ಜುಲೈ 4 ರಿಂದ ವಿಧಾನ ಮಂಡಲ ಅಧಿವೇಶನ

Written By:
Subscribe to Oneindia Kannada

ಬೆಂಗಳೂರು, ಜೂನ್ 8: ರಾಜ್ಯ ವಿಧಾನಮಂಡಲದ ಮುಂದುವರಿದ ಬಜೆಟ್ ಅಧಿವೇಶನವನ್ನು ಜುಲೈ 4 ರಿಂದ 29 ರವರೆಗೆ ವಿಧಾನಸೌಧದಲ್ಲಿ ನಡೆಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು ಎಂದು ಉನ್ನತ ಶಿಕ್ಷಣ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

karnataka

ರಾಜ್ಯದಲ್ಲಿರುವ ಚಿಲ್ಲರೆ ವಹಿವಾಟು ಮಾರುಕಟ್ಟೆಗೆ ಪ್ರೊತ್ಸಾಹ ನೀಡಲು ಹಾಗೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನೂತನ ಚಿಲ್ಲರೆ ವಹಿವಾಟು ನೀತಿ ( ಕರ್ನಾಟಕ ರೀಟೇಲ್ ಟ್ರೇಡ್ ಪಾಲಿಸಿ ) ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಕರ್ನಾಟಕ ಚಿಲ್ಲರೆ ವಹಿವಾಟು ನೀತಿ ಜಾರಿಗೆ ಮುನ್ನ ಹಲವಾರು ಇಲಾಖೆಗಳ ಅಭಿಪ್ರಾಯ ಹಾಗೂ ವಾಣಿಜ್ಯ ಮಂಡಳಿಯ ಸಲಹೆ ಹಾಗೂ ಮಾರ್ಗದರ್ಶನ ಪಡೆದಿದ್ದು, ನೂತನ ನೀತಿಯನ್ನು ಜಾರಿಗೆ ತರುವ ಮುನ್ನ ಸಾರ್ವಜನಿಕರ ಹಾಗೂ ಸಂಸ್ಥೆಗಳ ಸಲಹೆಗಳನ್ನೂ ಕೂಡಾ ಪಡೆದು ಅನುಷ್ಠಾನಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ಚಿಲ್ಲರೆ ವಹಿವಾಟಿನಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಅಳವಡಿಸಲಾಗಿದೆ. ಚಿಲ್ಲರೆ ವಹಿವಾಟು ಮಾಡುವವರು ದವಸ-ಧಾನ್ಯಗಳ ಸಂಗ್ರಹ, ದಾಸ್ತಾನು ಮಿತಿಯನ್ನು ಹೆಚ್ಚಳ ಮಾಡುವುದರ ಜೊತೆಗೆ ನಾಗರಿಕರಿಗೆ ತೊಂದರೆ ಆಗದಂತೆ ಅಗತ್ಯ ಸೇವಾ ಕಾಯಿದೆ ಅನ್ವಯ ಕ್ರಮ ಜರುಗಿಸುವ ಅಧಿಕಾರವನ್ನು ರಾಜ್ಯ ಸರ್ಕಾರ ಹೊಂದಿದೆ. ನಗರ ಪ್ರದೇಶಗಳಲ್ಲಿ ಚಿಲ್ಲರೆ ವಹಿವಾಟು ನಡೆಸುವ ಅಂಗಡಿಗಳನ್ನು ಕೈಗಾರಿಕಾ ಸ್ಥಾನಮಾನ ನೀಡಿ ಹಲವು ಸುಧಾರಣಾ ಕ್ರಮಗಳನ್ನು ಅನುಷ್ಠಾನಗೊಳಿಸಲು ಸಂಪುಟ ನಿರ್ಧಾರ ಕೈಗೊಂಡಿದೆ ಎಂದರು.

ಕೇಂದ್ರ ಸರ್ಕಾರ ಬಂಡವಾಳ ಹೂಡಿಕೆದಾರರಿಗೆ ಸಾಕಷ್ಟು ಪ್ರೋತ್ಸಾಹ ನೀಡಿರುವ ಹಿನ್ನೆಲೆಯಲ್ಲಿ ಚಿಲ್ಲರೆ ವಹಿವಾಟಿನಲ್ಲಿ ಹೆಚ್ಚು ಬಂಡವಾಳ ಹೂಡಿಕೆಗೆ ಅವಕಾಶ ಲಭ್ಯವಾಗಲಿದೆ. ಚಿಲ್ಲರೆ ವಹಿವಾಟಿನಲ್ಲಿ ಶಿಸ್ತು ತರುವ ಉದ್ದೇಶದಿಂದ ನೂತನ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಅವರು ಸಮರ್ಥಿಸಿಕೊಂಡರು. ಒಂದು ವೇಳೆ ನೂತನ ನೀತಿಯಿಂದ ಗ್ರಾಹಕರಿಗೆ ತೊಂದರೆಯಾದಲ್ಲಿ ಅದನ್ನು ವಾಪಸ್ ಪಡೆಯುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾದವ್ ಅವರ ಅಧಿಕಾರವಧಿ ಇದೇ ಜೂನ್ 30 ಕ್ಕೆ ಮುಕ್ತಾಯಗೊಳ್ಳಲಿದೆ. ಅವರ ಉತ್ತರಾಧಿಕಾರಿಯನ್ನಾಗಿ ಸೂಕ್ತ ಅಭ್ಯರ್ಥಿಯನ್ನು ನೇಮಕ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಗೆ ಬಿಟ್ಟುಕೊಡಲಾಗಿದೆ.

