಿ ಮಳೆ?
ಆರಂಭಿಕ ಹಂತದಲ್ಲಿ ಕರಾವಳಿಯುದ್ದಕ್ಕೂ ವ್ಯಾಪಕವಾಗಿ ಸುರಿದಿದ್ದ ಮುಂಗಾರು ಮಳೆ, ಸದ್ಯಕ್ಕೆ ಕೊಂಚ ಮೌನವಾಗಿದೆ. ಇತ್ತೀಚಿನ ವರದಿಯ ಪ್ರಕಾರ, ಕೇವಲ ಮಂಗಳೂರು ಮತ್ತು ಕೇರಳದ ಕಣ್ಣೂರು ನಡುವಿನ ಕರಾವಳಿ ಪಟ್ಟಿಯಲ್ಲಿ ಮಾತ್ರ ತೀವ್ರ ಗುಡುಗು ಸಹಿತ ಮಳೆ ದಾಖಲಾಗಿದೆ. ಇದನ್ನು ಹೊರತುಪಡಿಸಿದರೆ, ಕೇರಳದ ತ್ರಿಶೂರ್ನಿಂದ ತಿರುವನಂತಪುರದವರೆಗೆ ಮತ್ತು ತಮಿಳುನಾಡಿನ ನಾಗರ್ಕೋವಿಲ್ ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದೆ.
ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ-ರೇಂಜ್ ವೆದರ್ ಫೋರ್ಕಾಸ್ಟ್ಸ್ (ECMWF) ನೀಡಿರುವ ಮುನ್ಸೂಚನೆಗಳ ಪ್ರಕಾರ, ಜೂನ್ 22 ಮತ್ತು 23ರ ವೇಳೆಗೆ ಹೊಸ ಮುಂಗಾರು ಅಲೆ ತೀರ ಪ್ರದೇಶಗಳನ್ನು ಪ್ರವೇಶಿಸಲಿದೆ. ಈ ಮಳೆಯು ಅತ್ಯಂತ ತೀವ್ರವಾಗಿರಲಿದ್ದು, ಇದರ ಪ್ರಭಾವ ಮೊದಲು ಕರಾವಳಿ ಕರ್ನಾಟಕ ಮತ್ತು ಗೋವಾದಲ್ಲಿ ಕಂಡುಬರಲಿದೆ. ಕರಾವಳಿ ಕರ್ನಾಟಕದಲ್ಲಿ ಆರಂಭವಾಗಲಿರುವ ಈ ಭಾರಿ ಮಳೆಯು, ನಂತರ ಉತ್ತರದ ಕಡೆಗೆ ಚಲಿಸಲಿದೆ. ಮಹಾರಾಷ್ಟ್ರದ ಕೊಂಕಣ ಭಾಗ, ಮುಂಬೈ ಮತ್ತು ದಕ್ಷಿಣ ಗುಜರಾತ್ನ ಸೂರತ್ವರೆಗೂ ಈ ಮಳೆ ಮಾರುತಗಳು ವ್ಯಾಪಿಸಲಿದ್ದು, ಜೂನ್ ಕೊನೆಯ ವಾರದಲ್ಲಿ ಪಶ್ಚಿಮ ಕರಾವಳಿಯುದ್ದಕ್ಕೂ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಯಾವ ಜಿಲ್ಲೆಗಳಿಗೆ ಅಲರ್ಟ್?
ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ಮುಂದಿನ 7 ದಿನಗಳ ಕಾಲ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹಾಗೂ ಜೋರಾದ ಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮುಂಗಾರಿನ ಆರ್ಭಟ ಜೋರಾಗಿರಲಿದ್ದು, ಜೂನ್ 15ರವರೆಗೆ ನಿರಂತರವಾಗಿ ಭಾರಿ ಮಳೆಯಾಗಲಿದೆ.
ಕರಾವಳಿಯ ಹಲವು ಪ್ರದೇಶಗಳಲ್ಲಿ 'ಅತಿ ಭಾರಿ ಮಳೆ' ಬೀಳುವ ಸಾಧ್ಯತೆ ಇರುವುದರಿಂದ ಇಲಾಖೆಯು ತೀವ್ರ ಮುನ್ನೆಚ್ಚರಿಕೆ ನೀಡಿದೆ. ತೀರ ಪ್ರದೇಶದ ಜನರು ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚಿಸಲಾಗಿದೆ. ಕರಾವಳಿ ಮಾತ್ರವಲ್ಲದೆ ರಾಜ್ಯದ ಒಳನಾಡು ಜಿಲ್ಲೆಗಳಲ್ಲೂ ಮಳೆಯ ಪ್ರಭಾವ ಮುಂದುವರಿಯಲಿದೆ. ಜೂನ್ 13ರವರೆಗೆ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಗುಡುಗು ಮತ್ತು ಸಿಡಿಲಿನ ಮುನ್ನೆಚ್ಚರಿಕೆ ನೀಡಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ನಗರದ ವಿವಿಧ ಭಾಗಗಳಲ್ಲಿ ಹಠಾತ್ ಧಾರಾಕಾರ ಮಳೆ ಸುರಿದಿದ್ದು, ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ವಾಹನ ಸವಾರರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಯಿತು. ಕಳೆದ ಕೆಲವು ದಿನಗಳಿಂದ ಸೆಕೆಯಿಂದ ಕಂಗಾಲಾಗಿದ್ದ ಬೆಂಗಳೂರಿಗರಿಗೆ ಈ ಮಳೆ ತಂಪು ನೀಡಿದೆಯಾದರೂ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಲು ಕಾರಣವಾಗಿದೆ.













Click it and Unblock the Notifications