ಮುಂಗಾರು 2021; ಶೀಘ್ರವೇ ಬೆಂಗಳೂರಿನಲ್ಲಿ ಮುಂಗಾರು ಮಳೆ ಅನುಭವ
ಬೆಂಗಳೂರು, ಜೂನ್ 04: ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಈಗಾಗಲೇ ಮುಂಗಾರು ಕೇರಳ ಪ್ರವೇಶಿಸಿದೆ. ಕೇರಳ ನಂತರ ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸುವ ಮುನ್ಸೂಚನೆ ನೀಡಲಾಗಿದ್ದು, ರಾಜ್ಯದ ಹಲವೆಡೆ ಗುರುವಾರ ಮಳೆಯಾಗಿದೆ.
ಬೆಂಗಳೂರು ನಗರದಲ್ಲಿಯೂ ಶೀಘ್ರವೇ ಮುಂಗಾರು ಮಳೆ ಅನುಭವವಾಗಲಿದೆ ಎಂದು ಇಲಾಖೆ ತಿಳಿಸಿದೆ. ಜೂನ್ 6 ಅಥವಾ 7 ರಂದು ಮುಂಗಾರು ಕರ್ನಾಟಕ ಪ್ರವೇಶಿಸಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ 72 ಗಂಟೆಗಳ ನಂತರ ಮುಂಗಾರು ಅನುಭವವಾಗುವುದು ಎಂದು ತಿಳಿಸಿದ್ದಾರೆ. ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೆ ಮುಂಗಾರು ಮಳೆಯಾಗಲಿದ್ದು, ಈ ವರ್ಷ ಮಳೆ ಸಾಮಾನ್ಯವಾಗಿರುವುದಾಗಿ ಹವಾಮಾನ ಇಲಾಖೆ ವರದಿ ನೀಡಿದೆ. ನೈಋತ್ಯ ಮುಂಗಾರು ದಕ್ಷಿಣ ಭಾರತ ಹಾಗೂ ಉತ್ತರ ಭಾರತದಲ್ಲಿ ಸಾಮಾನ್ಯ ರೀತಿಯಲ್ಲಿರಲಿದ್ದು ಕೇಂದ್ರ ಭಾಗದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ ಎಂದು ತಿಳಿಸಿದೆ. ಮುಂದೆ ಓದಿ...

ರಾಜ್ಯದ ಎಲ್ಲೆಲ್ಲಿ ಮಳೆ ಆರಂಭ
ಕರ್ನಾಟಕದ ದಕ್ಷಿಣ ಭಾಗಗಳಲ್ಲಿ, ಅಂದರೆ ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರ ಹಾಗೂ ಬೆಂಗಳೂರಿನಲ್ಲಿ ಮುಂದಿನ 36 ಗಂಟೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಶೀಘ್ರವೇ ಅಧಿಕ ಮಳೆಯಾಗುವುದಾಗಿ ತಿಳಿಸಿದೆ.
ಮುಂಗಾರು 2021; ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭ ಯಾವಾಗ?

ಗುರುವಾರ ಎಲ್ಲೆಲ್ಲಿ ಮಳೆಯಾಗಿದೆ?
ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗಗಳಲ್ಲಿ ಮಳೆಯಾಗಿದೆ. ಮಂಗಳೂರಿನಲ್ಲಿ 114 ಎಂಎಂ, ಕಾರವಾರ 70 ಎಂಎಂ, ಹಾಸನ 33 ಎಂಎಂ, ಮೈಸೂರು 56 ಎಂಎಂ ಹಾಗೂ ಬೆಂಗಳೂರಿನಲ್ಲಿ 52.4 ಎಂಎಂ ಮಳೆಯಾಗಿದೆ.

ಬೆಂಗಳೂರಿನಲ್ಲಿ ಸಾಮಾನ್ಯ ಮಳೆ
ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ 128 ಎಂಎಂ ಮಳೆಯಾಗಿತ್ತು. ಜೂನ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಸಾಮಾನ್ಯ ಮಳೆಯಾಗಲಿದ್ದು, ತಿಂಗಳಿಗೆ 89 ಎಂಎಂ ಮಳೆಯಾಗುವುದಾಗಿ ಸೂಚನೆ ನೀಡಿದೆ. ಮುಂದಿನ ಮೂರು ದಿನಗಳ ಕಾಲ ಸಂಜೆ ಹಾಗೂ ರಾತ್ರಿ ವೇಳೆ ಗುಡುಗು ಮಿಂಚು ಸಹಿತ ಮಳೆಯಾಗುವುದಾಗಿ ತಿಳಿಸಿದೆ.
ಜೂನ್ 3ರಂದು ಮುಂಗಾರು ಪ್ರವೇಶಕ್ಕೆ ವಾತಾವರಣ ಪಕ್ಕಾ

ಕರ್ನಾಟಕದಲ್ಲಿ ಜೂನ್ 7ರಿಂದ ಮುಂಗಾರು
ಕೇರಳದಲ್ಲಿ ಎರಡು ದಿನಗಳ ಅವಧಿ ಮುಂಗಾರು ವಿಳಂಬವಾದಂತೆ ಕರ್ನಾಟಕದಲ್ಲಿಯೂ ಎರಡು ದಿನಗಳ ಕಾಲ ತಡವಾಗಲಿದೆ. ಕರ್ನಾಟಕದಲ್ಲಿ ಜೂನ್ 7ರಿಂದ ಮುಂಗಾರು ಮಳೆ ಆರಂಭವಾಗಲಿದ್ದು, ಈಗಾಗಲೇ ಸರ್ಕಾರ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಪೂರ್ವ ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿಸಿದೆ. ಕೇರಳದಲ್ಲಿ ಮಳೆಯಾದ ನಂತರದ ಕೆಲವು ದಿನಗಳಲ್ಲಿ ಮುಂಗಾರು ಬೆಂಗಳೂರಿನ ಮೇಲೆ ಪ್ರಭಾವ ತೋರಲಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮುಂಗಾರು ಪ್ರವೇಶವಾಗಲಿದ್ದು, ಜೂನ್4 ರಂದು ಬೆಂಗಳೂರಿನಲ್ಲಿ ಹೆಚ್ಚಿನ ಮಳೆಯಾಗುವುದಾಗಿ ಹವಾಮಾನ ಇಲಾಖೆ ಸೂಚನೆ ನೀಡಿದೆ.