ಸಚಿವ ಸಂಪುಟ ಸಭೆಯ ಇತರ ತೀರ್ಮಾನಗಳು
* ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಿಂದ ಬೆಂಗಳೂರಿನಲ್ಲಿ ಸಿಪೆಟ್ ಸಂಸ್ಥೆಯು 87 ಕೋಟಿ ರೂ ವೆಚ್ಚದಲ್ಲಿ ಅಡ್ವಾನ್ಸ್ ಪಾಲಿಮರ್ ಡಿಸೈನ್ ಅಂಡ್ ಡೆವೆಲಪ್ ಮೆಂಟ್ ರೀಸರ್ಚ್ ಲ್ಯಾಬೋರೇಟರಿ ಸ್ಥಾಪನೆ
* ಅನರ್ಹ ಪಡಿತರ ಚೀಟಿಗಳು ಅಥವಾ ಸಾರ್ವಜನಿಕ ವಿತರಣೆಯ ಪಡಿತರ ವಸ್ತುಗಳ ಅನಧಿಕೃತ ದಾಸ್ತಾನು ಹಾಗೂ ಸಾಗಾಣಿಕೆ ಬಗ್ಗೆ ಮಾಹಿತಿ ನೀಡುವ ಮಾಹಿತಿದಾರರಿಗೆ ಬಹುಮಾನ ನೀಡುವ ಯೋಜನೆ ಮುಂದುವರಿಕೆ
* ಸಾರ್ವಜನಿಕ ಸಹಭಾಗಿತ್ವದಲ್ಲಿ ಪಡಿತರ ವಸ್ತುಗಳ ಅಕ್ರಮ ಸಾಗಾಣಿಕೆ ತಡೆಗಟ್ಟಲು ಕ್ರಮ
* ರಾಜ್ಯದಲ್ಲಿ ಎಲ್ಲಾ ವರ್ಗದವರಿಗೂ ಕೈಗೆಟುಕುವ ದರದಲ್ಲಿ ವಸತಿ ದೊರೆಯುವಂತೆ ಮಾಡುವ ಕರ್ನಾಟಕ ಧಾರಣೀಯ ವಸತಿ ನೀತಿ - 2016 ಗೆ ಒಪ್ಪಿಗೆ
* ರಾಜ್ಯದಲ್ಲಿರುವ ಸುಮಾರು 2,804 ಕೊಳಗೇರಿ ಅಭಿವೃದ್ಧಿಗೆ ಕ್ರಮ. ನಿವಾಸಿಗಳಿಗೆ ಉತ್ತಮ ಮನೆ ನಿರ್ಮಾಣ ಮಾಡುವುದರ ಜೊತೆಗೆ ಎಲ್ಲಾ ಸೌಲಭ್ಯ ನೀಡಿಕೆ.
* ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ರಸ್ತೆ, ಒಳಚರಂಡಿ, ಮೇಲು ಸೇತುವೆ ಮತ್ತು ಕೆಳ ಸೇತುವೆ ಸೇರಿದಂತೆ ಸಮಗ್ರ ಬೆಂಗಳೂರು ಅಭಿವೃದ್ಧಿಗಾಗಿ 2016-17 ಮತ್ತು 2017-18 ಸಾಲಿನಲ್ಲಿ ವಿಶೇಷ ಮೂಲಭೂತ ಸೌಕರ್ಯಕ್ಕೆ ಬಂಡವಾಳ ಬೆಂಬಲ ಯೋಜನೆಗೆ ಸಂಪುಟ ಸಮ್ಮತಿ.
* ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಿಗೆ ವಿಜಯನಗರ ಕಾಲುವೆಯಿಂದ ಸರಬರಾಜು ಆಗುತ್ತಿರುವ ನೀರನ್ನು ಸಂಗ್ರಹ ಮಾಡಲು ಈ ಕಾಲುವೆಯನ್ನು 432.55 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Results of Karnataka Cabinet Meeting held on Wednesday, 8 July. Monsoon session of the Assembly will be held between 4 July and 29th July 2016. The Law and Parliamentary affairs minister T B Jayachandra briefed media persons in Bengaluru. The Chief Minister Siddaramaiah led Cabinet decisions listed.
Please Wait while comments are loading...