ಮೋದಿ ಪ್ರಚಾರ ಮಾಡಿದರೂ ಬಿಜೆಪಿಗೆ ಬಹುಮತ ಬರಲ್ಲ; ಬಿಕೆ ಹರಿಪ್ರಸಾದ್
ಬೆಂಗಳೂರು, ಮೇ 01; ಕರ್ನಾಟಕದ ಚುನಾವಣಾ ಪ್ರಚಾರ ಕಣ ರಂಗೇರಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಕೈಗೊಂಡಿದ್ದಾರೆ. ಸಮಾವೇಶ, ರೋಡ್ ಶೋಗಳ ಮೂಲಕ ವಿವಿಧ ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಇದು ಪ್ರತಿಪಕ್ಷಗಳ ಮೇಲೆ ಪ್ರಭಾವ ಬೀರಲಿದೆಯೇ?
ನರೇಂದ್ರ ಮೋದಿ ಮೈತ್ರಿ ಸರ್ಕಾರ ಬೇಡ ಎಂದು ನೇರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. 'ಈ ಬಾರಿಯ ನಿರ್ಧಾರ ಸಂಪೂರ್ಣ ಬಹುಮತದ ಬಿಜೆಪಿ ಸರ್ಕಾರ' ಎಂದು ಕನ್ನಡದಲ್ಲಿಯೇ ಹಲವು ಬಾರಿ ಹೇಳುವ ಮೂಲಕ ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

ನರೇಂದ್ರ ಮೋದಿ ಚುನಾವಣಾ ಪ್ರಚಾರದ ಕುರಿತು ವಿಧಾನ ಪರಿಷತ್ ವಿಪಕ್ಷ ನಾಯಕ, ಕಾಂಗ್ರೆಸ್ ನಾಯಕ ಬಿ. ಕೆ. ಹರಿಪ್ರಸಾದ್ ಮಾತನಾಡಿದ್ದಾರೆ. ಪ್ರಜಾವಾಣಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.
ಮೋದಿ ಅವರ ಪ್ರಚಾರದಿಂದ ಕಾಂಗ್ರೆಸ್‌ಗೆ ಹಿನ್ನಡೆ ಆಗಲಿದೆಯೇ? ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಅವರು, "ನರೇಂದ್ರ ಮೋದಿ ಹಿಂದೆಯೂ ರಾಜ್ಯದಲ್ಲಿ ಪ್ರಚಾರ ಮಾಡಿದ್ದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರಚಾರ ನಡೆಸಿದ್ದರು. 2018ರ ಚುನಾವಣೆಯಲ್ಲಿಯೂ ಪ್ರಚಾರ ನಡೆಸಿದ್ದರು. ಆ ಯಾವ ಸಂದರ್ಭದಲ್ಲಿಯೂ ಬಿಜೆಪಿಗೆ ಬಹುಮತ ಲಭಿಸಿರಲಿಲ್ಲ. ಎಲ್. ಕೆ. ಅಡ್ವಾಣಿ ನೇತೃತ್ವ ವಹಿಸಿದ್ದಾಗ ಮಾತ್ರ ಬಿಜೆಪಿಗೆ 110 ಸ್ಥಾನ ಸಿಕ್ಕಿತ್ತು" ಎಂದು ಉತ್ತರ ನೀಡಿದ್ದಾರೆ.

ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಕಾಂಗ್ರೆಸ್‌ನ ಆಯ್ಕೆಗಳೇನು? ಎಂದು ಪ್ರಶ್ನಿಸಲಾಗಿದೆ. ಆಗ ಬಿ. ಕೆ. ಹರಿಪ್ರಸಾದ್, "ಈ ಬಾರಿ ಅತಂತ್ರ ಸ್ಥಿತಿ ಉದ್ಭವಿಸುವುದೇ ಇಲ್ಲ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಕರ್ನಾಟಕ ಜನರಿಗೆ ನಷ್ಟ. ಕೇವಲ ನಾಯಕರಿಗಷ್ಟೇ ಅದರಿಂದ ಲಾಭ ಆಗುತ್ತದೆ. ಇದನ್ನು ಅರಿತಿರುವ ಜನರು ಕಾಂಗ್ರೆಸ್‌ಗೆ ಬಹುಮತ ನೀಡುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೋದಿ ಚುನಾವಣಾ ಪ್ರಚಾರ; ಪ್ರಧಾನಿ ನರೇಂದ್ರ ಮೋದಿ ಶನಿವಾರ ಮತ್ತು ಭಾನುವಾರ ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ಅವರು, "ಕಾಂಗ್ರೆಸ್ ಮತ್ತು ಜೆಡಿಎಸ್ ಹೊರಗಿನಿಂದ ನೋಡಲು ಮಾತ್ರ ಬೇರೆ-ಬೇರೆ ಆದರೆ ಆಂತರಿಕವಾಗಿ ಒಂದೇ. ಜೆಡಿಎಸ್‌ಗೆ ನೀಡುವ ಒಂದೊಂದು ವೋಟು ಸಹ ಕಾಂಗ್ರೆಸ್‌ಗೆ ಸೇರುತ್ತದೆ. ಜೆಡಿಎಸ್ ಕಾಂಗ್ರೆಸ್‌ನ ಬಿ ಟೀಂ" ಎಂದು ಎರಡೂ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು.
ನರೇಂದ್ರ ಮೋದಿ "ಜೆಡಿಎಸ್ ಪಕ್ಷ 15 ಸೀಟು ಗೆದ್ದರೆ ನಾವೇ ಕಿಂಗ್ ಮೇಕರ್ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಇವರ ಸ್ವಾರ್ಥ ರಾಜಕೀಯದಿಂದ ಒಂದು ಕುಟುಂಬಕ್ಕೆ ಮಾತ್ರ ಲಾಭವಾಗುತ್ತದೆ. ಆದರೆ ರಾಜ್ಯದ ಅನೇಕ ಕುಟುಂಬಗಳಿಗೆ ನಷ್ಟವಾಗುತ್ತದೆ" ಎಂದು ಟೀಕಿಸಿದ್ದರು.
ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಮೋದಿ, "ಕಾಂಗ್ರೆಸ್ ಮಂದಿ ಈಗಲೂ ಸುಳ್ಳು ಗ್ಯಾರಂಟಿ ಹಿಡಿದು ಓಡಾಡುತ್ತಿದ್ದಾರೆ. ನಿಜವಾದ ಗ್ಯಾರಂಟಿ ಏನು ಗೊತ್ತೇ? ಕಿಸಾನ್ ಸಮ್ಮಾನ್ ನಿಧಿಯ 6,000 ಜೊತೆ ರಾಜ್ಯದ ಡಬಲ್ ಎಂಜಿನ್‌ನ 4,000 ಸೇರಿ ರೈತರಿಗೆ ಡಬಲ್ ಲಾಭವಾಗಿದೆ. ಇದು ಚುನಾವಣಾ ನಾಟಕವಲ್ಲ, ಬದಲಾಗಿ ರೈತರಿಗೆ ನಿಜವಾಗಿಯೂ ತಲುಪುತ್ತಿರುವ ಗ್ಯಾರಂಟಿ" ಎಂದು ಹೇಳಿದ್ದಾರೆ.
ಮಂಗಳವಾರ ನರೇಂದ್ರ ಮೋದಿ ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಅಂಕೋಲಾ, ಚಿತ್ರದುರ್ಗದಲ್ಲಿ ಪ್ರಚಾರ ನಡೆಸಲಿದ್ದಾರೆ. ಚಿತ್ರದುರ್ಗ ನಗರದ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯುವ ಸಮಾವೇಶದಲ್ಲಿ ಮೋದಿ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ.












Click it and Unblock the Notifications